ಮತಪತ್ರದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಸೋಲು: ಪ್ರಿಯಾಂಕಾ

KannadaprabhaNewsNetwork |  
Published : Dec 15, 2025, 02:45 AM IST
ಕಾಂಗ್ರೆಸ್ | Kannada Prabha

ಸಾರಾಂಶ

ಮತಗಳವಿನಲ್ಲಿ ಬಿಜೆಪಿ ಜತೆ ಚುನಾವಣಾ ಆಯೋಗವೂ ಕೈಜೋಡಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಚುನಾವಣೆಯ ಪ್ರತಿ ಹಂತದಲ್ಲಿ ಮತಚೋರಿ ಆಗಿತ್ತು. ಕರ್ನಾಟಕ, ಬಿಹಾರ, ಮಹಾರಾಷ್ಟ್ರದಲ್ಲೂ ಹೀಗಾಗಿದೆ. ಅದು ಹೇಗೆಂಬ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿಬ್ಬರು ಆಯುಕ್ತರು ಉತ್ತರಿಸಬೇಕು ಎಂದರು. ಅಲ್ಲದೆ, ಮತಪತ್ರದಲ್ಲಿ ಚುನಾವಣೆ ನಡೆದರೆ ಬಿಜೆಪಿ ಸೋಲಲಿದೆ ಎಂದು ಭವಿಷ್ಯ ನುಡಿದರು.

ಮತಗಳವು ಆಗಲು ಹೇಗೆ ಬಿಟ್ಟಿರಿ?: ಆಯೋಗಕ್ಕೆ ಪ್ರಶ್ನೆ

ಬ್ಯಾಲಟ್‌ ಪೇಪರ್‌ನಲ್ಲಿ ಚುನಾವಣೆ ನಡೆದ್ರೆ ಬಿಜೆಪಿಗೆ ಸೋಲುಬಿಹಾರ ಸೋಲಿಗೆ ಎದುಗುಂದದಿರಿ: ಕಾಂಗ್ರೆಸಿಗರಿಗೆ ಸಲಹೆ

ನವದೆಹಲಿ: ಮತಗಳವಿನಲ್ಲಿ ಬಿಜೆಪಿ ಜತೆ ಚುನಾವಣಾ ಆಯೋಗವೂ ಕೈಜೋಡಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ಚುನಾವಣೆಯ ಪ್ರತಿ ಹಂತದಲ್ಲಿ ಮತಚೋರಿ ಆಗಿತ್ತು. ಕರ್ನಾಟಕ, ಬಿಹಾರ, ಮಹಾರಾಷ್ಟ್ರದಲ್ಲೂ ಹೀಗಾಗಿದೆ. ಅದು ಹೇಗೆಂಬ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿಬ್ಬರು ಆಯುಕ್ತರು ಉತ್ತರಿಸಬೇಕು ಎಂದರು. ಅಲ್ಲದೆ, ಮತಪತ್ರದಲ್ಲಿ ಚುನಾವಣೆ ನಡೆದರೆ ಬಿಜೆಪಿ ಸೋಲಲಿದೆ ಎಂದು ಭವಿಷ್ಯ ನುಡಿದರು.

ಭಾನುವಾರ ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆದ ‘ವೋಟ್‌ ಚೋರ್‌ ಗದ್ದೀ ಛೋಡ್‌’ (ಮತಗಳ್ಳರೇ ಅಧಿಕಾರ ಬಿಡಿ) ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ದೇಶದ ಸಂಸ್ಥೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿರುವಾಗ ಭಾರತೀಯರು ಸಿಡಿದೇಳಬೇಕು. ಜನರ ಮತ ಕದಿಯಲು ನೀವು ಮಾಡಿದ ಸಂಚು ಬೆಳಕಿಗೆ ಬಂದಾಗ ನಿಮ್ಮನ್ನು ರಕ್ಷಿಸಲು ಬಿಜೆಪಿ ಬರುವುದಿಲ್ಲ’ ಎಂದು ಸಿಇಸಿ ಜ್ಞಾನೇಶ್‌ ಕುಮಾರ್‌, ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರ ಹೆಸರುಗಳನ್ನು ಉಲ್ಲೇಖಿಸಿ ವಾಗ್ದಾಳಿ ಮಾಡಿದರು. ಇದೇ ವೇಳೆ, ‘ಕರ್ನಾಟಕ, ಮಹಾರಾಷ್ಟ್ರದಲ್ಲೂ ಬಿಜೆಪಿ ಮತಚೋರಿ ಮಾಡಿದೆ ಎಂದು ನಾವು ಹಿಂದೆಯೇ ಹೇಳಿದ್ದೆವು. ಬಿಹಾರದಲ್ಲೂ ಬಿಜೆಪಿ ಮತಚೋರಿಯಿಂದ ಗೆದ್ದದ್ದೆಂಬುದು ಎಲ್ಲರಿಗೂ ತಿಳಿದಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ (ಬಿಜೆಪಿಯಿಂದ) ಮಹಿಳೆಯರಿಗೆ 10,000 ರು. ಹಂಚಿಕೆಯಾದಾಗ ಚುನಾವಣಾ ಆಯೋಗ ಕಣ್ಣುಮುಚ್ಚಿಕೊಂಡಿತ್ತು. ಬಿಹಾರದಲ್ಲಿ ಆದ ಸೋಲಿನಿಂದ ಎದೆಗುಂದಬೇಡಿ’ ಎಂದು ಸ್ವಪಕ್ಷೀಯರಿಗೆ ಧೈರ್ಯ ತುಂಬಿದರು. ‘ಮತಪತ್ರದ ಮೂಲಕ ಚುನಾವಣೆ ನಡೆದರೆ ಬಿಜೆಪಿ ಎಂದೂ ಗೆಲ್ಲದು’ ಎಂದು ಸವಾಲೆಸೆದರು.

