ಮನರೇಗಾ ಆಯ್ತು ಜಿ ರಾಮ್‌ ಜಿ!

KannadaprabhaNewsNetwork |  
Published : Dec 16, 2025, 01:45 AM IST
ನರೇಗಾ ಕಾರ್ಮಿಕರು | Kannada Prabha

ಸಾರಾಂಶ

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ-ಕಾಂಗ್ರೆಸ್‌ ನಡುವೆ ಸಂಘರ್ಷಕ್ಕೆ ಕಾರಣವಾಗಬಲ್ಲ ಇನ್ನೊಂದು ಮಸೂದೆಯನ್ನು ಮೋದಿ ಸರ್ಕಾರ ಸಿದ್ಧಪಡಿಸಿದೆ. ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ) ಯೋಜನೆ ಹೆಸರು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ ಯೋಜನೆ’ ಎಂದು ಮರುನಾಮಕರಣಕ್ಕೆ ನಿರ್ಧರಿಸಿತ್ತು. ಇದೀಗ ಯೋಜನೆಯ ಕಾಯ್ದೆಯ ಹೆಸರಲ್ಲಿ ಗಾಂಧೀಜಿ ಹೆಸರಿಗೆ ಕೊಕ್‌ ನೀಡಿ ‘ದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್‌ ಆ್ಯಂಡ್ ಅಜೀವಿಕಾ ಮಿಷನ್-ಗ್ರಾಮೀಣ-2025’ (ವಿಬಿ ಜಿ ರಾಮ್‌ ಜಿ - VB G RAM G) ಎಂಬ ಮಸೂದೆ ಮಂಡನೆಗೆ ನಿರ್ಧರಿಸಿದೆ.

- ಉದ್ಯೋಗ ಖಾತ್ರಿ ಹೆಸರು ಬದಲು । ಕೇಂದ್ರದ ಹೊಸ ಮಸೂದೆ । ಕಾಂಗ್ರೆಸ್‌ ಆಕ್ಷೇಪ- ನೆಹರೂ, ಇಂದಿರಾ ಬಳಿಕ ಈಗ ಗಾಂಧೀಜಿ ಹೆಸರೂ ಬಿಜೆಪಿಗೆ ಸಮಸ್ಯೆ: ಪ್ರಿಯಾಂಕಾ

---

ಖಾತ್ರಿ ಯೋಜನೆಯಲ್ಲಿ ಇನ್ನು

ಕೇಂದ್ರ 60, ರಾಜ್ಯ 40 ಪಾಲು

- ಕೇಂದ್ರದ ಅನುದಾನದ ಪಾಲಿನಲ್ಲಿ ಕಡಿತ

- ಸರ್ಕಾರದ ಕ್ರಮಕ್ಕೆ ವಿಪಕ್ಷಗಳ ಆಕ್ರೋಶ

ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಎಂಜಿ-ನರೇಗಾ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಇದರಲ್ಲಿ ಕೌಶಲ್ಯರಹಿತ ಕಾರ್ಮಿಕರ ಶೇ.100ರಷ್ಟು ವೇತನವನ್ನು ಕೇಂದ್ರವೇ ಭರಿಸುತ್ತಿತ್ತು. ಕೌಶಲ್ಯಪೂರ್ಣ ಕಾರ್ಮಿಕರ ನೇಮಕ ಹಾಗೂ ಇತರ ಕೆಲವು ಖರ್ಚು ವೆಚ್ಚಗಳಲ್ಲಿ- ರಾಜ್ಯ ಸರ್ಕಾರಗಳು ವೆಚ್ಚದ 1 ಸಣ್ಣ ಭಾಗವನ್ನು ಭರಿಸುತ್ತಿದ್ದವು.

ಆದರೆ ‘ಜಿ ರಾಮ್ ಜಿ’ ಯೋಜನೆಯಡಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳಬೇಕಾಗಿ ಬರಲಿದೆ. ಈ ಅನುಪಾತವು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ 90:10 (ಶೇ.90 ಕೇಂದ್ರ, ಶೇ.10 ರಾಜ್ಯ) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.100 (ಅರ್ಥಾತ್‌ ಕೇಂದ್ರ ಸರ್ಕಾರ ಶೇ.100) ಇರುತ್ತದೆ. ವಾರ್ಷಿಕವಾಗಿ 1.51 ಲಕ್ಷ ಕೋಟಿ ರು. ಪ್ರಸ್ತಾವಿತ ವೆಚ್ಚದಲ್ಲಿ, ಕೇಂದ್ರವು 95,692 ಕೋಟಿ ರು. ಭರಿಸುತ್ತದೆ.

