ಭಾರತದ ಮೇಲೆ ಸದಾ ದಾಳಿಯ ದುಷ್ಕೃತ್ಯ ರೂಪಿಸುವ ಜೈಷ್‌, ಲಷ್ಕರ್‌ ಉಗ್ರರಿಗೆ ಹಮಾಸ್ ಸಾಥ್‌

KannadaprabhaNewsNetwork | Updated : Feb 07 2025, 05:27 AM IST

ಸಾರಾಂಶ

ಭಾರತದ ಮೇಲೆ ಸದಾ ದಾಳಿಯ ದುಷ್ಕೃತ್ಯ ರೂಪಿಸುವ ಪಾಕಿಸ್ತಾನದ ಲಷ್ಕರ್‌ ಎ ತೊಯ್ಬಾ ಮತ್ತು ಜೈಷ್‌ ಎ ಮೊಹಮ್ಮದ್‌ ಸಂಘಟನೆಗಳ ಜೊತೆಗೆ ಇದೀಗ ದೂರದ ಪಾಲೆಸ್ತೀನ್‌ನ ಹಮಾಸ್‌ ಕೂಡಾ ಕೈಜೋಡಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ಭಾರತದ ಮೇಲೆ ಸದಾ ದಾಳಿಯ ದುಷ್ಕೃತ್ಯ ರೂಪಿಸುವ ಪಾಕಿಸ್ತಾನದ ಲಷ್ಕರ್‌ ಎ ತೊಯ್ಬಾ ಮತ್ತು ಜೈಷ್‌ ಎ ಮೊಹಮ್ಮದ್‌ ಸಂಘಟನೆಗಳ ಜೊತೆಗೆ ಇದೀಗ ದೂರದ ಪಾಲೆಸ್ತೀನ್‌ನ ಹಮಾಸ್‌ ಕೂಡಾ ಕೈಜೋಡಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿ ಇತ್ತೀಚೆಗೆ ಜೈಷ್‌ ಮತ್ತು ಲಷ್ಕರ್‌ ಹಮ್ಮಿಕೊಂಡಿದ್ದ ಕಾಶ್ಮೀರ ಏಕತಾ ದಿನ ಕಾರ್ಯಕ್ರಮದಲ್ಲಿ ಹಮಾಸ್‌ನ ಡಾ.ಖಾಲಿದ್‌ ಅಲ್‌ ಖದ್ದೌಮಿ ನೇತೃತ್ವದ ನಿಯೋಗವೊಂದು ಮೊದಲ ಬಾರಿ ಕಾಣಿಸಿಕೊಂಡಿದ್ದು ಭಾರತಕ್ಕೆ ಆತಂತ ಸೃಷ್ಟಿಸಿದೆ. ಕಾಶ್ಮೀರವನ್ನು ಮತ್ತೊಂದು ಗಾಜಾ ಎಂದು ಬಿಂಬಿಸಲು ಉಗ್ರ ಸಂಘಟನೆಗಳು ಈ ವೇದಿಕೆ ಬಳಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಉಗ್ರರ ಸಮ್ಮೇಳನ:

ಪಾಕ್‌ ಆಕ್ರಮಿತ ಕಾಶ್ಮೀರದ ಶಹೀದ್‌ ಸಬೀರ್‌ ಸ್ಟೇಡಿಯಂನಲ್ಲಿ ಬುಧವಾರ ನಡೆದ ಕಾಶ್ಮೀರ ಏಕತಾ ದಿನದ ಕಾರ್ಯಕ್ರಮದಲ್ಲಿ ಜೈಷ್‌ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನ ಸೋದರ ತಲ್ಹಾ ಸೈಫ್‌, ಜೈಷ್‌ ಕಮಾಂಡರ್‌ ಅಸ್ಗರ್‌ ಖಾನ್‌ ಕಾಶ್ಮೀರಿಯಂಥ ಹಲವು ಪ್ರಮುಖರು ಉಗ್ರರು ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮಕ್ಕೆ ಆಗಮಿಸಿದ ಹಮಾಸ್ ಉಗ್ರರಿಗೆ ಕುದುರೆ ಮತ್ತು ಬೈಕ್‌ ಏರಿ ಬಂದ ಜೈಶ್‌ ಉಗ್ರರು ಬೆಂಗಾವಲು ನೀಡಿ, ಹಮಾಸ್ ಉಗ್ರರ ಧ್ವಜ ಹಿಡಿದುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.ವಿಎಚ್‌ಪಿ ಕಿಡಿ

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಾಲ್‌, ಜಮ್ಮು ಮತ್ತು ಕಾಶ್ಮೀರದಲ್ಲಿನ ದಾಳಿಗೆ ಪಾಕಿಸ್ತಾನವು ಹಮಾಸ್‌ ಉಗ್ರರ ನೆರವು ಪಡೆಯಲು ಮುಂದಾಗಿದೆ. ಸಂಸತ್ತಿನಲ್ಲಿ ಪ್ಯಾಲೆಸ್ತೀನ್‌ ಜಿಂದಾಬಾದ್‌ ಘೋಷಣೆ ಕೂಗುವ ಭಾರತದ ಹಮಾಸ್‌ ಪರ ಸಹಾನುಭೂತಿ ಉಳ್ಳ‍ವರು ಮತ್ತು ಮೂಲಭೂತವಾದಿ ಮುಸ್ಲಿಮರ ವಿರುದ್ಧ ಇದೇ ವೇಳೆ ಕಿಡಿಕಾರಿದ ಅ‍ವರು, ಈಗ ಈ ವಿಚಾರದಲ್ಲಿ ಅವರ ಮೌನ ಕುರಿತು ಪ್ರಶ್ನಿಸಿದ್ದಾರೆ. ಈ ಬೆಳವಣಿಗೆ ಬಳಿಕ ಭಾರತ ವಿರೋಧಿ ಶಕ್ತಿಗಳ ಬಣ್ಣ ಮತ್ತೊಮ್ಮೆ ಬಹಿರಂಗವಾದಂತಾಗಿದೆ ಎಂದು ಹೇಳಿದರು.

Share this article