ಈಗ ಮಾತ್ರವಲ್ಲ, ಹಿಂದೆಯೂ ಆಗಿವೆ: ಅಮಿತ್ ಶಾ. ರಾಜಕೀಯ ಬೇಡ: ಸಂಸತ್ ದಾಳಿ ಬಗ್ಗೆ ಗೃಹ ಸಚಿವ ಮೊದಲ ಪ್ರತಿಕ್ರಿಯೆ.
ನವದೆಹಲಿ: ಸಂಸತ್ತಿನಲ್ಲಿ ನಡೆದ ‘ಹೊಗೆಬಾಂಬ್’ ದಾಳಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿರುವಾಗಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೊದಲ ಬಾರಿ ಮೌನ ಮುರಿದಿದ್ದು, ತಿರುಗೇಟು ಕೊಟ್ಟಿದ್ದಾರೆ. ‘ಈ ಹಿಂದೆ ಸುಮಾರು 40 ಬಾರಿ ಸಂಸತ್ತಿನಲ್ಲಿ ಭದ್ರತಾ ಲೋಪಗಳು ಆಗಿವೆ. ಪಿಸ್ತೂಲ್ ಅನ್ನು ಸದನಕ್ಕೆ ತಂದ, ಸದನದೊಳಗೆ ಜಿಗಿದ, ಕಾಗದಪತ್ರಗಳನ್ನು ತೂರಿದ, ಘೋಷಣೆಗಳನ್ನು ಕೂಗಿದ ಘಟನೆಗಳು ಆಗಿವೆ. ಆಗೆಲ್ಲಾ ಸಂಬಂಧಿಸಿದ ಸ್ಪೀಕರ್ ಅವರು ಕ್ರಮ ಕೈಗೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಟೀವಿ ಸಂವಾದವೊಂದರಲ್ಲಿ ಮಾತನಾಡಿದ ಅವರು, ‘ಈ ಬಾರಿಯೂ ಭದ್ರತಾ ಲೋಪವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರತಿಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿವೆ. ಭದ್ರತಾ ಲೋಪದ ಕುರಿತಂತೆ ಅತ್ಯುನ್ನತ ಸಮಿತಿ 15ರಿಂದ 20 ದಿನಗಳಲ್ಲಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ವರದಿಯನ್ನು ಸಲ್ಲಿಸಲಿದೆ’ ಎಂದು ತಿಳಿಸಿದ್ದಾರೆ.‘ಹಲವಾರು ಬಾರಿ ದಾಳಿಕೋರರು ಭದ್ರತೆಯನ್ನು ಭೇದಿಸಲು ಹೊಸ ದಾರಿಗಳನ್ನು ಹುಡುಕುತ್ತಾರೆ. ಲೋಪಗಳನ್ನು ಪತ್ತೆಹಚ್ಚುತ್ತಾರೆ. ಇಂತಹ ಯಾವುದೇ ಲೋಪಗಳು ಇರಬಾರದು ಎನ್ನುವುದು ಸರಿ. ಆದರೆ ಅವರು ಅದನ್ನು ಪತ್ತೆ ಹಚ್ಚಿದಾಗ ಅದನ್ನು ಮುಚ್ಚುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ವಿಷಯವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು’ ಎಂದು ಮನವಿ ಮಾಡಿದ್ದಾರೆ.ಶಾ ಸಂಸತ್ತಲ್ಲಿ ಈ ಬಗ್ಗೆ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಘಟನೆಯು ಸದನದಲ್ಲಿ ನಡೆದಿರುವ ಕಾರಣ ತನಿಖೆಯ ಉಸ್ತುವಾರಿ ಸ್ಪೀಕರ್ ಆಗಿರುತ್ತಾರೆ. ಸದನದಲ್ಲಿ ಶಾ ಹೇಳಿಕೆ ನೀಡಲು ಆಗದು ಎಂಬುದು ಸರ್ಕಾರದ ವಾದ. ಹೀಗಾಗಿ ಶಾ ಸದನದ ಹೊರಗೆ ಹೇಳಿಕೆ ನೀಡಿದ್ದಾರೆ.