ಉದ್ಯೋಗ ಖಾತ್ರಿ ಯೋಜನಾ ವೆಚ್ಚದಲ್ಲಿನ ಕೇಂದ್ರದ ಪಾಲು ಕಡಿತ ಹಾಗೂ ರಾಜ್ಯದ ಪಾಲು ಹೆಚ್ಚಳಕ್ಕೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ಕಿಡಿಕಾರಿದ್ದಾರೆ, ‘ಈಗಾಗಲೇ ತೆರಿಗೆಯಲ್ಲಿನ ರಾಜ್ಯಗಳ ಪಾಲು ಕಡಿತ ಮಾಡಲಾಗಿದೆ. ಇದೀಗ ಖಾತ್ರಿ ಯೋಜನೆಯಲ್ಲಿನ ಕೇಂದ್ರೀಯ ಪಾಲು ಕಮ್ಮಿ ಮಾಡಿ ರಾಜ್ಯಗಳಿಗೆ ಹೊರೆ ವರ್ಗಾಯಿಸಲಾಗುತ್ತಿದೆ. ಯೋಜನೆಯ ಚೌಕಟ್ಟಿಗೇ ಭಂಗ ತರಲಾಗಿದೆ’ ಎಂದಿದ್ದಾರೆ.

==

ಗಾಂಧಿ ಹೆಸರಿಗೆ ಕೊಕ್‌ ಏಕೆ

ಮಹಾತ್ಮ ಗಾಂಧಿಯವರ ಹೆಸರನ್ನು ಅವರು ಏಕೆ ತೆಗೆದುಹಾಕುತ್ತಿದ್ದಾರೆ? ಅವರನ್ನು ಭಾರತದ ಅತಿದೊಡ್ಡ ನಾಯಕ ಎಂದು ಪರಿಗಣಿಸಲಾಗುತ್ತದೆ. ಯೋಜನೆಗಳ ಹೆಸರು ಬದಲಾದಾಗಲೆಲ್ಲಾ, ಕಡತಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಹಾಗೂ ಅಪಾರ ಖರ್ಚು ಆಗುತ್ತದೆ. ಇದು ಜನರ ಹಣ ಪೋಲು.

ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ಸಂಸದೆ

==

ಮಸೂದೆಯಲ್ಲಿ ಏನಿದೆ?

ಎಂ-ನರೇಗಾ ಯೋಜನೆ ಸಂಬಂಧಿತ ಕಾಯ್ದೆಯ ಹೆಸರೇ ಜಿ ರಾಮ್‌ ಜಿ ಎಂದು ಬದಲು

ಹೊಸ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ ಉದ್ಯೋಗದ ಖಾತ್ರಿ 100ರಿಂದ 125ಕ್ಕೇರಿಕೆ

ಕೆಲಸ ಮುಗಿದ 15 ದಿನದಲ್ಲಿ ಕಾರ್ಮಿಕರಿಗೆ ಕೂಲಿ ಪಾವತಿ ಕಡ್ಡಾಯ. ಇಲ್ಲದಿದ್ದರೆ ಭತ್ಯೆ

ನಕಲಿ ಕೂಲಿ ಕಾರ್ಮಿಕರ ಸೃಷ್ಟಿ ತಡೆಗೆ ಬಯೋಮೆಟ್ರಿಕ್ಸ್, ಜಿಯೋಟ್ಯಾಗಿಂಗ್ ವ್ಯವಸ್ಥೆ

==ಪಿಟಿಐ ನವದೆಹಲಿ

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಬಿಜೆಪಿ-ಕಾಂಗ್ರೆಸ್‌ ನಡುವೆ ಸಂಘರ್ಷಕ್ಕೆ ಕಾರಣವಾಗಬಲ್ಲ ಇನ್ನೊಂದು ಮಸೂದೆಯನ್ನು ಮೋದಿ ಸರ್ಕಾರ ಸಿದ್ಧಪಡಿಸಿದೆ. ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ) ಯೋಜನೆ ಹೆಸರು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ ಯೋಜನೆ’ ಎಂದು ಮರುನಾಮಕರಣಕ್ಕೆ ನಿರ್ಧರಿಸಿತ್ತು. ಇದೀಗ ಯೋಜನೆಯ ಕಾಯ್ದೆಯ ಹೆಸರಲ್ಲಿ ಗಾಂಧೀಜಿ ಹೆಸರಿಗೆ ಕೊಕ್‌ ನೀಡಿ ‘ದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್‌ ಆ್ಯಂಡ್ ಅಜೀವಿಕಾ ಮಿಷನ್-ಗ್ರಾಮೀಣ-2025’ (ವಿಬಿ ಜಿ ರಾಮ್‌ ಜಿ - VB G RAM G) ಎಂಬ ಮಸೂದೆ ಮಂಡನೆಗೆ ನಿರ್ಧರಿಸಿದೆ.

2005ರಲ್ಲಿ ಆರಂಭವಾದ ಎಂಜಿ-ನರೇಗಾ ಯೋಜನೆ ಒಂದು ವಿತ್ತೀಯ ವರ್ಷದಲ್ಲಿ 100 ದಿನಗಳ ಕೂಲಿಯನ್ನು ಖಚಿತಪಡಿಸುತ್ತಿತ್ತು. ಆದರೆ ‘ಜಿ ರಾಮ್‌ ಜಿ’ ವಿಧೇಯಕ 125 ದಿನಗಳ ಕೂಲಿಯನ್ನು ಖಾತರಿಪಡಿಸುತ್ತದೆ. ಮಸೂದೆಯು 2047ನೇ ಇಸವಿಗೆ ವಿಕಸಿತ ಭಾರತ ಸೃಷ್ಟಿಸುವ ಗುರಿ ಹೊಂದಿದೆ ಎಂದು ಸರ್ಕಾರ ಹೇಳಿದೆ. ಇದರ ಮಂಡನೆ ವೇಳೆ ತನ್ನ ಎಲ್ಲ ಸದಸ್ಯರು ಸದನದಲ್ಲಿರಬೇಕು ಎಂದು ವಿಪ್‌ ಜಾರಿ ಮಾಡಿದೆ.

