ನವದೆಹಲಿ: ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 26/11 ದಾಳಿಯ ಉಗ್ರ ತಹಾವುರ್ ರಾಣಾನನ್ನು ಎನ್‌ಐಎ 18 ದಿನ ತನ್ನ ಕಸ್ಟಡಿ ಪಡೆದಿದ್ದು, ಡಿಐಜಿ ಜಯ್ ರಾಯ್ ನೇತೃತ್ವದ ತಂಡ , ಶುಕ್ರವಾರ ದೆಹಲಿಯ ಎನ್‌ಐಎ ಪ್ರಧಾನ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಿಸಿದೆ.
ಎನ್ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ. ದಿನದ 24 ಗಂಟೆಯೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಎನ್‌ಐಎ ಕಚೇರಿ ಸುತ್ತಲೂ ಭಾರಿ ಬಿಗಿಭದ್ರತೆ ಹಮ್ಮಿಕೊಳ್ಳಲಾಗಿದೆ. ರಾಣಾ ಇರುವ ಸೆಲ್ 14/14 ವಿಸ್ತೀರ್ಣದ್ದಾಗಿದೆ ಹಾಗೂ ಸಿಸಿಟೀವಿ ಕ್ಯಾಮರಾ ಕಣ್ಗಾವಲಿನ ಜೊತೆಗೆ ಭದ್ರತಾ ಸಿಬ್ಬಂದಿಯ ಬಿಗಿ ಕಾವಲಿದೆ. ಅಲ್ಲದೇ ಈ ಕೊಠಡಿಯೊಳಗೆ ಎನ್‌ಐಎನ ಉನ್ನತ ಶ್ರೇಣಿಯ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನ್ಯಾಯಾಲಯ ನೀಡಿರುವ 18 ದಿನಗಳ ಕಸ್ಟಡಿ ಅವಧಿ ಮುಗಿಯುವ ತನಕ ರಾಣಾ ಇದೇ ಸೆಲ್‌ನಲ್ಲಿ ಇರಲಿದ್ದಾನೆ.
ಆತನಿಗೆ ಆಹಾರ ಮತ್ತು ಮೂಲಭೂತ ಅಗತ್ಯಗಳನ್ನು ಸೆಲ್‌ನೊಳಗೇ ಪೂರೈಕೆಯಾಗುತ್ತಿದೆ. ಇನ್ನು ಎನ್‌ಐಎ ಆವರಣದೊಳಗೆ ಆತನ ಚಲನವಲನಗಳು ಕಡಿಮೆ ಇರಲಿದೆ. ಎಲ್ಲಾ ವಿಚಾರಣೆಗಳು 3ನೇ ಮಹಡಿಯಲ್ಲಿರುವ ಸೆಲ್‌ನ ಪಕ್ಕದ ಕೋಣೆಯಲ್ಲಿ ನಡೆದಿದೆ. ಅಲ್ಲಿ 2 ಕ್ಯಾಮೆರಾಗಳು ವಿಚಾರಣೆಯನ್ನು ಚಿತ್ರೀಕರಿಸಲಿವೆ. ವಿಚಾರಣೆ ಮುಗಿದ ಬಳಿಕ ನೆಲಮಹಡಿಯ ಸೆಲ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ವಿಚಾರಣೆ ವೇಳೆ 26/11 ಉಗ್ರ ರಾಣಾ ಮೊಂಡಾಟ
ನವದೆಹಲಿ: ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 26/11 ದಾಳಿಯ ಉಗ್ರ ತಹಾವ್ವುರ್ ರಾಣಾನನ್ನು ಎನ್‌ಐಎ 18 ದಿನ ತನ್ನ ಕಸ್ಟಡಿಗೆ ಪಡೆದಿದ್ದು, ಡಿಐಜಿ ಜಯ್ ರಾಯ್ ನೇತೃತ್ವದ ತಂಡ ಶುಕ್ರವಾರ ದೆಹಲಿಯ ಎನ್‌ಐಎ ಪ್ರಧಾನ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಿಸಿದೆ. ಆದರೆ, ವಿಚಾರಣೆಗೆ ರಾಣಾ ಸಹಕರಿಸುತ್ತಿಲ್ಲ. ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಿಲ್ಲ. ಹೀಗಾಗಿ ಕೇವಲ 3 ತಾಸು ಮಾತ್ರ ವಿಚಾರಣೆ ನಡೆಯಿತು ಎಂದು ಮೂಲಗಳು ಹೇಳಿವೆ.
ಇತರ ನಗರಗಳ ಮೇಲೂ ದಾಳಿಗೆ ರಾಣಾ ಸಂಚು: ಎನ್‌ಐಎ
ನವದೆಹಲಿ : ಮುಂಬೈ ಮಾತ್ರವಲ್ಲ ಭಾರತದ ಇತರ ನಗರಗಳ ಮೇಲೂ ದಾಳಿಗೆ 26/11 ದಾಳಿಕೋರ ಉಗ್ರ ತಹಾವುರ್ ರಾಣಾ ಸಂಚು ರೂಪಿಸಿದ್ದ ಎಂದು ದಿಲ್ಲಿ ಕೋರ್ಟ್‌ಗೆ ವಿಶೇಷ ತನಿಖಾ ತಂಡ (ಎನ್ಐಎ) ಹೇಳಿದೆ.ಗುರುವಾರ ದೆಹಲಿಯ ಕೋರ್ಟ್‌ನಲ್ಲಿ ವಿಶೇಷ ನ್ಯಾ। ಚಂದ್ರಜೀತ್ ಸಿಂಗ್ ಅವರ ಸಮ್ಮುಖದಲ್ಲಿ ವಾದ ಮಂಡಿಸಿದ ಎನ್‌ಐಎ, ‘ಮುಂಬೈನಲ್ಲಿ ಮಾಡಿದ ದಾಳಿಯಂತೆ ಭಾರತದ ಇತರ ನಗರಗಳ ಮೇಲೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ರಾಣಾ ಸಂಚು ರೂಪಿಸಿದ್ದ’ ಎಂದು ಹೇಳಿದೆ. ಇದರ ಬೆನ್ನಲ್ಲೇ ರಾಣಾನನ್ನು ಕೋರ್ಟು 18 ದಿನ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.
ರಾಣಾ 2008ರಲ್ಲಿ ಮುಂಬೈ ದಾಳಿಗೆ ಮುನ್ನ ಮುಂಬೈ ಮಾತ್ರವಲ್ಲ, ಕೇರಳದ ಕೊಚ್ಚಿ ಹಾಗೂ ತಾಜ್ ಮಹಲ್ ಇರುವ ಆಗ್ರಾಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿತ್ತು. ಹೀಗಾಗಿ ಇಲ್ಲಿ ಕೂಡ ರಾಣಾ ದಾಳಿಗೆ ಸಂಚು ರೂಪಿಸಿದ್ದನೇ ಎಂಬುದು ಈಗ ವಿಚಾರಣೆ ವೇಳೆ ದೃಢಪಡುವ ಸಾಧ್ಯತೆ ಇದೆ.