ನವದೆಹಲಿ: ನಕಲಿ ಇನ್‌ವಾಯ್ಸ್ ಮೂಲಕ ಇನ್‌ಪುಟ್ ತೆರಿಗೆ ಕ್ರೆಡಿಟ್ ಕ್ಲೇಮ್ ಆಗುವುದನ್ನು ತಪ್ಪಿಸಲು ಇನ್‌ವಾಯ್ಸ್ ಪರಿಶೀಲನೆ ವೇಳೆ ಬಯೋಮೆಟ್ರಿಕ್ ಕಡ್ಡಾಯ ಮಾಡುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಕೈಗೊಂಡಿದೆ. ಇದೇ ವೇಳೆ, ಹಾಲಿನ ಕ್ಯಾನ್, ಕಾರ್ಟನ್ ಬಾಕ್ಸ್ ಮೇಲಿನ ಜಿಎಸ್‌ಟಿ ಇಳಿಕೆ ಮಾಡಲಾಗಿದೆ ಹಾಗೂ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್, ಬ್ಯಾಟರಿ ವಾಹನ, ವೇಟಿಂಗ್ ರೂಂ ಮೇಲಿನ ಜಿಎಸ್‌ಟಿ ತೆಗೆದು ಹಾಕಲು ನಿರ್ಧರಿಸಲಾಗಿದೆ.ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಮುಖ ನಿರ್ಣಯಗಳು:
- ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್ ಕ್ಲೇಮ್ ಮಾಡಿಕೊಳ್ಳಲು ನಕಲಿ ಇನ್‌ವಾಯ್ಸ್‌ಗಳನ್ನು ನೀಡುವ ಹಾವಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಹೀಗಾಗಿ ನಕಲಿ ಇನ್‌ವಾಯ್ಸ್ ಪರಿಶೀಲಿಸಲು ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲಾಗುವುದು. ಪ್ರಕರಣಗಳಲ್ಲಿ ನಕಲಿ ಇನ್‌ವಾಯ್ಸ್‌ಗಳ ಮೂಲಕ ಮಾಡಿದ ಮೋಸದ ಇನ್‌ಪುಟ್ ತೆರಿಗೆ ಕ್ರೆಡಿಟ್ ಕ್ಲೈಮ್‌ಗಳನ್ನು ಎದುರಿಸಲು ಇದು ನಮಗೆ ಸಹಾಯ ಮಾಡುತ್ತದೆ.
- ಸಣ್ಣ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಲು ಏಪ್ರಿಲ್ 30 ರಿಂದ ಜೂನ್ 30 ರವರೆಗೆ ಕಾಲಮಿತಿಯನ್ನು ವಿಸ್ತರಿಸಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು
- ಭಾರತೀಯ ರೈಲ್ವೆಯ ಪ್ಲಾಟ್‌ಫಾರ್ಮ್ ಟಿಕೆಟ್, ವೇಟಿಂಗ್ ರೂಂ, ಬ್ಯಾಟರಿ ಚಾಲಿತ ವಾಹನದ ಸೇವೆಗಳಿಗೆ ಜಿಎಸ್ಟಿ ವಿನಾಯಿತಿ- ಕಬ್ಬಿಣ, ಉಕ್ಕು, ಅಲ್ಯುಮಿನಿಯಂ ಹೀಗೆ ವಿವಿಧ ವಸ್ತುಗಳಿಂದ ನಿರ್ಮಾಣವಾದ ಹಾಲಿನ ಕ್ಯಾನ್‌ಗಳ ಮೇಲಿನ ವಿವಿಧ ಸ್ತರದ ಜಿಎಸ್‌ಟಿ ತೆಗೆದು ಹಾಕಿ ಶೇ.12ರ ಏಕರೂಪದ ದರ ನಿಗದಿ
- ಎಲ್ಲಾ ರಟ್ಟಿನ ಪೆಟ್ಟಿಗೆಗಳು ಮತ್ತು ಕೇಸ್‌ಗಳ (ಕಾರ್ಟನ್ ಬಾಕ್ಸ್) ಮೇಲೆ ಶೇ. 12 ರ ಏಕರೂಪದ ಜಿಎಸ್‌ಟಿ ದರಕ್ಕೆ ನಿರ್ಧರಿಸಲಾಗಿದೆ. ಇದು ಹಣ್ಣು, ತರಕಾರಿ, ಆಹಾರ ಪದಾರ್ಥಗಳ ಪ್ಯಾಕಿಂಗ್ ದರ ತಗ್ಗಿಸಲು ನೆರವಾಗಲಿದೆ
- 20 ಸಾವಿರ ರು.ವರೆಗಿನ ಹಾಸ್ಟೆಲ್ ಸೌಕರ್ಯಗಳಿಗೆ ತೆರಿಗೆ ವಿನಾಯ್ತಿ ಲಭಿಸಲಿದೆ.- ರಸಗೊಬ್ಬರಗಳ ಮೇಲಿನ ಶೇ.5 ಜಿಎಸ್‌ಟಿ ತೆಗೆದು ಹಾಕುವ ಪ್ರಸ್ತಾಪದ ಬಗ್ಗೆ ಸಚಿವರ ಸಮಿತಿ ಪರಿಶೀಲಿಸಬೇಕು ಎಂದು ಜಿಎಸ್‌ಟಿ ಮಂಡಳಿ ನಿರ್ಣಯಿಸಿದೆ.
- ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಮೇಲ್ಮನವಿ ಸಲ್ಲಿಸಲು ಇರುವ ಹಣದ ಮಿತಿ ಹೆಚ್ಚಿಸಲಾಗಿದೆ. ತೆರಿಗೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ 20 ಲಕ್ಷ ರು.ಗಿಂತ ಹೆಚ್ಚಿನ ವಾಜ್ಯ, ಹೈಕೋರ್ಟಲ್ಲಿ 1 ಕೋಟಿ ರು.ಗಿಂತ ಹೆಚ್ಚಿನ ವ್ಯಾಜ್ಯ, ಸುಪ್ರೀಂ ಕೋರ್ಟಲ್ಲಿ 2 ಕೋಟಿ ರು.ಗಿಂತ ಹೆಚ್ಚಿನ ವ್ಯಾಜ್ಯ ಇದ್ದರೆ ಮಾತ್ರ ಮೇಲ್ಮನವಿ ಸಲ್ಲಿಸಬೇಕು ಎಂದು ಅದು ಸೂಚಿಸಿದೆ. ಇದಕ್ಕಿಂತ ಕಡಿಮೆ ಹಣದ ವ್ಯಾಜ್ಯ ಇದ್ದರೆ ಮೇಲ್ಮನವಿಯನ್ನು ಐಟಿ ಇಲಾಖೆ ಸಲ್ಲಿಸಕೂಡದು. ವ್ಯಾಜ್ಯಗಳ ಭಾರ ಕಡಿಮೆ ಮಾಡಲು ಈ ನಿರ್ಣಯ ಕೈಗೊಳ್ಳಲಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್: ರಾಜ್ಯಗಳಿಗೆ ಬಿಟ್ಟಿದ್ದುನವದೆಹಲಿ: ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬುದು ಈ ಹಿಂದಿನಿಂದಲೂ ಕೇಂದ್ರ ಸರ್ಕಾರದ ಇಚ್ಛೆಯಾಗಿದೆ. ಆದರೆ ಈ ಬಗ್ಗೆ ಸಮ್ಮತಿ ಸೂಚಿಸುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಅರುಣ್ ಜೇಟ್ಲಿ ಕೇಂದ್ರ ವಿತ್ತ ಸಚಿವರಾದಾಗಲೇ ಜಿಎಸ್‌ಟಿ ಅಡಿ ತೈಲವನ್ನು ತರಬೇಕು ಎಂದಿದ್ದರು ಎಂದರು.
ರಾಜ್ಯಗಳಿಗೆ ಸರಿಯಾಗಿ ಜಿಎಸ್ಟಿ ಪರಿಹಾರಕ್ಕೆ ಕೇಂದ್ರ ಬದ್ಧ: ನಿರ್ಮಲಾನವದೆಹಲಿ: ‘ರಾಜ್ಯಗಳಿಗೆ ಸೇರಬೇಕಿರುವ ಜಿಎಸ್‌ಟಿ ತೆರಿಗೆ ಹಣವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಮಾತು ಹೇಳಿದರು.ಇದೇ ವೇಳೆ, ‘ರಾಜ್ಯಗಳಿಗೆ 50 ವರ್ಷಗಳ ಅವಧಿವರೆಗೆ ಬಡ್ಡಿ ರಹಿತ ಪಡೆಯಬಹುದಾದ ಅವಕಾಶವಿದೆ. ಆದರೆ ಅದಕ್ಕೆ ಕೆಲ ಷರತ್ತುಗಳಿದ್ದು, ಇದನ್ನು ಪೂರೈಸಲು ರಾಜ್ಯ ಸರ್ಕಾರಗಳು ಎಡವುತ್ತಿವೆ. ಷರತ್ತು ಪೂರೈಸಿ ಹಣ ಪಡೆಯಬಹುದು’ ಎಂದು ಹೇಳಿದರು.