ನವದೆಹಲಿ: ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರು. ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದ್ದು, ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ. ದೇಶೀಯ ವಹಿವಾಟು ಮತ್ತು ಆಮದುಗಳ ಬಲವಾದ ಹೆಚ್ಚಳದಿಂದ ವರ್ಷದಲ್ಲಿ ಶೇ.12.4 ರಷ್ಟು ಜಿಎಸ್‌ಟಿ ಸಂಗ್ರಹ ಏರಿಕೆಯಾಗಿದೆ.
ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆ ನೀಡಿ, ಇದೇ ಮೊದಲ ಬಾರಿ ಜಿಎಸ್‌ಟಿ ಸಂಗ್ರಹವು 2 ಲಕ್ಷ ಕೋಟಿ ರೂ.ಗಳ ಮೈಲಿಗಲ್ಲು ದಾಟಿದೆ ಎಂದು ತಿಳಿಸಿದೆ. ಕಳೆದ ತಿಂಗಳು 1.78 ಲಕ್ಷ ಕೋಟಿ ರು. ಜಿಎಸ್‌ಟು ಸಂಗ್ರಹ ಆಗಿತ್ತು. ಆದರೆ ಏಪ್ರಿಲ್, 2023 ರಲ್ಲಿ ಇದು 1.87 ಲಕ್ಷ ಕೋಟಿ ರು.ನಷ್ಟಿತ್ತು ಮತ್ತು ಈವರೆಗಿನ ಸಾರ್ವಕಾಲಿಕ ದಾಖಲೆ ಆಗಿತ್ತು.‘ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಏಪ್ರಿಲ್ 2024 ರಲ್ಲಿ 2.10 ಲಕ್ಷ ಕೋಟಿ ರು. ಆಗಿದ್ದು, ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಇದು ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ 12.4 ಶೇಕಡಾ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಇದು ದೇಶೀಯ ವಹಿವಾಟು (ಶೇ. 13.4) ಮತ್ತು ಆಮದು (ಶೇ. 8.3 ರಷ್ಟು) ಹೆಚ್ಚಳದಿಂದ ಪ್ರೇರಿತವಾಗಿದೆ‘ ಎಂದು ಸಚಿವಾಲಯ ಹೇಳಿದೆ.ಮರುಪಾವತಿಯನ್ನೂ ಲೆಕ್ಕ ಹಾಕಿದರೆ ಏಪ್ರಿಲ್ 2024 ರ ನಿವ್ವಳ ಜಿಎಸ್‌ಟಿ ಆದಾಯವು 1.92 ಲಕ್ಷ ರು. ತಲುಪಿದೆ.
ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಇದು ಶೇ.17.1 ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.ಏಪ್ರಿಲ್‌ನಲ್ಲಿ ಕೇಂದ್ರ ಜಿಎಸ್‌ಟಿ ಸಂಗ್ರಹ 43,846 ಕೋಟಿ ರು. ರಾಜ್ಯ ಜಿಎಸ್‌ಟಿ 53,538 ಕೋಟಿ ರು. ಇಂಟಿಗ್ರೇಟೆಡ್ ಜಿಎಸ್‌ಟಿ 99,623 ಕೋಟಿ ರು.ಗಳಾಗಿದೆ. ಆಮದು ಮಾಡಿಕೊಂಡ ವಸ್ತುಗಳ ಮೇಲೆ ಸಂಗ್ರಹಿಸಲಾದ 37,826 ಕೋಟಿ ರು., ಹಾಗೂ 13,260 ಕೋಟಿ ರು. ಸೆಸ್ ಸಂಗ್ರಹವಾಗಿದೆ.