ನವದೆಹಲಿ: ‘ಪೇಪರ್ ಸೋರಿಕೆ ತಡೆಯಲು ಸರ್ಕಾರವು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಯುವಕರ ಭವಿಷ್ಯದ ಜೊತೆ ಆಟ ಆಡುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಂಗಳವಾರ ಗುಡುಗಿದ್ದಾರೆ.
ನೀಟ್ ಹಾಗೂ ನೆಟ್ ಅಕ್ರಮದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಕೇಳಿ ರಾಹುಲ್ ಗಾಂಧಿ ಪತ್ರ ಬರೆದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಸಭೆಯಲ್ಲಿ ಮಾತನಾಡಿದ ಮೋದಿ, ‘ನೀಟ್ ಅಕ್ರಮಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ರಾಷ್ಟ್ರಪತಿಗಳೂ ಕಳವಳ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಯುವಕರ ಜೀವನದೊಂದಿಗೆ ಚೆಲ್ಲಾಟ ಆಡುವವರನ್ನು ಸುಮ್ಮನೆ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಕಠಿಣ ಕಾನೂನುಗಳನ್ನು ರೂಪಿಸಿದ್ದು, ಪರೀಕ್ಷೆ ನಡೆಸುವ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಭರವಸೆ ನೀಡಿದರು.
ನೀಟ್ ಹಾಗೂ ನೆಟ್ ಅಕ್ರಮಗಳು ಬೆಳಕಿಗೆ ಬಂದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನಿರ್ದೇಶಕ ಸುಬೋಧ್ ಸಿಂಗ್ ಅವರನ್ನು ತೆಗೆದುಹಾಕಿ ಇಸ್ರೋ ಮುಖ್ಯಸ್ಥ ಆರ್. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.==
ನೀಟ್-ಪಿಜಿ ಪರೀಕ್ಷೆ: 2 ತಾಸಿನ ಮೊದಲು ಪ್ರಶ್ನೆಪತ್ರಿಕೆ ಸಿದ್ಧತೆನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿನ ನೀಟ್-ಪಿಜಿ ಪರೀಕ್ಷೆಯನ್ನು ಇದೇ ತಿಂಗಳ ನಡೆಸಲಾಗುವುದು ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಶುರುವಾಗುವ 2 ಗಂಟೆಗಳ ಮೊದಲು ತಯಾರಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.ಗೃಹ ಸಚಿವ ಅಮಿತ್ ಶಾ ಸರ್ಕಾರದ ಸೈಬರ್ ಅಪರಾಧ ವಿರೋಧಿ ಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾದ ಬೆನ್ನಲ್ಲೇ ಈ ಮಾಹಿತಿ ಲಭಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಯಾದ ಶಂಕೆಯಿಂದ ಜೂ.23ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ವಿದ್ಯಾರ್ಥಿಗಳ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.==
ಸಿಜೆಐ ಪೀಠದಿಂದ ಜು.8ಕ್ಕೆ ನೀಟ್ ವಿವಾದದ ವಿಚಾರಣೆನವದೆಹಲಿ: ನೀಟ್-ಯುಜಿ ಪರೀಕ್ಷಾ ಅಕ್ರಮದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಜು.8ಕ್ಕೆ ನಡೆಯಲಿದ್ದು, ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್, ನ್ಯಾ। ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ। ಮನೋಜ್ ಮಿಶ್ರಾ ಅವರಿರುವ ತ್ರಿಸದಸ್ಯ ಪೀಠ ರಚನೆಯಾಗಿದೆ.ವಿವಿಧ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಡೆದಿತ್ತು ಹಾಗೂ 1500 ಪರೀಕ್ಷಾರ್ಥಿಗಳಿಗೆ ಗ್ರೇಸ್ ಅಂಕ ನೀಡಿದ್ದು ವಿವಾದಕ್ಕೀಡಾಗಿತ್ತು. ಹೀಗಾಗಿ ಇವನ್ನು ಪ್ರಶ್ನಿಸಿ ಪೀಠಕ್ಕೆ ಸಾಕಷ್ಟು ಅರ್ಜಿಗಳು ದಾಖಲಾಗಿದ್ದವು. ಅರ್ಜಿದಾರರು ಸುಪ್ರೀಂ ಕೋರ್ಟ್ ಉಸ್ತುವಾರಿಯ ತನಿಖೆ ಹಾಗೂ ಪರೀಕ್ಷಾ ರದ್ದತಿ ಕೋರಿದ್ದರು.
ಇದೀಗ ವಿಚಾರಣೆಯನ್ನು ಸಿಜೆಐ ಒಳಗೊಂಡ ಮೂರು ಸದಸ್ಯರ ಪೀಠ ನಡೆಸಲಿದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.