4 ವಿಧಾನಸಭೆಗಳಿಗೂ ಲೋಕಸಭೆ ಜೊತೆಗೇ ಎಲೆಕ್ಷನ್‌

KannadaprabhaNewsNetwork | Updated : Mar 17 2024, 08:17 AM IST

ಸಾರಾಂಶ

ಅರುಣಾಚಲ, ಸಿಕ್ಕಿಂ, ಒಡಿಶಾ, ಆಂಧ್ರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಏ.19ರಿಂದ ಇಲ್ಲಿ ಮತದಾನ ಶುರುವಾಗಲಿದೆ. ಜೂ.4ಕ್ಕೆ ಎಲ್ಲೆಡೆ ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿ: ಲೋಕಸಭೆಯ 543 ಕ್ಷೇತ್ರಗಳ ಜೊತೆಜೊತೆಗೇ ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಶಾ, ಆಂಧ್ರ ಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ಇವುಗಳ ಫಲಿತಾಂಶ ಕೂಡ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದೇ ಪ್ರಕಟಗೊಳ್ಳಲಿದೆ.

ಅರುಣಾಚಲ ಪ್ರದೇಶ:ಅರುಣಾಚಲಪ್ರದೇಶದಲ್ಲಿ ಮುಖ್ಯಮಂತ್ರಿ ಪೆಮಾಖಂಡು ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಇಲ್ಲಿ ಏ.19, 2024ರಂದು ರಾಜ್ಯ ವಿಧಾನಸಭೆಯ 60 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇಲ್ಲಿ ಬಿಜೆಪಿ- ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ.

ಆಂಧ್ರಪ್ರದೇಶ: ವೈಎಸ್‌ಆರ್‌ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಆಂಧ್ರದಲ್ಲಿ ರಾಜ್ಯದ 175 ವಿಧಾನಸಭಾ ಕ್ಷೇತ್ರಗಳಿಗೆ ಮೇ 13ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಬಾರಿ ವೈಎಸ್‌ಆರ್‌ ಕಾಂಗ್ರೆಸ್‌ಗೆ ಟಿಡಿಪಿ-ಜನಸೇನಾ- ಬಿಜೆಪಿ ಮೈತ್ರಿಕೂಟ ತೀವ್ರ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ.

ಒಡಿಶಾ: 142 ವಿಧಾನಭಾ ಬಲ ಹೊಂದಿರುವ ಒಡಿಶಾ ವಿಧಾನಸಭೆಗೆ ಮೇ 13ರಿಂದ 4 ಹಂತದಲ್ಲಿ ಚುನಾವಣೆ ನಡೆಯಲಿದೆ. ಹಾಲಿ ಬಿಜು ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ ರಾಜ್ಯದಲ್ಲಿ ನಡೆಸುತ್ತಿದೆ.ಸಿಕ್ಕಿಂ:

ರಾಜ್ಯದ 32 ವಿಧಾನಸಭಾ ಕ್ಷೇತ್ರಗಳಿಗೆ ಏ.19ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಗುವುದು. ಹಾಲಿ ಇಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರ ನಡೆಸುತ್ತಿದೆ.

Share this article