ಭಾರತದಲ್ಲಿ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಗೆ ಕಡಿವಾಣ?

KannadaprabhaNewsNetwork |  
Published : Jul 21, 2026, 01:45 AM ISTUpdated : Jul 21, 2026, 04:35 AM IST
Children

ಸಾರಾಂಶ

ಚಿಣ್ಣರ ಮಾನಸಿಕ ಆರೋಗ್ಯ ಮತ್ತು ಆನ್‌ಲೈನ್‌ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ನವದೆಹಲಿ: ಚಿಣ್ಣರ ಮಾನಸಿಕ ಆರೋಗ್ಯ ಮತ್ತು ಆನ್‌ಲೈನ್‌ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎಸ್. ಕೃಷ್ಣನ್, ‘ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ರಕ್ಷಣೆಗಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರವು ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಈ ವಿಷಯದಲ್ಲಿ ಇತರೆ ದೇಶಗಳು ತೆಗೆದುಕೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಲಾಗುತ್ತಿದೆ’ ಎಂದರು.

2025ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮೂಲಕ ಇಂಥ ಕ್ರಮ ಕೈಗೊಂಡ ಮೊದಲ ದೇಶ ಎನಿಸಿಕೊಂಡಿತ್ತು. ತಮ್ಮ ಇತ್ತೀಚಿನ ಆಸ್ಟ್ರೇಲಿಯಾ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆ ದೇಶದ ಕ್ರಮವನ್ನು ದೊಡ್ಡ ಮೈಲುಗಲ್ಲು ಎಂದು ಕರೆದಿದ್ದು, ‘ವಿಶ್ವಕ್ಕೇ ಸ್ಫೂರ್ತಿದಾಯಕ ನಡೆ’ ಎಂದು ಹಾಡು ಹೊಗಳಿದ್ದರು. ಭಾರತದಲ್ಲೂ ಇಂಥ ನಿಯಮ ತರುವುದರ ಸಂಕೇತ ಅದಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದಲ್ಲಿ ಈಗಾಗಲೇ ಬ್ಯಾನ್‌:

ಕರ್ನಾಟಕದಲ್ಲಿ 16ಕ್ಕಿಂತ ಕಡಿಮೆ ವಯಸ್ಸಿನವರು ಸೋಷಿಯಲ್‌ ಮೀಡಿಯಾ ಬಳಸದಂತೆ ಕಳೆದ ಮಾರ್ಚ್‌ನಲ್ಲೇ ನಿರ್ಬಂಧ ಹೇರಲಾಗಿದ್ದು, ಇಂಥ ಕ್ರಮ ಕೈಗೊಂಡ ಮೊದಲ ರಾಜ್ಯ ಎನಿಸಿಕೊಂಡಿತ್ತು. ಇದರ ಬೆನ್ನಲ್ಲೇ ಆಂಧ್ರಪ್ರದೇಶ ಕೂಡ ಇದೇ ಹಾದಿ ಹಿಡಿದಿತ್ತು.

