ನವದೆಹಲಿ: ಏಪ್ರಿಲ್ ತಿಂಗಳಿನಲ್ಲಿ 2.43 ಲಕ್ಷ ಕೋಟಿ ರು.ನಷ್ಟು ಸರಕು ಮತ್ತು ಸಾಗಣೆ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇದು 2017ರಲ್ಲಿ ದೇಶದಲ್ಲಿ ಜಿಎಸ್ಟಿ ಪದ್ಧತಿ ಆರಂಭಿಸಿದ ಬಳಿಕ ದಾಖಲಾದ ಅತಿ ಹೆಚ್ಚಿನ ಪ್ರಮಾಣದ ತೆರಿಗೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ 2.23 ಲಕ್ಷ ಕೋಟಿ ರು.ದಾಖಲಾಗಿದ್ದು ಇದುವರೆಗೆ ಗರಿಷ್ಠವಾಗಿತ್ತು.
ಎಂದಿನಂತೆ 22929 ಕೋಟಿ ರು. ತೆರಿಗೆ ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಹಲವು ವರ್ಷಗಳಿಂದ 2ನೇ ಸ್ಥಾನದ್ದಲ್ಲಿದ್ದ ಕರ್ನಾಟಕ 9958 ಕೋಟಿ ರು.ನೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ. 10178 ಕೋಟಿ ತೆರಿಗೆ ಸಂಗ್ರಹಿಸಿರುವ ಉತ್ತರಪ್ರದೇಶ 2ನೇ ಸ್ಥಾನಕ್ಕೆ ಏರಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹೊರತಾಗಿಯೂ ಏಪ್ರಿಲ್ ತಿಂಗಳಿನಲ್ಲಿ 2.43 ಲಕ್ಷ ಕೋಟಿ ರು.ಜಿಎಸ್ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.8.7ರಷ್ಟು ಹೆಚ್ಚಾಗಿದೆ. ಆದರೆ ಏಪ್ರಿಲ್ ತಿಂಗಳ ವಿಶೇಷವೆಂದರೆ, ದೇಶೀಯ ವಹಿವಾಟಿಗಿಂತ ಆಮದು ಆಧರಿತ ಆದಾಯವೇ ಈ ಸಲ ಹೆಚ್ಚು ದಾಖಲಾಗಿದೆ.
ದೇಶೀಯ ವಹಿವಾಟಿನ ಮೂಲಕ ಸಂಗ್ರಹಿಸಿದ ತೆರಿಗೆಯಲ್ಲಿ ಶೇ.4.3ರಷ್ಟು ಏರಿಕೆಯಾಗಿ 1.85 ಲಕ್ಷ ಕೋಟಿ ರು. ಸಂಗ್ರಹವಾಗಿದ್ದರೆ, ಆಮದು ಮೇಲಿನ ತೆರಿಗೆಯಲ್ಲಿ ಶೇ.25.8ರಷ್ಟು ಭಾರೀ ಏರಿಕೆಯಾಗಿ 57580 ಕೋಟಿ ರು.ತೆರಿಗೆ ಸಂಗ್ರಹವಾಗಿದೆ.