2 ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ ಹರ್‍ಯಾಣದಲ್ಲಿ ಕಾಂಗ್ರೆಸ್‌, ಕಾಶ್ಮೀರದಲ್ಲಿ ಅತಂತ್ರ?

KannadaprabhaNewsNetwork |  
Published : Oct 06, 2024, 01:26 AM ISTUpdated : Oct 06, 2024, 07:37 AM IST
ಚುನಾವಣೆ | Kannada Prabha

ಸಾರಾಂಶ

ಹರ್ಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಕುರಿತ ಚುನಾವಣೋತ್ತರ ಸಮೀಕ್ಷಾ ವರದಿಗಳು ಶನಿವಾರ ಪ್ರಕಟವಾಗಿವೆ. ಹರ್ಯಾಣದಲ್ಲಿ 10 ವರ್ಷಗಳ ಬಳಿಕ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ  

ನವದೆಹಲಿ: ಹರ್ಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಕುರಿತ ಚುನಾವಣೋತ್ತರ ಸಮೀಕ್ಷಾ ವರದಿಗಳು ಶನಿವಾರ ಪ್ರಕಟವಾಗಿವೆ. ಹರ್ಯಾಣದಲ್ಲಿ 10 ವರ್ಷಗಳ ಬಳಿಕ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌- ಕಾಂಗ್ರೆಸ್‌ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಒಂದೇ ಹಂತದಲ್ಲಿ ಶನಿವಾರ ಚುನಾವಣೆ ನಡೆದಿದ್ದರೆ, ಜಮ್ಮು ಮತ್ತು ಕಾಶ್ಮೀರದ 90 ಸ್ಥಾನಕ್ಕೆ 3 ಹಂತದಲ್ಲಿ ಇತ್ತೀಚೆಗೆ ಚುನಾವಣೆ ನಡೆದಿತ್ತು. ಎರಡೂ ರಾಜ್ಯಗಳಲ್ಲಿ ಬಹುಮತಕ್ಕೆ 46 ಸ್ಥಾನಗಳು ಬೇಕಾಗಿದ್ದು, ಅ.8ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿಗೆ ಹರ್ಯಾಣ ಆಘಾತ:

ರಾಜ್ಯದಲ್ಲಿ ಹ್ಯಾಟ್ರಿಕ್‌ ಕನಸಿನಲ್ಲಿದ್ದ ಬಿಜೆಪಿಗೆ ಆಘಾತ ಎದುರಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ದಶಕದ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಚ್ಚಳ ಎನ್ನುವ ಅಂಕಿ-ಅಂಶಗಳನ್ನು ಬಹುತೇಕ ಸಮೀಕ್ಷೆಗಳು ಮುಂದಿಟ್ಟಿವೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ 50-65 ಸ್ಥಾನ ನೀಡಿವೆ. ಇದು ಬಹುಮತಕ್ಕೆ ಅಗತ್ಯವಾದ 46 ಸ್ಥಾನಕ್ಕಿಂತ ಹೆಚ್ಚು.

ಯಾರ ಸಮೀಕ್ಷೆ ಏನು?:

ದೈನಿಕ್‌ ಭಾಸ್ಕರ್‌ ಮಾಧ್ಯಮ ಸಂಸ್ಥೆಗೆ ಕಾಂಗ್ರೆಸ್‌ಗೆ 44-54 ಸ್ಥಾನ ಕೊಟ್ಟಿದ್ದರೆ, ಸಿ-ವೋಟರ್‌ ಇಂಡಿಯಾ 50-58, ರಿಪಬ್ಲಿಕ್‌ ಭಾರತ್‌- ಮ್ಯಾಟ್ರೈಜ್‌ 55-62, ರೆಡ್‌ ಮೈಕ್‌- ದತಾಂಶ್‌ 50-55, ಧ್ರುವ್‌ ರಿಸರ್ಚ್‌ 50-64, ಪೀಪಲ್ಸ್‌ ಪಲ್ಸ್‌ 49-60 ಸ್ಥಾನ ನೀಡಿವೆ.

ಇನ್ನು ದೈನಿಕ್‌ ಭಾಸ್ಕರ್‌ ಬಿಜೆಪಿಗೆ 15-29, ಸಿ-ವೋಟರ್‌ ಇಂಡಿಯಾ 20-28, ರಿಪಬ್ಲಿಕ್‌ ಭಾರತ್‌- ಮ್ಯಾಟ್ರೈಜ್‌ 18-24, ರೆಡ್‌ ಮೈಕ್‌- ದತಾಂಶ್‌ 20- 25, ಧ್ರುವ್‌ ರಿಸರ್ಚ್‌ 22-32, ಪೀಪಲ್ಸ್‌ ಪಲ್ಸ್‌ 20- 32 ಸ್ಥಾನ ನೀಡಿವೆ

ಹಣಾಹಣಿ:

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌, ಬಿಜೆಪಿ, ಜೆಜೆಪಿ ಮೈತ್ರಿಕೂಟ, ಐಎನ್‌ಎಲ್‌ಡಿ ಮೈತ್ರಿಕೂಟ, ಆಪ್‌ ಮತ್ತು ಪಕ್ಷೇತರರ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಮತದಾರರನ್ನು ಸೆಳೆಯಲು ಭರ್ಜರಿ ಉಚಿತ ಕೊಡುಗೆ ಮತ್ತು ಜನಪ್ರಿಯ ಘೋಷಣೆಗಳನ್ನು ಮಾಡಿದ್ದವು.

