;Resize=(412,232))
ನವದೆಹಲಿ: ‘ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ಅವುಗಳನ್ನು ನಡೆಸುವ ಚುನಾವಣಾ ಆಯೋಗವು ಸ್ವತಂತ್ರವಾಗಿದ್ದರೆ ಸಾಲದು, ಹೊರಗಿಂದ ನೋಡುವವರಿಗೂ ಆ ಸ್ವಾತಂತ್ರ್ಯ ಕಾಣಿಸುವಂತಿರಬೇಕು’ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ಮುಖ್ಯ ಚುನಾವಣಾ ಆಯುಕ್ತರ(ಸಿಇಸಿ) ಆಯ್ಕೆಗೆ ಸಂಬಂಧಿಸಿದಂತೆ 2023ರಲ್ಲಿ ಜಾರಿಗೆ ತರಲಾದ ಹೊಸ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 6 ಅರ್ಜಿಗಳ ವಿಚಾರಣೆ ನಡೆಸಲಾಗುತ್ತಿತ್ತು. ಈ ವೇಳೆ ಪೀಠದಲ್ಲಿದ್ದ ನ್ಯಾ। ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ, ಸಿಇಸಿ ಆಯ್ಕೆ ಸಮಿತಿಯಲ್ಲಿ ಸುಪ್ರೀಂನ ಮುಖ್ಯ ನ್ಯಾಯಮೂರ್ತಿಯವರ ಜಾಗದಲ್ಲಿ ಈಗ ಇರುವ ಕೇಂದ್ರ ಸಚಿವರು ಸಹಜವಾಗಿ ಸರ್ಕಾರದ ಪರವಾಗಿರುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸರ್ಕಾರದ ಪರ ಹಾಜರಾಗಿದ್ದ ವಕೀಲ ಆರ್. ವೆಂಕಟರಮಣಿ, ‘ಆಯೋಗದ ಕಾರ್ಯದಲ್ಲಿ ಸ್ವಾತಂತ್ರ್ಯದ ಕೊರತೆ ಕಾಣದ ಹೊರತು ಕಾನೂನನ್ನು ಅಮಾನ್ಯ ಮಾಡಲಾಗದು’ ಎಂದು ವಾದಿಸಿದರು. ಜತೆಗೆ, ಶಾಸಕಾಂಗದ ವ್ಯಾಪ್ತಿಗೆ ಕೋರ್ಟ್ ಬಂದು ಸಂಸತ್ತಿನ ಎರಡನೇ ಸದನದಂತೆ ವರ್ತಿಸಬಾರದು’ ಎಂದರು. ಇದಕ್ಕೆ ಪೀಠ, ‘ನಮ್ಮ ಲಕ್ಷ್ಮಣ ರೇಖೆ ಎಲ್ಲಿವರೆಗಿದೆ ಎಂದು ನಮಗೆ ಗೊತ್ತು. ಅದನ್ನು ಮೀರುವುದಿಲ್ಲ’ ಎಂದು ಖಾರವಾಗಿ ನುಡಿದರು.
ಈ ಮೊದಲು, ಸಿಇಸಿ ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಮತ್ತು ಸಿಜೆಐ ಇರುತ್ತಿದ್ದರು. ಆದರೆ 2024ರ ಜ.2ರಂದು ಜಾರಿಗೆ ಬಂದ ನಿಯಮದ ಪ್ರಕಾರ, ಸಿಜೆಐ ಬದಲು ಕೇಂದ್ರ ಸಚಿವರೊಬ್ಬರು ಇರುತ್ತಾರೆ. ಇದರಿಂದಾಗಿ ಸಿಇಸಿ ಆಯ್ಕೆಯಲ್ಲಿ ತಟಸ್ಥ ವ್ಯಕ್ತಿಗಳೇ ಇರದೆ, ಪೂರ್ಣ ನಿಯಂತ್ರಣ ಸರ್ಕಾರದ ಕೈಗೆ ಹೋಗುತ್ತದೆ ಎಂಬುದು ಸುಪ್ರೀಂ ಕೋರ್ಟ್‌ನ ಕಾಳಜಿ.