ಕೇರಳದ 2 ದೇಗುಲದಲ್ಲಿ ಆನೆ ಪುಂಡಾಟ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

KannadaprabhaNewsNetwork |  
Published : May 02, 2026, 01:45 AM IST
ಆನೆ | Kannada Prabha

ಸಾರಾಂಶ

ದೇವಸ್ಥಾನಕ್ಕೆ ಕರೆತಂದ ಆನೆಗಳು ಪುಂಡಾಟಿಕೆ ತೋರಿದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ 2 ಪ್ರತ್ಯೇಕ ಘಟನೆಗಳು ಕೇರಳದ ಕಿಡಂಗೂರು ಮತ್ತು ಇರಿಂಜಲಕುಡದಲ್ಲಿ ಶುಕ್ರವಾರ ನಡೆದಿವೆ.

ಕೊಚ್ಚಿ: ದೇವಸ್ಥಾನಕ್ಕೆ ಕರೆತಂದ ಆನೆಗಳು ಪುಂಡಾಟಿಕೆ ತೋರಿದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ 2 ಪ್ರತ್ಯೇಕ ಘಟನೆಗಳು ಕೇರಳದ ಕಿಡಂಗೂರು ಮತ್ತು ಇರಿಂಜಲಕುಡದಲ್ಲಿ ಶುಕ್ರವಾರ ನಡೆದಿವೆ. ಕಿಡಂಗೂರು ದೇವಸ್ಥಾನಕ್ಕೆ ಆನೆಯೊಂದನ್ನು ಲಾರಿಯಲ್ಲಿ ಕರೆತರಲಾಗಿತ್ತು. ಅದು ದಾಳಿ ನಡೆಸಿ ಲಾರಿಯ ಚಾಲಕ ಸಾವನ್ನಪ್ಪಿದ್ದರೆ, ಮುಖ್ಯ ಮಾವುತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರು ಹಾಗೂ ಹಲವು ವಾಹನಗಳು ಜಖಂ ಆಗಿವೆ. 2 ಗಂಟೆಗಳ ಪುಂಡಾಟಿಕೆ ಬಳಿಕ, ಪಶುವೈದ್ಯರು ಬಂದು ಆನೆಯನ್ನು ಶಾಂತಗೊಳಿಸಿದ್ದಾರೆ. ಇರಿಂಜಲಕುಡದ ಶ್ರೀ ಕೂಡಲ್ಮಾಣಿಕ್ಯಂ ದೇವಸ್ಥಾನದಲ್ಲಿ ಜಾತ್ರೆ ನಡೆದಿತ್ತು. ಇದಕ್ಕಾಗಿ ಆನೆಯನ್ನು ಕರೆತರಲಾಗಿತ್ತು. ಅದು ಸಹ ಮದವೇರಿ ಒಬ್ಬ ಮಾವುತನನ್ನು ಬಲಿ ಪಡೆದಿದೆ. ಮುಖ್ಯ ಮಾವುತ ಗಾಯಗೊಂಡಿದ್ದಾರೆ.

==

ಭರ್ಜರಿ ₹1745 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆದ ಮುಂಬೈ ಎನ್ಸಿಬಿ

ನವದೆಹಲಿ: ಮುಂಬೈನಲ್ಲಿ ಪ್ರಮುಖವಾದ ಮಾದಕದ್ರವ್ಯ ವರ್ತುಲವೊಂದನ್ನು ಭೇದಿಸಿರುವ ಮಾದಕದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ₹1,745 ಕೋಟಿ ಮೌಲ್ಯದ ಉನ್ನತ ದರ್ಜೆಯ ಕೊಕೇನ್‌ ಜಪ್ತಿ ಮಾಡಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಸಣ್ಣ ಸಾಗಣೆ ಸರಕಿನ ಕೊಂಡಿ ಮೂಲಕ ದೊಡ್ಡ ಮಾದಕದ್ರ್ಯ ಜಾಲ ಪತ್ತೆ ಮಾಡಿದ ಎನ್‌ಸಿಬಿ ಕಾರ್ಯ ಕೆಳಗಿಂದ ಮೇಲಿನ ಹಂತಕ್ಕೆ ಸಾಗುವ ಒಂದು ಉತ್ತಮ ಉದಾಹರಣೆ. ಇಂತಹ ಅದ್ಭುತ ಯಶಸ್ಸಿಗೆ ಎನ್‌ಸಿಬಿಯನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದ್ದಾರೆ.

==

ಮೇನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ, ಹೆಚ್ಚು ಉಷ್ಣಾಂಶ: ಐಎಂಡಿ

ನವದೆಹಲಿ: ಈ ಬಾರಿಯ ಮೇ ತಿಂಗಳಲ್ಲಿ ಭಾರತದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುವ ನಿರೀಕ್ಷೆ ಇದೆ. ಮೇ 14-16ರ ವೇಳೆಗೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ ಮುಂಗಾರು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಹಿಮಾಲಯದ ತಪ್ಪಲು, ಪೂರ್ವ ಕರಾವಳಿ ರಾಜ್ಯಗಳು, ಗುಜರಾತ್‌, ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ಇರಲಿದೆ. ಇನ್ನು ಈಶಾನ್ಯ ಭಾರತ, ಮಧ್ಯ ಭಾರತದ ಹಲವು ಪ್ರದೇಶಗಳು ಹಾಗೂ ದಕ್ಷಿಣ ಭಾರತಕ್ಕೆ ಹೊಂದಿಕೊಂಡಿರುವ ಪ್ರದೇಶಗಳು, ಈಶಾನ್ಯ ಭಾರತದ ಕೆಲ ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಲಿದೆ. ಪೂರ್ವ, ಈಶಾನ್ಯ ಮತ್ತು ಪೂರ್ವ ಮಧ್ಯ ಭಾರತ ಹೊರತುಪಡಿಸಿ ಉಳಿದೆಡೆ ಮಳೆ ಪ್ರಮಾಣ ಸಾಮಾನ್ಯಕಿಂತ ಕೊಂಚ ಹೆಚ್ಚೇ ಇರಲಿದೆ ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ್‌ ಮಹಾಪಾತ್ರ ತಿಳಿಸಿದ್ದಾರೆ.

==

ಪಂಜಾಬ್‌ ಸಿಎಂ ಸದನಕ್ಕೆ ಮದ್ಯ ಸೇವಿಸಿ ಬರ್ತಾರೆ: ವಿಪಕ್ಷ ದೂರು

ಪರೀಕ್ಷೆ ಕುರಿತ ವಿಪಕ್ಷ ಬೇಡಿಕೆಗೆ ಸ್ಪೀಕರ್‌ ತಿರಸ್ಕಾರ

ನವದೆಹಲಿ: ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವ ಮದ್ಯ ಸೇವಿಸಿ ಸದನಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಮದ್ಯಪಾನ ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿದ ಅಪರೂಪದ ಘಟನೆಗೆ ಪಂಜಾಬ್‌ ವಿಧಾನಸಭೆ ಶುಕ್ರವಾರ ಸಾಕ್ಷಿಯಾಗಿದೆ.ಕಾರ್ಮಿಕರ ದಿನದ ಹಿನ್ನೆಲೆಯಲ್ಲಿ ಕರೆದಿದ್ದ 1 ದಿನದ ವಿಶೇಷ ಅಧಿವೇಶನದಲ್ಲಿದ ವೇಳೆ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಕಾಂಗ್ರೆಸ್‌ ಶಾಸಕ ಸುಖ್‌ಪಾಲ್‌ ಸಿಂಗ್‌ ಖಾರಿಯಾ ಅವರು ಅಧಿವೇಶನದಲ್ಲಿ ಮೊಬೈಲ್‌ ಬಳಸುತ್ತಿದ್ದುದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಖಾರಿಯಾ, ಮುಖ್ಯಮಂತ್ರಿಗಳು ಮದ್ಯಪಾನ ಮಾಡಿ ಅಧಿವೇಶನಕ್ಕೆ ಬರುತ್ತಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಪ್ರತಾಪ್‌ ಸಿಂಗ್‌ ಬಾಜ್ವಾ ಅವರೂ ಬೆಂಬಲಿಸಿ, ಸಿಎಂ ಸೇರಿ ಎಲ್ಲಾ ಶಾಸಕರ ಮದ್ಯಪಾನ ಪತ್ತೆ ಪರೀಕ್ಷೆಗೆ ಒಳಪಡಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗೆ ಅಕಾಲಿದಳವೂ ಬೆಂಬಲ ವ್ಯಕ್ತಪಡಿಸಿ ಸಾರ್ವಜನಿಕ ಡೋಪ್‌ ಟೆಸ್ಟ್‌ಗೆ ಆಗ್ರಹಿಸಿತು. ಗದ್ದಲ ಹಿನ್ನೆಲೆಯಲ್ಲಿ ಕೆಲಕಾಲ ಕಲಾಪವನ್ನು ಮುಂದೂಡಿದರೂ ಮತ್ತೆ ಪ್ರತಿಪಕ್ಷಗಳಿಂದ ಅದೇ ಬೇಡಿಕೆ ಮಂಡನೆಯಾಯಿತು. ಆದರೆ, ಈ ಬೇಡಿಕೆಯನ್ನು ಸ್ಪೀಕರ್‌ ಕುಲ್ತಾರ್‌ ಸಿಂಗ್‌ ಸಂಧ್ವಾನ್‌ ತಿರಸ್ಕರಿಸಿದ್ದು, ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿ ಆಕ್ರೋಶ ಹೊರಹಾಕಿದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಏಪ್ರಿಲ್‌ನಲ್ಲಿ 2.43 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ
ಕಾಶ್ಮೀರದಲ್ಲಿ ಮತ್ತೊಂದು ದಾಳಿಗೆ ಪಾಕ್‌ ಸಂಚು!