ನವದೆಹಲಿ: ದೇಶದಲ್ಲಿ ಈ ಬಾರಿಯ ಮಳೆಗಾಲದ ಅವಧಿ ಅರ್ಧದಷ್ಟು ಕಳೆದಿದ್ದು, ದಕ್ಷಿಣ ಭಾರತದಲ್ಲಿ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ವಾಡಿಕೆಗಿಂತ ಅಧಕ ಮಳೆ ಆಗಿದೆ ಆಗಸ್ಟ್, ಸೆಪ್ಟೆಂಬರಲ್ಲೂ ಹೆಚ್ಚು ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಜುಲೈ ತಿಂಗಳಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.9ರಷ್ಟು ಹೆಚ್ಚು ಮಳೆಯಾಗಿದೆ. ದೇಶದ ಮಧ್ಯ ಭಾಗದಲ್ಲಿ ಶೇ.33ರಷ್ಟು ಹಾಗೂ ದಕ್ಷಿಣ ಭಾರತದಲ್ಲಿ ಶೇ.36ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆಯಂತೆ ದಕ್ಷಿಣ ಭಾರತದಲ್ಲಿ ಜುಲೈನಲ್ಲಿ 204 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 279 ಮಿ.ಮೀ. ಮಳೆಯಾಗಿದೆ.
ಇನ್ನು ಒಟ್ಟಾರೆ ಈ ಮುಂಗಾರು ಅವಧಿಯಲ್ಲಿ (ಜೂನ್-ಜುಲೈ ಸೇರಿ) ದಕ್ಷಿಣ ಭಾರತದಲ್ಲಿ ಈವರೆಗೆ ವಾಡಿಕೆಯ 365 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 463 ಮಿ.ಮೀ. ಮಳೆಯಾಗಿದೆ. ಅಂದರೆ ಶೇ.27ರಷ್ಟು ಹೆಚ್ಚು ಮಳೆಯಾಗಿದೆ.
ಆಗಸ್ಟ್, ಸೆಪ್ಟೆಂಬರ್‌ನಲ್ಲೂ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಶೇ.106ರಷ್ಟು ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.
ದೇಶದಲ್ಲಿ ಜೂ.1ರಿಂದ ಈವರೆಗೆ 445 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.2ರಷ್ಟು ಹೆಚ್ಚಾಗಿದೆ. ಆದರೆ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.35ರಿಂದ ಶೇ.45ರಷ್ಟು ಮಳೆ ಕೊರತೆಯಾಗಿದೆ. ಈಶಾನ್ಯ ಭಾರತದಲ್ಲಿ ಶೇ.19ರಷ್ಟು ಮಳೆ ಕೊರತೆಯಾಗಿದೆ.