ದಿಲ್ಲೀಲಿ ಗೃಹಲಕ್ಷ್ಮಿ ಮಾದರಿ ಸ್ಕೀಂ: ₹1000 ಕೈಗೆ, ₹1,500 ಆರ್‌ಡಿ

ಸಬಲೀಕರಣದ ಜತೆ ಉಳಿತಾಯಕ್ಕೆ ಬೆಂಬಲನವದೆಹಲಿ: ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ದೆಹಲಿ ಸರ್ಕಾರ ‘ದೆಹಲಿ ಲಕ್ಷ್ಮಿ ಯೋಜನೆ’ಯನ್ನು ಜಾರಿಗೆ ತರಲು ಮುಂದಾಗಿದೆ. ವಿಶೇಷವೆಂದರೆ, ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವುದರ ಜತೆಗೆ ಉಳಿತಾಯವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಸಿಗುವುದು ಬಾಕಿ ಇದೆ. ರಕ್ಷಾಬಂಧನದ (ಆಗಸ್ಟ್‌) ವೇಳೆ ಜಾರಿಗೆ ಬರುವ ನಿರೀಕ್ಷೆಯಿದೆ.ದೆಹಲಿ ಲಕ್ಷ್ಮಿಯ ಅಡಿ 21ರಿಂದ 60 ವರ್ಷದ ಸ್ತ್ರೀಯರ ಖಾತೆಗೆ 2,500 ರು. ಹಾಕಲಾಗುತ್ತದೆ. ಆದರೆ ಮಹಿಳೆಯರು ಅದರಲ್ಲಿ 1 ಸಾವಿರ ರು.ಅನ್ನಷ್ಟೇ ವಿತ್‌ಡ್ರಾ ಮಾಡಬಹುದು. ಉಳಿದ 1,500 ರು. ನೇರವಾಗಿ ಆವರ್ತಕ ಠೇವಣಿ(ಆರ್‌ಡಿ) ಖಾತೆಗೆ ಹೋಗಲಿದೆ. 3 ವರ್ಷಗಳ ಬಳಿಕ ಆ ಮೊತ್ತವು ಬಡ್ಡಿ ಸಮೇತ ಫಲಾನುಭವಿಗಳ ಖಾತೆಗೆ ಹೋಗಲಿದೆ. ಈ ಮೂಲಕ ಮಹಿಳೆಯರ ಕೈಗೆ ದುಡ್ಡನ್ನು ಕೊಡುವುದರ ಜತೆಗೆ, ಭವಿಷ್ಯಕ್ಕಾಗಿ ಉಳಿತಾಯ ಮಾಡುವಂತೆಯೂ ಅವರನ್ನು ಪ್ರೋತ್ಸಾಹಿಸುವುದು ಈ ವ್ಯವಸ್ಥೆಯ ಉದ್ದೇಶ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚುನಾವಣೆಗೂ ಮುನ್ನ ಮಹಿಳಾ ಸಮೃದ್ಧಿ ಯೋಜನೆ ಹೆಸರಿನಲ್ಲಿ ಮಹಿಳೆಯರಿಗೆ ಮಾಸಿಕ 2,500 ರು. ನೀಡುವುದಾಗಿ ಬಿಜೆಪಿ ಘೋಷಿಸಿತ್ತು. ಈಗ ಅದನ್ನೇ ದೆಹಲಿ ಲಕ್ಷ್ಮಿ ಯೋಜನೆ ಎಂದು ಬದಲಿಸಿದೆ.

ದೇಶದ ಮೊದಲ ಡೆಂಘೀ ಲಸಿಕೆ ಕ್ಯುಡೆಂಗಾಗೆ ಅನುಮತಿ 

ನವದೆಹಲಿ: ಪ್ರತಿವರ್ಷ ದೇಶಾದ್ಯಂತ ಲಕ್ಷಾಂತರ ಜನರನ್ನು ತೀವ್ರವಾಗಿ ಕಾಡುವ ಸೊಳ್ಳೆ ಕಡಿತದಿಂದ ಬರುವ ಮಹಾಮಾರಿಯಾದ ಡೆಂಘೀಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡ್ರಗ್‌ ಕಂಟ್ರೋಲ್‌ ಜನರಲ್‌ ಆಫ್‌ ಇಂಡಿಯಾವು (ಡಿಸಿಜಿಐ) ದೇಶದ ಮೊದಲ ಡೆಂಘೀ ವಿರೋಧಿ ಲಸಿಕೆ ಕ್ಯುಡೆಂಗಾ(QDENGA)ಗೆ ಅನುಮತಿ ನೀಡಿದೆ.ಟಕೆಡಾ ಬಯೋಫಾರ್ಮಾಸ್ಯುಟಿಕಲ್ಸ್‌ ಇಂಡಿಯಾ ಪ್ರೈವೇಟ್‌ ಲಿ. ಕಂಪನಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು 4ರಿಂದ 60 ವರ್ಷದೊಳಗಿನವರಿಗೆ ನೀಡಬಹುದಾಗಿದೆ.

ಈ ಹಿಂದೆ ಡೆಂಘೀಯಿಂದ ಬಾಧಿತರು ಮತ್ತು ಬಾಧಿತರಾಗದಿದ್ದವರಿಗೂ ಈ ಲಸಿಕೆ ನೀಡಬಹುದಾಗಿದೆ. ಇದಕ್ಕಾಗಿ ಯಾವುದೇ ಪೂರ್ವ ರಕ್ತ ಪರೀಕ್ಷೆಯ ಅಗತ್ಯವೂ ಇಲ್ಲ. ಹೀಗಾಗಿ ಡೆಂಘೀ ಪೀಡಿತ ಪ್ರದೇಶಗಳಲ್ಲಿ ಈ ಲಸಿಕೆ ನೀಡುವುದು ಸುಲಭವಾಗಲಿದೆ.ಕ್ಯುಡೆಂಗಾವನ್ನು ಮೊದಲ ಬಾರಿಗೆ 2022ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ 43 ದೇಶಗಳಲ್ಲಿ ಸುಮಾರು 32 ದಶಲಕ್ಷ ಡೋಸ್‌ನಷ್ಟು ಲಸಿಕೆಯನ್ನು ಈಗಾಗಲೇ ವಿತರಿಸಲಾಗಿದೆ. ಇದು ತಲಾ 0.5 ಎಂ.ಎಲ್‌ನಷ್ಟು 2 ಬಾರಿ ನೀಡುವ ಮುಂಜಾಗ್ರತಾ ಲಸಿಕೆಯಾಗಿದ್ದು, 3 ತಿಂಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ಪಡೆಯಬೇಕಿರುತ್ತದೆ.

ಕ್ಯುಡೆಂಗಾದ ಏಳು ವರ್ಷಗಳ ಅಂಕಿ-ಅಂಶಗಳು ಡೆಂಘೀ ಸೋಂಕಿನಿಂದ ಮಹತ್ವದ ರಕ್ಷಣೆ ನೀಡಿರುವುದು ಬೆಳಕಿಗೆ ಬಂದಿದೆ. ಡೆಂಘೀ ವೈರಸ್‌ನ ಎಲ್ಲಾ ನಾಲ್ಕು ತಳಿಗಳಿಂದ ಸಾರ್ವಜನಿಕರು ಆಸ್ಪತ್ರೆಗೆ ದಾಖಲಾಗುವುದನ್ನು ಲಸಿಕೆ ತಪ್ಪಿಸಿದೆ. ಹೀಗಾಗಿ ಇದನ್ನು ಸಮುದಾಯ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು ಎಂದು ಕರೆಯಲಾಗಿದೆ.ಸಂಶೋಧನೆ ಆಧರಿಸಿ ಅನುಮತಿ:

ಟಕೆಡಾದ ಅಂತಾರಾಷ್ಟ್ರೀಯ ಕ್ಲಿನಿಕಲ್‌ ಅಭಿವೃದ್ಧಿ ಕಾರ್ಯಕ್ರಮದ ಸಾಕ್ಷ್ಯಾಧಾರಗಳನ್ನು ಆಧರಿಸಿ ಭಾರತ ಈ ಲಸಿಕೆಗೆ ಅನುಮೋದನೆ ನೀಡಿದೆ. ಡೆಂಘೀ ಪೀಡಿತ ಮತ್ತು ಡೆಂಘೀ ಪೀಡಿತವಲ್ಲದ ಪ್ರದೇಶಗಳಲ್ಲಿನ 28 ಸಾವಿರಕ್ಕೂ ಹೆಚ್ಚು ಮಂದಿಯ ಮೇಲಿನ ಕ್ಲಿನಿಕಲ್‌ ಟ್ರಯಲ್‌ಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದರ ಜತೆಗೆ ಭಾರತದಲ್ಲೇ ನಡೆಸಲಾದ ಡೆನ್‌-302 ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗಳನ್ನೂ ಪರಿಗಣಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರಕ್ಕೆ ಜಿರಳೆ ಪಕ್ಷದ ಮೂರು ಬೇಡಿಕೆ
ಬೆಂಗ್ಳೂರು ಜೊತೆ ಡೀಲ್‌ಗೆ ಒತ್ತು ನೀಡಿದ್ದ ಬರ್ನ್‌ಹ್ಯಾಂ ಬ್ರಿಟನ್‌ ನೂತನ ಪ್ರಧಾನಿ