;Resize=(412,232))
ನವದೆಹಲಿ: ಸಿಜೆಪಿಯ ಜಂತರ್‌ಮಂತರ್ ಪ್ರತಿಭಟನೆ ಹತ್ತಿಕ್ಕಲು ಶತಾಯಗತಾಯ ಪ್ರಯತ್ನಿಸುತ್ತಿರುವ ದೆಹಲಿ ಪೊಲೀಸರು ಜಿರಳೆ ಪಕ್ಷದ ಹೋರಾಟ ಬೆಂಬಲಿಸಿದ 4 ಮಾಜಿ ಮುಖ್ಯಮಂತ್ರಿಗಳಾದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಸಿಪಿಎಂನ ಪಿಣರಾಯಿ ವಿಜಯನ್ ಹಾಗೂ ತ್ರಿಪುರಾ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಶನಿವಾರ ಮಧ್ಯಾಹ್ನ ವಶಕ್ಕೆ ಪಡೆದು, ರಾತ್ರಿ ಬಿಡುಗಡೆ ಮಾಡಿದ್ದಾರೆ.
ಜಂತರ್‌ಮಂತರ್ ಪ್ರತಿಭಟನೆಯಲ್ಲಿ ಭಾಗಿಯಾಗಲು ಈ ನಾಲ್ಕೂ ಮಾಜಿ ಸಿಎಂಗಳು ಬಂದಿದ್ದರು. ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದ ವೇಳೆ ಮಮತಾ ಬಾಯಿಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರು. ಅಲ್ಲದೇ ‘ಸರ್ಕಾರ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದೆ’ ಎಂದು ಕೂಗಾಡಿದರು.
ಟಿಎಂಸಿ ನಾಯಕರಾದ ಡೆರೆಕ್ ಒ''''ಬ್ರೇನ್ ಮತ್ತು ಡೋಲಾ ಸೇನ್, ಎಡರಂಗದ ಎಂ. ಎ. ಬೇಬಿ, ಬೃಂದಾ ಕಾರಟ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಹೋರಾಟಗಾರ ಯೋಗೇಂದ್ರ ಯಾದವ್, ವಿದ್ಯಾರ್ಥಿ ನಾಯಕಿ ನೇಹಾ ಬೋರಾ, ದೀಪಾಂಕರ್ ಭಟ್ಟಾಚಾರ್ಯ ಅವರನ್ನೂ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಮಾತನಾಡಿದ ಕೇಜ್ರಿವಾಲ್, ‘ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದ್ದು. ನಾವು ಮೋದಿ ಆಡಳಿತದಲ್ಲಿ ಸರ್ವಾಧಿಕಾರಿ ಕಾನೂನಿನಲ್ಲಿ ಬದುಕುತ್ತಿದ್ದೇವೆ. ವಿಮಾನದಲ್ಲಿಯೇ ಅವರನ್ನು ತಡೆಯುವುದು ಸರ್ಕಾರದ ಭಯವನ್ನು ಸೂಚಿಸುತ್ತದೆ’ ಎಂದರು.
ದೆಹಲಿ ಪ್ರತಿಭಟನೆಯ ಹೈಡ್ರಾಮಗಳ ಮಧ್ಯೆಯೇ ಮುಂಬೈನಲ್ಲಿ ಸಿಜೆಪಿ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಸೇರಿ 200 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಷಾರ್ ತಮ್ಮ ಹಮ್ ಭಾರತ್ ಕೀ ಲೋಗ್ ಸಂಘಟನೆಯ ಮೂಲಕ ಇಲ್ಲಿನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮುಂಬೈ ಪೊಲೀಸರು ತುಷಾರ್ ಹಾಗೂ ಇತರ ಪೊಲೀಸರನ್ನೂ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.