ದರ ಕಡಿತ ಮಾಡಿವೆಯೇ ಎಂಬುದರ ಮೇಲೆ ಕಣ್ಣು
ನವದೆಹಲಿ: ಎಫ್‌ಎಂಸಿಜಿ (ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು) ಉತ್ಪನ್ನಗಳ ಮೇಲಿನ ಜಿಎಸ್ಟಿ ಕಡಿತದ ಲಾಭವನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ವರ್ಗಾಯಿಸುತ್ತಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.
ಜಿಎಸ್ಟಿ ಕಡಿತವಾದರೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಎಫ್‌ಎಂಸಿಜಿ ವಸ್ತುಗಳ ದರ ಇಳಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಸ್ತುಗಳ ದರಗಳ ವ್ಯತ್ಯಾಸದ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಮುಂದಾಗಿದೆ.ನಾವು ವಸ್ತುಗಳ ಮೇಲಿನ ದರಗಳಲ್ಲಿನ ವ್ಯತ್ಯಾಸದ ಮೇಲೆ ಕಣ್ಣಿಟ್ಟಿದ್ದೇವೆ. ಸೆ.30ರೊಳಗೆ ಈ ಕುರಿತ ಪ್ರಾಥಮಿಕ ವರದಿ ತರಿಸಿಕೊಳ್ಳಲಿದ್ದೇವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸೆ.9ರಂದೇ ಹಣಕಾಸು ಸಚಿವಾಲಯ ಕೇಂದ್ರ ಜಿಎಸ್ಟಿ ಫೀಲ್ಡ್ ಅಧಿಕಾರಿಗಳಿಗೆ ನಿತ್ಯ ಬಳಕೆಯ 54 ವಸ್ತುಗಳ ಮಾಸಿಕ ದರ ವ್ಯತ್ಯಾಸದ ಕುರಿತು ಮಾಹಿತಿ ಕೇಳಿತ್ತು. ಈ ಕುರಿತ ಮೊದಲ ವರದಿ ಸೆ.30ರಂದು ಸಚಿವಾಲಯದ ಕೈಸೇರುವ ನಿರೀಕ್ಷೆ ಇದೆ.