ಇಂದೋರ್ (ಮಧ್ಯಪ್ರದೇಶ) : ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ-ಕಮಾಲ್ ಮೌಲಾ ಮಸೀದಿ ಕಟ್ಟಡ ಸಂಕೀರ್ಣದ ದಶಕಗಳಷ್ಟು ಹಳೆದ ವಿವಾದಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಭೋಜಶಾಲಾ ಕಟ್ಟಡವು ‘ವಾಗ್ದೇವಿ ಸರಸ್ವತಿ ದೇವಿ ದೇಗುಲ’ ಎಂದು ಹೇಳಿದೆ. ಜತೆಗೆ, ಈ ಕಟ್ಟಡ ಸಂಕೀರ್ಣದಲ್ಲಿ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಿ ಪುರಾತತ್ವ ಇಲಾಖೆ 2003ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ. ಇದರೊಂದಿಗೆ ಅಯೋಧ್ಯೆ ರಾಮಮಂದಿರದ ಬಳಿಕ ಹಿಂದೂಗಳಿಗೆ ದೇಗುಲ ವಿಷಯದಲ್ಲಿ ಮತ್ತೊಂದು ದೊಡ್ಡ ಗೆಲುವು ಸಿಕ್ಕಂತೆ ಆಗಿದೆ.
‘11ನೇ ಶತಮಾನದ ಭೋಜಶಾಲಾ ಕಟ್ಟಡ ಸಂಕೀರ್ಣವನ್ನು ಕಮಾಲ್ ಮೌಲಾ ಮಸೀದಿ ಎಂದು ವಾದಿಸುತ್ತಿರುವ ಮುಸ್ಲಿಂ ಸಮುದಾಯದವರು ಪ್ರತ್ಯೇಕ ಮಸೀದಿ ನಿರ್ಮಾಣಕ್ಕಾಗಿ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರವು ಕಾನೂನು ರೀತಿಯಲ್ಲಿ ಆ ಮನವಿಯನ್ನು ಪರಿಗಣಿಸಬಹುದಾಗಿದೆ’ ಎಂದೂ ನ್ಯಾ। ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾ.ಅಲೋಕ್ ಅವಸ್ಥಿ ಅವರಿದ್ದ ಪೀಠ ತಿಳಿಸಿದೆ.
ಆದರೆ, ಮುಸ್ಲಿಮರು ಹೈಕೋರ್ಟ್‌ನ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದಾರೆ.
‘ವಿವಾದಿತ ಸ್ಥಳದಲ್ಲಿ ಹಿಂದೂ ಪೂಜೆಯ ನಿರಂತರತೆ ಎಂದಿಗೂ ಅಳಿಸಿಹೋಗಿಲ್ಲ. ಐತಿಹಾಸಿಕ ದಾಖಲೆಗಳು, ಪುರಾತತ್ವ ದಾಖಲೆಗಳು ಹಾಗೂ ಐತಿಗಾಸಿಕ ಸಾಹಿತ್ಯಿಕ ಸಾಕ್ಷ್ಯಗಳು ಭೋಜಾಶಾಲಾವು ಸರಸ್ವತಿ ದೇವಿಗೆ ಮೀಸಲಾದ ಸ್ಥಳ ಎಂದೇ ಸಾಕ್ಷೀಕರಿಸುತ್ತವೆ. ಇದು ಪರಮಾರ ರಾಜವಂಶದ ರಾಜಭೋಜರಿಗೆ ಸಂಬಂಧಿಸಿದ ಸ್ಥಳ. ರಾಜಬೋಜರು ಧಾರ್ ಅನ್ನು ಸಂಸ್ಕೃತ ವಿದ್ಯಾಕೇಂದ್ರವಾಗಿ ಪರಿವರ್ತಿಸಿದ್ದರು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭೋಜಶಾಲಾ ಕಟ್ಟಡ ಹಿಂದಿನಿಂದಲೇ ಅಂದರೆ 1935-36ನೇ ಅವಧಿಯಲ್ಲೇ ವಿವಾದ ಎದ್ದಿತ್ತು. ಮುಸ್ಲಿಮರು ಈ ಕಟ್ಟಡದಲ್ಲಿ ನಮಾಜ್‌ಗೆ ಅವಕಾಶ ನೀಡುವಂತೆ ಆಗ್ರಹಿಸಿದಾಗ ಹಿಂದೂಗಳು ವಿರೋಧಿಸಿದ್ದರು. ಭೋಜಶಾಲಾ ವಿವಾದ ಜೋರಾದಾಗ ಏ.7, 2003ರಂದು ಪುರಾತತ್ವ ಇಲಾಖೆ ಹಿಂದೂಗಳಿಗೆ ಈ ವಿವಾದಾತ್ಮಕ ಜಾಗದಲ್ಲಿ ಪ್ರತಿ ಮಂಗಳವಾರ ಪೂಜೆ ಮತ್ತು ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್‌ಗೆ ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಹಿಂದೂಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ನಡುವೆ, ಹೈಕೋರ್ಟ್ ಆದೇಶದಂತೆ ಪುರಾತತ್ವ ಇಲಾಖೆಯು 2024ರಲ್ಲಿ ವೈಜ್ಞಾನಿಕ ಸರ್ವೆ ನಡೆಸಿ 2 ಸಾವಿರ ಪುಟಗಳ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ವಿವಾದಾತ್ಮಕ ಕಟ್ಟಡವು ಆಗಿನ ಪರಮಾರ್ ದೊರೆ ರಾಜಭೋಜನಿಗೆ ಸೇರಿದ್ದು ಎಂದು ಸ್ಪಷ್ಟವಾಗಿ ಹೇಳಿತ್ತು. ಉತ್ಖನನದ ವೇಳೆ ಸಿಕ್ಕ ನಾಣ್ಯಗಳು, ಕಲಾಕೃತಿಗಳು ಮತ್ತು ಶಾಸನಗಳನ್ನು ಆಧರಿಸಿ ಈ ವರದಿ ನೀಡಿತ್ತು
ಹಿಂದೂ, ಮುಸ್ಲಿಂ, ಜೈನರ ಕಿತ್ತಾಟ
ವಿವಾದಿತ ಭೋಜಶಾಲಾ ಕಟ್ಟಡ ಸಂಕೀರ್ಣವನ್ನು ಹಿಂದೂಗಳು ವಾಗ್ದೇವಿಯ ದೇಗುಲ ಎಂದು ಪ್ರತಿಪಾದಿಸುತ್ತಾ ಬಂದಿದ್ದರೆ, ಮುಸ್ಲಿಮರು ಕಮಲ್ ಮೌಲಾ ಮಸೀದಿ ಎಂದು ವಾದ ಮಂಡಿಸಿದ್ದರು. ಈ ನಡುವೆ, ಜೈನ ಸಮುದಾಯದ ಅರ್ಜಿದಾರರು, ‘ಇದು ಜೈನ ದೇವಸ್ಥಾನ, ಗುರುಕುಲ’ ಎಂದು ಹೇಳಿಕೊಂಡಿದ್ದರು. ಆದರೆ ಮೂಲತಃ ರಾಜಭೋಜರ ಕಾಲದಲ್ಲಿ ನಿರ್ಮಿಸಿದ 11ನೇ ಶತಮಾನದ ಈ ದೇಗುಲವು ಬಳಿಕ ಅಲ್ಲಾವುದ್ದೀನ್ ಖಿಲ್ಜಿ, ಇತರೆ ಮುಸ್ಲಿಂ ರಾಜರ ದಾಳಿಯಿಂದ ಹಾನಿಗೊಂಡಿತ್ತು. ಆ ಬಳಿಕ ದೇಗುಲ ಮಸೀದಿಯಾಗಿ ಪರಿವರ್ತನೆಯಾಗಿತ್ತು. ಈ ದೇಗುಲವನ್ನು ಸೂಫಿ ಸಂತ ಕಮಾಲುದ್ದೀನ್ ಚಿಸ್ತಿಯ ದರ್ಗಾ ಎಂದೇ ಮುಸ್ಲಿಮರು ವಾದಿಸಿಕೊಂಡು ಬಂದಿದ್ದರು.
