ಮೇ 19ರಂದು ಪಾಕ್ ಬಗ್ಗೆ ಸ್ಥಾಯಿ ಸಮಿತಿಗೆ ವಿಕ್ರಮ್‌ ಮಿಸ್ರಿ ಮಾಹಿತಿ

KannadaprabhaNewsNetwork | Published : May 13, 2025 11:55 PM
Follow Us

ಸಾರಾಂಶ

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೇ 19ರಂದು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಪಾಕಿಸ್ತಾನದೊಂದಿಗಿನ ಪರಿಸ್ಥಿತಿಯ ಬಗ್ಗೆ ವಿವರಿಸಲಿದ್ದಾರೆ.

ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮೇ 19ರಂದು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಪಾಕಿಸ್ತಾನದೊಂದಿಗಿನ ಪರಿಸ್ಥಿತಿಯ ಬಗ್ಗೆ ವಿವರಿಸಲಿದ್ದಾರೆ.

ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ ದಾಳಿ, ಎರಡೂ ದೇಶಗಳ ನಡುವಿನ ಸಂಘರ್ಷ ಮತ್ತು ನಂತರ ನಡೆದ ಕದನ ವಿರಾಮದ ಬಗ್ಗೆ ಮಿಸ್ರಿಯವರು ಮೇ 19ರಂದು ಸಮಿತಿಗೆ ಮಾಹಿತಿ ನೀಡಲಿದ್ದಾರೆ’ ಎಂದಿದ್ದಾರೆ.

ಬಾಂಗ್ಲಾದೇಶ ಮೊದಲಾದ ಭಾರತದ ನೆರೆಯ ದೇಶಗಳ ಬೆಳವಣಿಗೆಗಳು, ಕೆನಡಾದೊಂದಿಗಿನ ಸಂಬಂಧಗಳು ಸೇರಿದಂತೆ ಹಲವಾರು ವಿದೇಶಾಂಗ ವಿಷಯಗಳ ಕುರಿತು ಮಿಸ್ರಿ ನಿಯಮಿತವಾಗಿ ಸಮಿತಿಗೆ ವಿವರಣೆ ನೀಡುತ್ತಾ ಬಂದಿದ್ದಾರೆ.

==

ಸೆನ್ಸೆಕ್ಸ್‌ 1282 ಅಂಕಗಳ ಭಾರೀ ಕುಸಿತ: 81148 ಅಂಕಗಳಲ್ಲಿ ಮುಕ್ತಾಯ

ಮುಂಬೈ: ಸೋಮವಾರ 2975 ಅಂಕಗಳ ಭಾರೀ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 1282 ಅಂಕಗಳ ಭಾರೀ ಕುಸಿತ ಕಂಡು 81148 ಅಂಕಗಳಲ್ಲಿ ಮುಕ್ತಾಯವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 346 ಅಂಕ ಕುಸಿತ ಕಂಡು 24578ರಲ್ಲಿ ಅಂತ್ಯವಾಗಿದೆ. ಸೋಮವಾರ ಬಹುತೇಕ ಷೇರುಗಳ ಬೆಲೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಮಾರಾಟದ ಮೂಲಕ ಮಾರಾಟಕ್ಕೆ ಮುಂದಾಗಿದ್ದೇ, ಮಂಗಳವಾರ ಈ ಪ್ರಮಾಣ ಇಳಿಕೆಗೆ ಕಾರಣವಾಯ್ತು ಎನ್ನಲಾಗಿದೆ. ಐಟಿ, ಆಟೋಮೊಬೈಲ್‌, ಖಾಸಗಿ ವಲಯದ ಬ್ಯಾಂಕ್‌ಗಳ ಷೇರುಮೌಲ್ಯ ಭಾರೀ ಕುಸಿತ ಕಂಡಿತು.

==

11 ದಿನದ ದೇಶವ್ಯಾಪಿ ಬಿಜೆಪಿ ‘ತಿರಂಗಾ ಯಾತ್ರೆ’ಗೆ ಚಾಲನೆ

‘ಆಪರೇಷನ್ ಸಿಂದೂರ್’ ಯಶಸ್ಸಿನ ಹಿನ್ನೆಲೆ ಆಯೋಜನೆ

ನವದೆಹಲಿ: ‘ಆಪರೇಷನ್ ಸಿಂದೂರ್’ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ಸೈನ್ಯಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಬಿಜೆಪಿಯು ದೇಶಾದ್ಯಂತ 11 ದಿನಗಳ ಕಾಲ ‘ತಿರಂಗಾ ಯಾತ್ರೆ’ಯನ್ನು ಹಮ್ಮಿಕೊಂಡಿದೆ. ಮಂಗಳವಾರ ಯಾತ್ರೆ ಆರಂಭವಾಗಿದ್ದು, ಮೇ 23ರವರೆಗೆ ನಡೆಯಲಿದೆ.‘ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಹಿನ್ನೆಲೆಯಲ್ಲಿ ಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಯಾತ್ರೆ ಹೊಂದಿದೆ. ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲ. ಯಾತ್ರೆಯು ಬೃಹತ್ ಸಾರ್ವಜನಿಕ ಸಮಾರಂಭಗಳು, ಬೈಕ್ ರ್‍ಯಾಲಿಗಳು, ಧ್ವಜಾರೋಹಣ ಕಾರ್ಯಕ್ರಮಗಳು ಮತ್ತು ಆಪರೇಷನ್ ಸಿಂದೂರ್ ಯಶಸ್ಸಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ’ ಎಂದು ಬಿಜೆಪಿ ತಿಳಿಸಿದೆ.

==

ಪ್ರಧಾನಿ ಕಚೇರಿ ಹೆಸರಲ್ಲಿ ನೌಕಾ ಮಾಹಿತಿ ಪಡೆಯಲು ಯತ್ನಿಸಿದ್ದ ಮುಜೀಬ್‌ ಸೆರೆ

ತಿರುವನಂತಪುರಂ: ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ನೌಕಾಪಡೆ ಅಧಿಕಾರಿಗಳಿಗೆ ಮಾಡಿ ಐಎನ್‌ಎಸ್‌ ವಿಕ್ರಾಂತ್‌ ನೌಕೆಯ ಮಾಹಿತಿ ಪಡೆಯಲು ಯತ್ನಿಸಿದ ಕೇರಳದ ಕಲ್ಲಿಕೋಟೆ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಎಲತ್ತೂರು ನಿವಾಸಿ ಮುಜೀಬ್ ರೆಹಮಾನ್ ಬಂಧಿತ ಆರೋಪಿ. ಕಳೆದ ಶುಕ್ರವಾರ ನೌಕಾಪಡೆಗೆ ಕರೆ ಮಾಡಿ ರಾಘವ್ ಎಂದು ಪರಿಚಯಿಸಿಕೊಂಡು ಪ್ರಧಾನಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಬಳಿಕ ಐಎನ್‌ಎಸ್‌ ವಿಕ್ರಾಂತ್ ನೌಕೆಯನ್ನು ಎಲ್ಲಿ ನಿಯೋಜಿಸಲಾಗಿದೆ ಎಂದು ಕೇಳಿದ್ದಾನೆ. ಅನುಮಾನಗೊಂಡ ಅಧಿಕಾರಿಗಳು ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಬಂಧಿಸಲಾಗಿದೆ.