==

ಮೋದಿ ಸಮಾಧಿಯ ಗುಂಡಿ ಅಗೀತೇವೆ: ಕಾಂಗ್ರೆಸ್ ಕಾರ್ಯಕರ್ತರ ಉದ್ಘೋಷ

- ದೆಹಲಿಯಲ್ಲಿ ನಡೆದ ಮತಗಳವು ವಿರುದ್ಧದ ಪ್ರತಿಭಟನೆ

- ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆ ಕೂಗಿ ಆಕ್ರೋಶ

ನವದೆಹಲಿ: ಬಿಜೆಪಿ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾನುವಾರ ದೆಹಲಿಯ ರಾಮ್‌ ಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ.

‘ಮೋದಿ ತೇರಿ ಕಬರ್‌ ಖುದೇಂಗೆ ಆಜ್‌ ನಹೀ ತೊ ಕಲ್‌ ಖುದೇಂಗೆ’ (ಮೋದಿ ನಿಮ್ಮ ಸಮಾಧಿಗೆ ಗುಂಡಿ ಅಗೆಯುತ್ತಿದ್ದೇವೆ, ಇವತ್ತಲ್ಲ ನಾಳೆ ಸಮಾಧಿ ಮಾಡುತ್ತೇವೆ) ಎಂದು ಕಾರ್ಯಕರ್ತರು ಕೂಗಿದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.ಇದನ್ನು ಬಿಜೆಪಿ ವಕ್ತಾರರಾದ ಸಂಬಿತ್‌ ಪಾತ್ರ ಹಾಗೂ ಶೆಹಜಾದ್ ಪೂನಾವಾಲಾ ಖಂಡಿಸಿದ್ದು, ‘ಮೋದಿ ಅವರನ್ನು ಟಾರ್ಗೆಟ್‌ ಮಾಡಲೆಂದೇ ಸಮಾವೇಶ ಮಾಡಿದಂತಿದೆ’ ಎಂದಿದ್ದಾರೆ.

ಸಮರ್ಥನೆ:ಆದರೆ ರಾಜಸ್ಥಾನ ಕಾಂಗ್ರೆಸ್‌ ಕಾರ್ಯಕರ್ತೆ ಮಂಜುಲತಾ ಮೀನಾ, ಸೋನಿಯಾ ಬೇಗಂ ಸೇರಿ ಹಲವು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಈ ಘೋಷಣೆಗಳನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ‘ಹಿಟ್ಲರ್‌ ಸರ್ಕಾರದಿಂದ ಪ್ರತಿಯೊಬ್ಬರೂ ಬೇಸತ್ತಿದ್ದಾರೆ. ಸಾರ್ವಜನಿಕರು ತಮ್ಮ ಧ್ವನಿ ಗಟ್ಟಿಗೊಳಿಸಲಿದ್ದು, ಅದು ಮೋದಿ ಅವರ ಶವಪೆಟ್ಟಿಗೆಗೆ ಕೊನೆಯ ಮೊಳೆಯಾಗಲಿದೆ. ಶ್ರೀಲಂಕಾ ಮತ್ತು ನೇಪಾಳದಲ್ಲಿ ಏನಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಸಾರ್ವಜನಿಕರು ಮುಗ್ಧರಲ್ಲ, ಎಲ್ಲವನ್ನೂ ನೋಡುತ್ತಿದ್ದಾರೆ. ನಾವು ಪ್ರತಿಭಟನೆಯುದ್ದಕ್ಕೂ ಈ ಘೋಷಣೆ ಕೂಗಲಿದ್ದೇವೆ’ ಎಂದರು.