ಬ್ರಿಟನ್‌ನಲ್ಲಿದೆ ಸರಸ್ವತಿ ಮೂರ್ತಿ!
ಭೋಜಶಾಲೆಯಲ್ಲಿ ರಾಜಭೋಜ ಪ್ರತಿಷ್ಠಾಪಿಸಿದ್ದ ಸರಸ್ವತಿ ಮೂರ್ತಿಯು ಸದ್ಯ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿದೆ ಎನ್ನಲಾಗಿದೆ. ಈ ಮೂರ್ತಿಯನ್ನು ವಾಪಸ್ ತರಲು ಪ್ರಯತ್ನ ಮುಂದುವರಿಸಬೇಕು ಎಂದು ಇದೇ ವೇಳೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಈ ವಿಗ್ರಹವನ್ನು ರಾಜಭೋಜ 1010 ಮತ್ತು 1055ನೇ ಇಸವಿಯ ನಡುವೆ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಿದ್ದರು ಎನ್ನಲಾಗಿದೆ.
* ಏನಿದು ಭೋಜ್‌ಶಾಲಾ ವಿವಾದ?
- 11ನೇ ಶತಮಾನದಲ್ಲಿ ರಾಜಾ ಭೋಜ ಮಧ್ಯಪ್ರದೇಶದ ಧಾರ್‌ನಲ್ಲಿ ಸರಸ್ವತಿ ದೇವಾಲಯ ನಿರ್ಮಿಸಿದ್ದ
- 13ನೇ ಶತಮಾನದಲ್ಲಿ ದೇಗುಲದ ಆಸುಪಾಸಲ್ಲಿದ್ದ ಕಮಾಲುದ್ದೀನ್ ಮೌಲ್ವಿ ಎಂಬ ಸೂಫಿ ಸಂತ ನಿಧನ
- ದೇಗುಲದ ಆವರಣದಲ್ಲೇ ಮೌಲ್ವಿ ಸಮಾಧಿ. ಆಗ ಇದಕ್ಕೆ ಕಮಾಲ್ ಮೌಲಾ ಮಸೀದಿ ಎಂದೂ ಹೆಸರು
- ಕೆಲವು ವರ್ಷ ಹಿಂದೆ ಈ ವಿಷಯ ಕೋರ್ಟ್‌ಗೆ. ಇದು ತಮ್ಮದು ಎಂದು ಹಿಂದು-ಮುಸ್ಲಿಂ ಪಂಗಡಗಳ ವಾದ
- 2003ರಿಂದ ಮುಸ್ಲಿಮರಿಗೆ ಶುಕ್ರವಾರ ನಮಾಜ್‌ಗೆ, ಹಿಂದುಗಳಿಗೆ ಮಂಗಳವಾರ ದೇವಿ ಪೂಜೆಗೆ ಅವಕಾಶ
- ಈಗ ಇಡೀ ಕಟ್ಟಡವು ಸರಸ್ವತಿ ದೇಗುಲ ಎಂದು ತೀರ್ಪು ಪ್ರಕಟ. ಮುಸ್ಲಿಮರಿಂದ ಮೇಲ್ಮನವಿ ಸಾಧ್ಯತೆ
--ಇಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಹಿಂದೂಗಳಿಗೆ ಪೂಜೆ ಮಾಡುವ ಹಕ್ಕನ್ನು ನೀಡಿದೆ ಮತ್ತು ಭೋಜಶಾಲಾ ಸಂಕೀರ್ಣವನ್ನು ರಾಜ ಭೋಜ್‌ಗೆ ಸೇರಿದೆ ಎಂದು ಗುರುತಿಸಿದೆ. ಧರ್ಮ್ ಕಿ ಜೈ ಹೋ, ಅಧರ್ಮ್ ಕಾ ನಾಶ್ ಹೋ. ಜೈ ಮಾ ವಾಗ್ದೇವಿ.
- ವಿಷ್ಣುಶಂಕರ ಜೈನ್, ಹಿಂದು ಪರ ವಕೀಲ