500 ಜನರಿದ್ದ ರೈಲು ಬಲೂಚ್‌ ಬಂಡುಕೋರರಿಂದ ಹೈಜಾಕ್‌

KannadaprabhaNewsNetwork |  
Published : Mar 12, 2025, 12:45 AM IST
ಪಾಕ್‌ | Kannada Prabha

ಸಾರಾಂಶ

ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದಲ್ಲಿ ಬಲೂಚ್ ವಿಮೋಚನಾ ಪಡೆ (ಬಿಎಲ್‌ಎ) ಉಗ್ರರು ದುಂಡಾವರ್ತನೆ ಮೆರೆದಿದ್ದು, ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮಂಗಳವಾರ ಗುಂಡಿನ ದಾಳಿ ಮಾಡಿ ತಡೆದಿದ್ದಾರೆ

ಪಿಟಿಐ ಕರಾಚಿ

ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನದಲ್ಲಿ ಬಲೂಚ್ ವಿಮೋಚನಾ ಪಡೆ (ಬಿಎಲ್‌ಎ) ಉಗ್ರರು ದುಂಡಾವರ್ತನೆ ಮೆರೆದಿದ್ದು, ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮಂಗಳವಾರ ಗುಂಡಿನ ದಾಳಿ ಮಾಡಿ ತಡೆದಿದ್ದಾರೆ ಹಾಗೂ ಸುಮಾರು 500 ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.

ಈ ನಡುವೆ, ‘ಸೇನೆ ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸಕೂಡದು. ನಡೆಸಿದರೆ ಎಲ್ಲ ಪ್ರಯಾಣಿಕರ ಹತ್ಯೆ ಮಾಡುತ್ತೇವೆ’ ಎಂದು ಉಗ್ರರು ಬೆದರಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಮಾತನಾಡಿರುವ ಪಾಕ್‌ ಮಾಜಿ ಸಂಸದ ಖಾದಿರ್‌ ಬಲೂಚ್ ಅವರು, ‘ಉಗ್ರರು ತಮ್ಮ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ 150 ಯೋಧರನ್ನು ಹತ್ಯೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಆದರೆ ಇದು ಸ್ವತಂತ್ರವಾಗಿ ದೃಢಪಟ್ಟಿಲ್ಲ. ಆದಾಗ್ಯೂ ಉಗ್ರರ ವಿರುದ್ಧದ ಕಾರ್ಯಾಚರಣೆ ನಿಲ್ಲಿಸುವು ಪ್ರಶ್ನೆಯೇ ಇಲ್ಲ ಎಂದು ಬಲೂಚಿಸ್ತಾನ ಸರ್ಕಾರ ಹೇಳಿದೆ.

ಆಗಿದ್ದೇನು?:

ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿರುವ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖೈಬರ್‌ ಕಣಿವೆಯ ಗುಡಾಲಾರ್ ಹಾಗೂ ಪಿರು ಕೊಣೇರಿ ನಡುವಿನ 8ನೇ ಸುರಂಗದ ಸನಿಹ ಸಾಗುತ್ತಿದ್ದ 9 ಕೋಚ್‌ಗಳಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರೈಲು ಚಾಲಕ ಹಾಗೂ ಕೆಲವರು ಗಾಯಗೊಂಡಿದ್ದಾರೆ. ಬಳಿಕ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.

ಈ ನಡುವೆ, ಉಗ್ರರು ತಾವು ಹಳಿಯನ್ನೇ ಸ್ಫೋಟಿಸಿ ರೈಲು ನಿಲ್ಲಿಸಿದ್ದೇವೆ. 6 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದೇವೆ ಎಂದಿದ್ದರೂ ಅದು ಅಧಿಕೃತವಾಗಿ ದೃಢಪಟ್ಟಿಲ್ಲ.

ಸ್ಥಳಕ್ಕೆ ರಕ್ಷಣಾ ತಂಡಗಳು ಹಾಗೂ ಭದ್ರತಾ ಪಡೆಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಆದರೆ ಗುಡ್ಡಗಾಡು ಆದ ಕಾರಣ ಹೆಚ್ಚಿನ ಪಡೆಗಳು ಅಲ್ಲಿಗೆ ತೆರಳಲು ಕಷ್ಟವಾಗುತ್ತಿದೆ. ಇದರ ನಡುವೆ ಉಗ್ರರು ಮಹಿಳೆ ಹಾಗೂ ಮಕ್ಕಳನ್ನು ‘ಮಾನವ ಗುರಾಣಿ’ ಮಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ.

ಇದು ಮೊದಲಲ್ಲ:

ಬಲೂಚಿ ಉಗ್ರರು ರೈಲಿನ ಮೇಲೆ ದಾಳಿ ಮಾಡುತ್ತಿರುವುದು ಮೊದಲೇನಲ್ಲ. 2024ರ ನವೆಂಬರ್‌ನಲ್ಲಿ, ಕ್ವೆಟ್ಟಾದ ಮುಖ್ಯ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ನಡೆಸಿ 14 ಸೈನಿಕರು ಸೇರಿದಂತೆ 26 ಜನರನ್ನು ಸಾಯಿಸಿದ್ದರು. ಮತ್ತು ಫೆಬ್ರವರಿಯಲ್ಲಿ 7 ಪಂಜಾಬಿ ಪ್ರಯಾಣಿಕರನ್ನು ಸಹ ಕೊಂದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