==

ದ್ರೋಹಿ, ಡ್ರಾಮೆಬಾಜ್‌ ಬಿಜೆಪಿಗರನ್ನು ಅಧಿಕಾರದಿಂದ ಕೆಳಗಿಳಿಸಿ: ಖರ್ಗೆ ಕಿಡಿ

-ಆರ್‌ಎಸ್‌ಎಸ್‌ ಸಿದ್ಧಾಂತಗಳು ದೇಶಕ್ಕೆ ಮಾರಕ

-ದೇಶದ ಉಳಿವಿಗೆ ನಮ್ಮ ಸಿದ್ಧಾಂತ ಬಲಗೊಳಿಸಿ

ನವದೆಹಲಿ: ‘ಮತಗಳವಿನಲ್ಲಿ ತೊಡಗಿರುವವರು ದ್ರೋಹಿಗಳು. ಮತದಾನದ ಹಕ್ಕು ಮತ್ತು ಸಂವಿಧಾನವನ್ನು ರಕ್ಷಿಸಲು ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.ಮತಚೋರಿಯನ್ನು ವಿರೋಧಿಸಿ ಪಕ್ಷ ಹಮ್ಮಿಕೊಂಡಿದ್ದ ‘ವೋಟ್‌ ಚೋರ್‌ ಗದ್ದೀ ಛೋಡ್‌’ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, ‘ಬಿಜೆಪಿಗರು ದ್ರೋಹಿಗಳು ಮತ್ತು ಡ್ರಾಮೆಬಾಜ್‌ (ನಾಟಕ) ಮಾಡುತ್ತಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಆರ್‌ಎಸ್‌ಎಸ್‌ ಸಿದ್ಧಾಂತಗಳು ದೇಶಕ್ಕೆ ಮಾರಕ. ಆದ್ದರಿಂದ ದೇಶದ ಉಳಿವಿಗೆ ಎಲ್ಲಾ ಭಾರತೀಯರು ಒಟ್ಟಾಗಿ ಕಾಂಗ್ರೆಸ್‌ ಸಿದ್ಧಾಂತವನ್ನು ಬಲಗೊಳಿಸುವ ಅಗತ್ಯವಿದೆ’ ಎಂದು ಕರೆ ನೀಡಿದ್ದಾರೆ.

ಮಗನ ಸರ್ಜರಿಗೂ ಹೋಗಲಿಲ್ಲ: ಖರ್ಗೆ

ಇದೇ ವೇಳೆ, ‘ನನ್ನ ಮಗ ಬೆಂಗಳೂರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಅಲ್ಲಿಗೆ ಹೋಗುವ ಬದಲು 140 ಕೋಟಿ ಜನರ ಉಳಿವನ್ನು ಆದ್ಯತೆಯಾಗಿಟ್ಟುಕೊಂಡು ಇಲ್ಲಿಗೆ ಬಂದೆ’ ಎಂದು ಖರ್ಗೆ ಹೇಳಿದರು.

==

ಇದು ಸತ್ಯ-ಅಸತ್ಯದ ಸಮರ, ಸತ್ಯ ಗೆಲ್ಲುತ್ತೆ: ರಾಗಾ

- ಅಸತ್ಯದ ಮತಚೋರಿ ಮೂಲಕ ಮೋದಿ ಗೆದ್ದಿದ್ದಾರೆ

- ಸತ್ಯ ಮಾರ್ಗ ಅನುಸರಿಸಿ ಮೋದಿ ಸರ್ಕಾರ ಬೀಳಿಸ್ತೇವೆ

ನವದೆಹಲಿ: ಬಿಜೆಪಿ ಮತಚೋರಿಯಲ್ಲಿ ತೊಡಗಿದೆ ಎಂದು ಆರೋಪಿಸಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ರ್‍ಯಾಲಿಯಲ್ಲಿ ಮಾತನಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಸತ್ಯ ಮತ್ತು ಅಹಿಂಸೆಯ ಆಧಾರದಲ್ಲಿ ನಾವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸರ್ಕಾರವನ್ನು ಉರುಳಿಸುತ್ತೇವೆ’ ಎಂದು ಗುಡುಗಿದ್ದಾರೆ.

‘ಅಕ್ರಮದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದೊಂದಿಗೆ ಚುನಾವಣಾ ಆಯೋಗವೂ ಕೈಜೋಡಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೀಗ ಶಕ್ತಿ ಇರುವುದರಿಂದ ಅದನ್ನು ಬಳಸಿಕೊಂಡು ಮತಗಳವು ಮಾಡುತ್ತಿದ್ದಾರೆ. ಸತ್ಯ-ಅಸತ್ಯದ ಯುದ್ಧದಲ್ಲಿ ಚುನಾವಣಾ ಆಯೋಗವು ಬಿಜೆಪಿ ಜತೆ ಸೇರಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡಿದೆ. ಆದರೆ ನಾವು ಸತ್ಯದೊಂದಿಗೆ ನಿಂತು, ಅವರ ಸರ್ಕಾರವನ್ನು ಉರುಳಿಸುತ್ತೇವೆ. ಈ ಕಾನೂನನ್ನು ತೆಗೆದುಹಾಕಿ ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಹುಲ್‌ ಹೇಳಿದರು.ಜತೆಗೆ, ‘ಇದಕ್ಕೆ ಸಮಯ ಹಿಡಿಯುತ್ತದಾದರೂ ನಾವು ಸತ್ಯ, ಅಹಿಂದೆಯ ಆಸರೆಯಿಂದ ಮೋದಿ, ಅಮಿತ್‌ ಶಾರನ್ನು ಸೋಲಿಸುತ್ತೇವೆ’ ಎಂದು ಭರವಸೆ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!