ವಕೀಲಿಕೆ ಅನುಭವವಿಲ್ಲದೇ ಜಡ್ಜ್ ಆಗಲು ಸಾಧ್ಯವಿಲ್ಲ: ಸುಪ್ರೀಂ
==
ಸುಪ್ರೀಂ ಹೇಳಿದ್ದೇನು?ಜಡ್ಜ್ ಹುದ್ದೆಗೆ ಕಾನೂನು ಪದವೀಧರರ ನೇಮಕ ಹಲವು ತೊಂದರೆ ಸೃಷ್ಟಿಸಿದೆ
ಹೀಗಾಗಿ ಜಡ್ಜ್ ಆಗಲು ಕನಿಷ್ಠ 3 ವರ್ಷಗಲ ವಕೀಲಿಕೆ ನಡೆಸಿರುವುದು ಕಡ್ಡಾಯ
ಈ ಅನುಭವ ನ್ಯಾಯಾಂಗ ಅಧಿಕಾರಿಗಳ ಗುಣಮಟ್ಟ, ಸಿದ್ಧತೆಗೆ ನೆರವಾಗುತ್ತದೆ
ಹೊಸದಾಗಿ ಕಾನೂನು ಪದವಿ ಪಡೆದವರು ಕನಿಷ್ಠ 3 ವರ್ಷಗಳ ಕಾನೂನು ವೃತ್ತಿಯನ್ನು (ವಕೀಲಿಕೆಯನ್ನು) ಪೂರ್ಣಗೊಳಿಸದೆ ನ್ಯಾಯಾಂಗ ಸೇವೆಗಳ (ಜಡ್ಜ್) ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಆರಂಭಿಕ ಹಂತದ ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಮತ್ತು ಸುಧಾರಣೆಯನ್ನು ಕೋರಿ ಅಖಿಲ ಭಾರತ ನ್ಯಾಯಾಧೀಶರ ಸಂಘ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಮತ್ತು ನ್ಯಾ. ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಈ ತೀರ್ಪು ನೀಡಿದೆ.
ಭವಿಷ್ಯದ ನ್ಯಾಯಾಧೀಶರಿಗೆ ನ್ಯಾಯಾಲಯದ ಅನುಭವದ ಮಹತ್ವವನ್ನು ಪೀಠವು ತೀರ್ಪಿನ ವೇಳೆ ಒತ್ತಿ ಹೇಳಿದೆ. ‘ಹಲವಾರು ಹೈಕೋರ್ಟ್‌ಗಳು ಗಮನಿಸಿದಂತೆ, ಹೊಸ ಕಾನೂನು ಪದವೀಧರರ ನೇಮಕಾತಿಯು (ಜಡ್ಜ್ ಹುದ್ದೆಗೆ ನೇಮಕಾತಿ) ಅನೇಕ ತೊಂದರೆಗಳನ್ನು ಸೃಷ್ಟಿಸಿದೆ. ನ್ಯಾಯಾಂಗ ದಕ್ಷತೆ ಮತ್ತು ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಪ್ರಾಯೋಗಿಕ ಅನುಭವ ಅತ್ಯಗತ್ಯ’ ಎಂದಿದೆ.
ಷರತ್ತುಗಳು:
ತೀರ್ಪಿನ ಪ್ರಕಾರ, 3 ವರ್ಷಗಳ ವಕೀಲಿಕೆ ವೃತ್ತಿಯನ್ನು ಕನಿಷ್ಠ 10 ವರ್ಷ ವಕೀಲರಾಗಿ ಸೇವೆ ಸಲ್ಲಿಸಿದವರ ಬಳಿ ಮಾಡಬೇಕು ಹಾಗೂ ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ 10 ವರ್ಷ ಸೇವೆ ಸಲ್ಲಿಸಿದ ವಕೀಲರಿಂದ ಪ್ರಮಾಣಪತ್ರವನ್ನು ಒದಗಿಸಬೇಕು.ಇನ್ನು ಜಡ್ಜ್‌ಗಳ ಗುಮಾಸ್ತರಾಗಿ ನೇಮಕ ಆದವರು, ಗುಮಾಸ್ತ ಹುದ್ದೆ ವಹಿಸಿಕೊಳ್ಳುವ ಮುನ್ನ ಕನಿಷ್ಠ 1 ವರ್ಷದ ತರಬೇತಿ ಪಡೆದಿರಬೇಕು ಎಂದು ಕೋರ್ಟ್ ಸೂಚಿಸಿದೆ.