ಅಮೆರಿಕದ 39ನೇ ಅಧ್ಯಕ್ಷ ಹಾಗೂ 100 ನೇ ಹುಟ್ಟುಹಬ್ಬವನ್ನು ಆಚರಿಸಿದ ಶತಾಯುಷಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ಇನ್ನಿಲ್ಲ

KannadaprabhaNewsNetwork |  
Published : Dec 31, 2024, 01:03 AM ISTUpdated : Dec 31, 2024, 04:16 AM IST
ಕಾರ್ಟರ್‌ | Kannada Prabha

ಸಾರಾಂಶ

ಅಮೆರಿಕದ 39ನೇ ಅಧ್ಯಕ್ಷ ಹಾಗೂ ಶತಾಯುಷಿ ಜಿಮ್ಮಿ ಕಾರ್ಟರ್‌ (100) ಅವರು ಭಾನುವಾರ ನಿಧನ ಹೊಂದಿದರು. ಅವರು ಅತಿ ಸುದೀರ್ಘ ಕಾಲ ಬಾಳಿದ ಮಾಜಿ ಅಧ್ಯಕ್ಷ ಎಂಬ ಖ್ಯಾತಿ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

 ವಾಷಿಂಗ್ಟನ್‌ : ಅಮೆರಿಕದ 39ನೇ ಅಧ್ಯಕ್ಷ ಹಾಗೂ ಶತಾಯುಷಿ ಜಿಮ್ಮಿ ಕಾರ್ಟರ್‌ (100) ಅವರು ಭಾನುವಾರ ನಿಧನ ಹೊಂದಿದರು. ಅವರು ಅತಿ ಸುದೀರ್ಘ ಕಾಲ ಬಾಳಿದ ಮಾಜಿ ಅಧ್ಯಕ್ಷ ಎಂಬ ಖ್ಯಾತಿ ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಕಾರ್ಟರ್‌ ಅವರು 4 ಮಕ್ಕಳು, 11 ಮೊಮ್ಮಕ್ಕಳು ಹಾಗೂ 14 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಈ ಹಿಂದೆಯೇ ನಿಧನ ಹೊಂದಿದ್ದರು. ಅವರ ಅಂತ್ಯಕ್ರಿಯೆ ಜ.9ರಂದು ವಾಷಿಂಗ್ಟನ್‌ನಲ್ಲಿ ನಡೆಯಲಿದೆ.

ಕಾರ್ಟರ್‌ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿ ವಿಶ್ವದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

1977ರಿಂದ 1981ರವರೆಗೆ ಕಾರ್ಟರ್‌ ಅಮೆರಿಕ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ಶೀತಲ ಸಮರ ಏರ್ಪಟ್ಟಿತ್ತು. ನಾಗರಿಕ ಹಕ್ಕುಗಳು ಹಾಗೂ ಲಿಂಗ ಸಮಾನತೆಯ ಹೋರಾಟವೂ ಅಮೆರಿಕ ಹಾಗೂ ವಿಶ್ವದಲ್ಲಿ ನಡೆದಿದ್ದವು. ಇರಾನ್‌ ಒತ್ತೆಯಾಳು ಬಿಕ್ಕಟ್ಟೂ ಇವರ ಕಾಲದಲ್ಲಾಗಿತ್ತು, ಈಜಿಪ್ಟ್ ಮತ್ತು ಇಸ್ರೇಲ್ ನಡುವಿನ 1978ರ ಶಾಂತಿ ಒಪ್ಪಂದಕ್ಕೆ ಇವರು ಮಧ್ಯಸ್ಥಿಕೆ ವಹಿಸಿದ್ದರು. ಅಲ್ಲದೆ, ಬಡದೇಶಗಳಿಗಾಗಿ ಇವರು ಅನೇಕ ಮಾನವೀಯ ನೆರವು ನೀಡಿದ್ದರು. ಈ ಕಾರಣಕ್ಕೆ 2002ರಲ್ಲಿ ಇವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಲಭಿಸಿತ್ತು.

ಕಡಲೆಕಾಯಿ ರೈತನಾಗಿದ್ದ ಕಾರ್ಟರ್‌

ಅಧ್ಯಕ್ಷರಾಗುವ ಮುನ್ನ ಕಾರ್ಟರ್‌ ಶೇಂಗಾ ಬೆಳೆಯುವ ರೈತನಾಗಿದ್ದರು ಹಾಗೂ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. 7 ವರ್ಷ ಅಮೆರಿಕ ನೌಕಾಪಡೆಯಲ್ಲಿದ್ದು ನಂತರ ರಾಜಕೀಯಕ್ಕೆ ಬಂದಿದ್ದರು

ಭಾರತದಲ್ಲಿದೆ ಕಾರ್ಟರ್‌ ಹೆಸರಲ್ಲಿನ ಹಳ್ಳಿ!

ತುರ್ತುಪರಿಸ್ಥಿತಿ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಖ್ಯಾತಿಗೆ ಜಿಮ್ಮಿ ಕಾರ್ಟರ್‌ ಪಾತ್ರರಾಗಿದ್ದರು. ಭಾರತದ ಸ್ನೇಹಿತ ಎಂಬ ಖ್ಯಾತಿ ಗಳಿಸಿದ್ದರು. 1978ರಲ್ಲಿ ಮೊರಾರ್ಜಿ ದೇಸಾಯಿ ಅವಧಿಯಲ್ಲಿ ಭಾರತಕ್ಕೆ ಬಂದಿದ್ದ ಅವರು ಭಾರತ-ಅಮೆರಿಕ ನಡುವಿನ ‘ದೆಹಲಿ ಘೋಷಣೆ’ ಒಪ್ಪಂದಕ್ಕೆ ಸಹಿ ಹಾಕಿದ್ದರು. ಭಾರತದ ಸಂಸತ್ತಿನಲ್ಲಿ ಮಾತನಾಡಿ ಪ್ರಜಾಪ್ರಭುತ್ವದ ಪ್ರತಿಪಾದನೆ ಮಾಡಿದ್ದರು ಹಾಗೂ ನಿರಂಕುಶಾಧಿಕಾರ ತಿರಸ್ಕರಿಸಿದ್ದರು. ಈ ವೇಳೆ ಅವರು ದೆಹಲಿ ಸಮೀಪದ ಹರ್ಯಾಣದ ದೌಲತ್‌ಪುರ್ ನಸೀರಾಬಾದ್‌ ಗ್ರಾಮಕ್ಕೆ ಪತ್ನಿ ಸಮೇತ ಭೇಟಿ ನೀಡಿದ್ದರು. ಅವರ ಭೇಟಿ ಬಳಿಕ ಗ್ರಾಮದ ಹೆಸರನ್ನು ‘ಕಾರ್ಟರ್‌ಪುರಿ’ ಎಂದು ಬದಲಿಸಲಾಗಿತ್ತು.

ಭಾರತದ ಜನರು ಪಡುವ ಬವಣೆಯನ್ನು ಅಮೆರಿಕನ್ನರೂ ಪಟ್ಟಿದ್ದರು ಎಂದಿದ್ದ ಅವರು ಭಾರತ ಜನರ ಏಳ್ಗೆಗೆ ಸಹಾಯ ಮಾಡುವ ಭರವಸೆ ನೀಡಿದ್ದರು.

PREV

Recommended Stories

ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ತೀವ್ರ ತಪರಾಕಿ!
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು