ಎಲೆಕ್ಟ್ರಿಕ್‌ ಕಾರು ಆಮದು ಸುಂಕ ಶೇ.15ಕ್ಕೆ ಇಳಿಕೆ

KannadaprabhaNewsNetwork |  
Published : Jun 03, 2025, 01:25 AM ISTUpdated : Jun 03, 2025, 04:09 AM IST
ಇವಿ ಕಾರ್ | Kannada Prabha

ಸಾರಾಂಶ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಯಡಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಚಿವರಾಗಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಯಡಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಚಿವರಾಗಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

‘ಕಂಪನಿಗಳು ಸ್ಥಳೀಯ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು 4,150 ಕೋಟಿ ರು. ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 8,000 ಎಲೆಕ್ಟ್ರಿಕ್ ಕಾರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಅರ್ಜಿ ಅನುಮೋದನೆ ದಿನಾಂಕದಿಂದ 5 ವರ್ಷಗಳ ಅವಧಿಗೆ, ಪ್ರಸ್ತುತ ಇರುವ ಶೇ.70-100 ಆಮದು ಸುಂಕದ ಬದಲಿಗೆ ಕೇವಲ ಶೇ.15ರಷ್ಟು ಕಡಿಮೆ ಆಮದು ಸುಂಕವನ್ನು ವಿಧಿಸಲಾಗುವುದು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

 ಕಳೆದ ವರ್ಷ ಮಾ.15ರಂದು ಯೋಜನೆಯನ್ನು ಪ್ರಕಟಿಸಲಾಗಿತ್ತು. ಸೋಮವಾರ ಬೃಹತ್ ಕೈಗಾರಿಕಾ ಸಚಿವಾಲಯ ವಿಸ್ತೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿಗಳು ಹೆಸರು ನೋಂದಾಯಿಸಿಕೊಳ್ಳಲು ಇನ್ನು 120 ದಿನಗಳ ಒಳಗೆ ಅರ್ಜಿ ಸ್ವೀಕೃತಿಯನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಕಾರು ಉತ್ಪಾದನೆಗೆ ಟೆಸ್ಲಾ ನಿರಾಸಕ್ತಿ: ಎಚ್‌ಡಿಕೆ

 ನವದೆಹಲಿ‘ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಅವರ ವಿದ್ಯುತ್ ಚಾಲಿತ ವಾಹನ (ಇವಿ) ತಯಾರಿಕಾ ಕಂಪನಿ ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸಲು ಆಸಕ್ತಿ ಹೊಂದಿಲ್ಲ. ಆದರೆ ದೇಶದಲ್ಲಿ ಶೋ ರೂಂಗಳನ್ನು ಆರಂಭಿಸಲು ಉತ್ಸುಕವಾಗಿದೆ’ ಎಂದು ಕೇಂದ್ರದ ಭಾರಿ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಉತ್ತೇಜಿಸುವ ಯೋಜನೆಯ ಮಾರ್ಗಸೂಚಿಗಳನ್ನು ಅನಾವರಣಗೊಳಿಸುವ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.‘ಟೆಸ್ಲಾ ಕಂಪನಿ ಭಾರತದಲ್ಲಿ ಶೋ ರೂಂಗಳನ್ನು ಪ್ರಾರಂಭಿಸಲು ಮಾತ್ರ ಹೆಚ್ಚು ಆಸಕ್ತಿ ಹೊಂದಿದೆ. ಅವರು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಆಸಕ್ತಿ ಹೊಂದಿಲ್ಲ’ ಎಂದರು.ಟೆಸ್ಲಾ ಕಂಪನಿಯು ಸುಂಕ ತಪ್ಪಿಸಲು ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಿದರೆ, ಅದು ಅಮೆರಿಕಕ್ಕೆ ಅನ್ಯಾಯ ಮಾಡಿದಂತೆ ಎಂದು ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಈ ನಡುವೆ, ‘ಇಲ್ಲಿಯವರೆಗೆ ದೇಶದಲ್ಲಿ ಕಾರು ಉತ್ಪಾದನೆಗೆ ಟೆಸ್ಲಾ ಆಸಕ್ತಿ ತೋರಿಸಿಲ್ಲ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಗಾಗಿ ಟೆಸ್ಲಾ ಪ್ರತಿನಿಧಿಯು ಮೊದಲ ಸುತ್ತಿನ ಪಾಲುದಾರರ ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿದ್ದಾರೆ. ಆದರೆ 2ನೇ ಮತ್ತು 3ನೇ ಸುತ್ತಿನ ಚರ್ಚೆಗಳಲ್ಲಿ ಭಾಗವಹಿಸಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಫೇಸ್‌ಬುಕ್ಕಲ್ಲಿ ರಾಜಕೀಯ ಜಾಹೀರಾತು ಸ್ಥಗಿತ: ಯುರೋಪ್‌ನಲ್ಲಿ ಜಾರಿ
ರಾಹುಲ್‌ ಗಾಂಧಿ 2ನೇ ಅಂಬೇಡ್ಕರ್‌: ಕಾಂಗ್ರೆಸ್‌ ನಾಯಕ ಉದಿತ್‌ ರಾಜ್