ಆದರೆ ಮಹಾತ್ಮಾ ಗಾಂಧಿ ಹೆಸರನ್ನು ಮಸೂದೆಯಿಂದ ಕೈಬಿಟ್ಟಿರುವುದು ಕಾಂಗ್ರೆಸ್‌ ಕೆಂಗಣ್ಣಿಗೆ ಕಾರಣವಾಗಿದೆ. ‘ಈವರೆಗೆ ನೆಹರು, ಇಂದಿರಾ ಬಗ್ಗೆ ಅಸಡ್ಡೆ ಹೊಂದಿದ್ದ ಬಿಜೆಪಿ, ಈಗ ಮಹಾತ್ಮಾ ಗಾಂಧಿ ಬಗ್ಗೆಯೂ ಅಸಡ್ಡೆ ಪ್ರದರ್ಶಿಸುತ್ತಿದೆ’ ಎಂದು ಕಿಡಿಕಾರಿದೆ.

ಮಸೂದೆಯಲ್ಲೇನಿದೆ?:

2005ರಲ್ಲಿ ಅಂದಿನ ಯುಪಿಎ ಸರ್ಕಾರ ಪ್ರಾರಂಭಿಸಿದ ಎಂಜಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ.. ಹೊಸ ಮಸೂದೆ ಉದ್ಯೋಗ ಖಾತರಿ ದಿನಗಳನ್ನು 125ಕ್ಕೆ ಹೆಚ್ಚಿಸುತ್ತದೆ.

ಕೆಲಸ ಮುಗಿದ ಒಂದು ವಾರ ಅಥವಾ 15 ದಿನಗಳ ಒಳಗೆ ಕಾರ್ಮಿಕರಿಗೆ ಕೂಲಿ ನೀಡಬೇಕು. ಗಡುವಿನೊಳಗೆ ಪಾವತಿ ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಸಹ ಅವಕಾಶವಿದೆ.

ಹೊಸ ಮಸೂದೆಯು, ಯೋಜನೆಯಲ್ಲಿನ ಕೆಲಸವನ್ನು ‘ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ’- ಈ ರೀತಿ 4 ವಿಭಾಗಗಳಾಗಿ ವಿಂಗಡಿಸಿದೆ.

ನಕಲಿ ಕೂಲಿ ಕಾರ್ಮಿಕರ ಸೃಷ್ಟಿ ಮಾಡಿ ಕೂಲಿ ಹಣ ಪಡೆಯುವುದನ್ನು ತಪ್ಪಿಸಲು ಹಾಗೂ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು, ಬಯೋಮೆಟ್ರಿಕ್ಸ್ ಮತ್ತು ಜಿಯೋಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ. ವಿವಿಧ ಹಂತಗಳಲ್ಲಿ ಕುಂದುಕೊರತೆ ಪರಿಹಾರದ ಅವಕಾಶವೂ ಇದೆ.

ಪ್ರಿಯಾಂಕಾ ಕಿಡಿ:

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸುವುದರ ಹಿಂದಿನ ಉದ್ದೇಶವೇನೆಂದು ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

‘ಮಹಾತ್ಮ ಗಾಂಧಿಯವರ ಹೆಸರನ್ನು ಅವರು ಏಕೆ ತೆಗೆದುಹಾಕುತ್ತಿದ್ದಾರೆ? ಅವರನ್ನು ಭಾರತದ ಅತಿದೊಡ್ಡ ನಾಯಕ ಎಂದು ಪರಿಗಣಿಸಲಾಗುತ್ತದೆ. ಯೋಜನೆಗಳ ಹೆಸರು ಬದಲಾದಾಗಲೆಲ್ಲಾ, ಕಡತಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಹಾಗೂ ಅಪಾರ ಖರ್ಚು ಆಗುತ್ತದೆ. ಇದು ಜನರ ಹಣ ಪೋಲು’ ಎಂದರು.

ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಕೂಡ ಆಕ್ಷೇಪಿಸಿ, ‘ಬಿಜೆಪಿಗೆ ಈ ಹಿಂದೆ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಜತೆ ಸಮಸ್ಯೆ ಇತ್ತು. ಈಗ ದೇಶವು ಬಾಪು ಬಗ್ಗೆ ಸಮಸ್ಯೆ ಎದುರಿಸುತ್ತಿದೆ ಎಂದು ನೋಡುತ್ತಿದೆ. ಸರ್ಕಾರವು ಕೇವಲ ಹೆಸರುಗಳನ್ನು ಬದಲಾಯಿಸುವತ್ತ ಗಮನಹರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