ಆದರೆ ಬಿಜೆಪಿಯ ದಶಕದ ಆಡಳಿತ ವಿರೋಧಿ ಅಲೆ, ಕೃಷಿ ಕಾಯ್ದೆ ವಿರೋಧಿ ಹೋರಾಟಗಳು ಈ ಬಾರಿ ಕಾಂಗ್ರೆಸ್‌ ಪರವಾಗಿ ಮತ ಚಲಾವಣೆಗೆ ನೆರವಾಗಿದೆ ಎನ್ನಲಾಗಿದೆ. ಒಂದು ವೇಳೆ ಸಮೀಕ್ಷೆ ನಿಜವಾದರೆ 10 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಇನ್ನೊಂದೆಡೆ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ, ಜೊತೆಗೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಆಪ್‌ ಆಸೆಗೂ ದೊಡ್ಡ ಹೊಡೆತ ಬೀಳಲಿದೆ.

ಕಾಶ್ಮೀರ ಅತಂತ್ರ:

ದಶಕದ ಬಳಿಕ ವಿಧಾನಸಭಾ ಚುನಾವಣೆ ಎದುರಿಸಿದ್ದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 2014ರಲ್ಲಿ ಕಡೆಯ ಬಾರಿ ಚುನಾವಣೆ ನಡೆದಾಗಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಪಿಡಿಪಿ- ಬಿಜೆಪಿ ಸರ್ಕಾರ ರಚನೆಯಾಗಿತ್ತು. ಬಳಿಕ ಸರ್ಕಾರ ಕುಸಿದುಬಿದ್ದು, 2019ರಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾಗಿತ್ತು. ಅದಾದ ನಂತರ ಇದೀಗ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಮಾಡಿಕೊಂಡು ಚುನಾವಣೆಗೆ ಸೆಣಸಿದ್ದವು. ಮತ್ತೊಂದೆಡೆ ಪಿಡಿಪಿ ಮತ್ತು ಬಿಜೆಪಿ ಏಕಾಂಗಿಯಾಗಿ ಕಣಕ್ಕೆ ಇಳಿದಿದ್ದವು

ಫಲಿತಾಂಶ ಏನಾಗಬಹುದು?:ಕೆಲವು ಸಮೀಕ್ಷೆಗಳು ನ್ಯಾಷನಲ್‌ ಕಾನ್ಫರೆನ್ಸ್‌ - ಕಾಂಗ್ರೆಸ್‌ ಮೈತ್ರಿಕೂಟ ಅತಿಹೆಚ್ಚು ಸ್ಥಾನ ಪಡೆದರೂ ಬಹುಮತಕ್ಕೆ ಅಗತ್ಯವಾದ 46 ಸ್ಥಾನಗಳಿಗಿಂತ ಕೊಂಚ ಹಿಂದುಳಿಯಬಹುದು ಎಂದು ಹೇಳಿದ್ದರೆ, ಇನ್ನು ಕೆಲ ಸಮೀಕ್ಷೆಗಳು ಮೈತ್ರಿಕೂಟಕ್ಕೆ ಸ್ಪಷ್ಟಬಹುಮತದ ಸುಳಿವು ನೀಡಿವೆ. ಹೀಗಾಗಿ ಚುನಾವಣಾ ಫಲಿತಾಂಶ ಭಾರೀ ಕುತೂಹಲ ಮೂಡಿಸಿದೆ.

ಯಾರ ಸಮೀಕ್ಷೆ ಏನು?:

ಸಿ- ವೋಟರ್‌ ಹಾಗೂ ಇಂಡಿಯಾ ಟುಡೇ ಸಂಸ್ಥೇಗಳು ನ್ಯಾಷನಲ್‌ ಕಾನ್ಫರೆನ್ಸ್‌- ಕಾಂಗ್ರೆಸ್‌ಗೆ 40-48, ದೈನಿಕ್ ಭಾಸ್ಕರ್‌ 35-40, ಆ್ಯಕ್ಸಿಸ್‌ ಮೈ ಇಂಡಿಯಾ 35-45, ಪೀಪಲ್ಸ್‌ ಪಲ್ಸ್‌ 46-50, ರಿಪಬ್ಲಿಕ್‌- ಗುಲಿಸ್ತಾನ್‌ 31-36 ಸ್ಥಾನ ನೀಡಿವೆ.

ಇನ್ನು ಸಿ- ವೋಟರ್‌ ಹಾಗೂ ಇಂಡಿಯಾ ಟುಡೇ ಬಿಜೆಪಿಗೆ 27-32, ದೈನಿಕ್ ಭಾಸ್ಕರ್‌ 20-25, ಆ್ಯಕ್ಸಿಸ್‌ ಮೈ ಇಂಡಿಯಾ 24-34, ಪೀಪಲ್ಸ್‌ ಪಲ್ಸ್‌ 23-27, ರಿಪಬ್ಲಿಕ್‌- ಗುಲಿಸ್ತಾನ್‌ 28-30 ಸ್ಥಾನ ನೀಡಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