ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ: ಹೈಕೋರ್ಟ್‌

KannadaprabhaNewsNetwork |  
Published : Dec 06, 2025, 02:00 AM IST
ಧ್ವನಿವರ್ಧಕ | Kannada Prabha

ಸಾರಾಂಶ

ಮಸೀದಿಯಲ್ಲಿ ಧ್ವನಿ ವರ್ಧಕ ಬಳಸುವುದಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ವಜಾಗೊಳಿಸಿದೆ. ಇದೇ ವೇಳೆ ಯಾವುದೇ ಧರ್ಮವು ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆ ಮಾಡುವುದು ಕಡ್ಡಾಯ ಎಂದಿಲ್ಲ ಅಭಿಪ್ರಾಯ ಅಭಿಪ್ರಾಯ ಪಟ್ಟಿದೆ.

ನಾಗ್ಪುರ: ಮಸೀದಿಯಲ್ಲಿ ಧ್ವನಿ ವರ್ಧಕ ಬಳಸುವುದಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ವಜಾಗೊಳಿಸಿದೆ. ಇದೇ ವೇಳೆ ಯಾವುದೇ ಧರ್ಮವು ಧ್ವನಿವರ್ಧಕಗಳನ್ನು ಬಳಸಿ ಪ್ರಾರ್ಥನೆ ಮಾಡುವುದು ಕಡ್ಡಾಯ ಎಂದಿಲ್ಲ ಅಭಿಪ್ರಾಯ ಅಭಿಪ್ರಾಯ ಪಟ್ಟಿದೆ.

ಗೊಂಡಿಯಾ ಜಿಲ್ಲೆಯ ಗೌಸಿಯಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧ್ವನಿ ವರ್ಧಕ ಬಳಸುವುದಕ್ಕೆ ಅವಕಾಶ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ದ್ವಿಸದಸ್ಯ ಪೀಠ, ಅರ್ಜಿದಾರರು ಧಾರ್ಮಿಕ ಪ್ರಾರ್ಥನೆಯಲ್ಲಿ ಧ್ವನಿವರ್ಧಕ ಬಳಕೆಯ ಅಗತ್ಯ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ಪರಿಗಣಿಸಿ ಅವಕಾಶಕ್ಕೆ ನಿರಾಕರಿಸಿತು. ಇದೇ ವೇಳೆ , ‘ಯಾವುದೇ ಧರ್ಮವು ಧ್ವನಿವರ್ಧಕ, ಡ್ರಮ್‌ ಬಾರಿಸುವ ಮೂಲಕ ಪ್ರಾರ್ಥಿಸಬೇಕೆಂದು ಹೇಳುವುದಿಲ್ಲ’ ಎನ್ನುವ ಸುಪ್ರೀಂ ತೀರ್ಪನ್ನು ಪುನರುಚ್ಚರಿಸಿತು.

==

ಶಬರಿಮಲೆ ಚಿನ್ನಕ್ಕೆ ಕನ್ನ: ತನಿಖಾ ದಾಖಲೆ ಕೋರಿ ಇ.ಡಿ. ಅರ್ಜಿ

ಕೊಲ್ಲಂ (ಕೇರಳ): ಶಬರಿಮಲೆಯ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯ ದಾಖಲೆಗಳನ್ನು ಕೋರಿ ಜಾರಿ ನಿರ್ದೇಶನಾಲಯವು (ಇ.ಡಿ.) ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಮೂಲಕ ಪ್ರಕರಣದ ತನಿಖೆಗೆ ಇ.ಡಿ. ಕೂಡ ಪ್ರವೇಶಿಸುವುದು ಪಕ್ಕಾ ಆಗಿದೆ.‘ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆಯೇ, ಅಕ್ರಮದಿಂದ ಬಂದ ಹಣದ ಮಾರ್ಗಗಳ ಕುರಿತು ತನಿಖೆಗೆ ಎಸ್‌ಐಟಿಯ 2 ಎಫ್‌ಐಆರ್‌ ಮತ್ತು ಇನ್ನಿತರ ದಾಖಲೆಗಳ ಪ್ರತಿ ಬೇಕಾಗಿದ್ದು, ಇದನ್ನು ಸಂಪೂರ್ಣವಾಗಿ ಗೌಪ್ಯವಾಗಿಡುತ್ತೇವೆ’ ಎಂದು ಇ.ಡಿ. ಕೋರಿದೆ.

ಆದರೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಇದಕ್ಕೆ ಆಕ್ಷೇಪ ಎತ್ತಿದ್ದು, ಈಗಾಗಲೇ ತನಿಖೆ ನಡೆಯುತ್ತಿರುವುದರಿಂದ, ದಾಖಲೆ ಸಲ್ಲಿಕೆಗೆ ಆಸ್ಪದವಿಲ್ಲ’ ಎಂದು ಹೇಳಿದ್ದಾರೆ.

==

ನಿಯಮ ಪಾಲಿಸದ ಟ್ವೀಟರ್‌ಗೆ ಇಯು ₹12 ಸಾವಿರ ಕೋಟಿ ದಂಡ

ಲಂಡನ್‌: ಡಿಜಿಟಲ್ ಸೇವೆಗಳ ಕಾಯ್ದೆ (ಡಿಎಸ್‌ಎ) ಎಂದು ಕರೆಯಲ್ಪಡುವ ತಮ್ಮ ಒಕ್ಕೂಟದ ಡಿಜಿಟಲ್‌ ನಿಯಮಗಳನ್ನು ಪಾಲಿಸದ ಕಾರಣ ಯುರೋಪ್‌ ಒಕ್ಕೂಟ, ವಿಶ್ವದ ಅತಿ ಸಿರಿವಂತ ಎಲಾನ್‌ ಮಸ್ಕ್‌ ಅವರ ಎಕ್ಸ್‌ಗೆ (ಟ್ವೀಟರ್‌) 12 ಸಾವಿರ ಕೋಟಿ ರು. ದಂಡ ವಿಧಿಸಿದೆ.2 ವರ್ಷಗಳ ಹಿಂದೆ ಎಕ್ಸ್‌ ವಿರುದ್ಧ ತನಿಖೆ ಆರಂಭಿಸಿದ್ದ ಯುರೋಪಿಯನ್ ಕಮಿಷನ್ ಈ ಆದೇಶ ಹೊರಡಿಸಿದೆ. ಡಿಎಸ್‌ಎ ಅಡಿಯಲ್ಲಿ, ಸಾಮಾಜಿಕ ಮಾಧ್ಯಮಗಳು ತಮ್ಮಲ್ಲಿನ ಅಪಾಯಕಾರಿ ಮತ್ತು ಅಕ್ರಮ ಕಾಂಟೆಂಟ್‌ಗಳನ್ನು ತೆಗೆದುಹಾಕಿ, ಯುರೋಪ್‌ ಬಳಕೆದಾರರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಎಕ್ಸ್‌, 3 ನಿಯಮಗಳನ್ನು ಉಲ್ಲಂಘಿಸಿದೆ ಎನ್ನಲಾಗಿದೆ.ಹಣ ಪಾವತಿಸಿ ಬ್ಲೂ ಟಿಕ್‌ ಪಡೆಯಬಹುದಾಗಿರುವುದರಿಂದ ಖಾತೆಗಳ ಸತ್ಯಾಸತ್ಯತೆ ತಿಳಿಯುವಲ್ಲಿ ಬಳಕೆದಾರರು ಮೋಸ ಹೋಗಬಹುದು. ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ಪಡೆಯಲಾಗುತ್ತಿಲ್ಲ. ಸಂಶೋಧಕರಿಗೆ ಟ್ವೀಟ್‌ಗಳು, ಟ್ರೇಂಡ್‌ಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಪಡೆಯಲು ಎಕ್ಸ್‌ನಲ್ಲಿ ಕಷ್ಟವಾಗುತ್ತಿದೆ ಎಂಬುದು ಇಯುನ ಆರೋಪ.

==

ಕ್ಲೌಡ್‌ ಸರ್ವರ್‌ ಸಮಸ್ಯೆ: ಹಲವು ಆ್ಯಪ್‌, ವೆಬ್‌ಸೈಟ್‌ಗಳಿಗೆ ಅಡಚಣೆ

ನವದೆಹಲಿ: ಜಾಗತಿಕ ಇಂಟರ್ನೆಟ್‌ ಸೇವೆ ಒದಗಿಸುವ ಕ್ಲೌಡ್‌ಫ್ಲೇರ್‌ನಲ್ಲಿ ಶುಕ್ರವಾರ ಮತ್ತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ಹಲವು ಆ್ಯಪ್‌, ವೆಬ್‌ಸೈಟ್‌ಗಳ ಬಳಕೆದಾರರು ಕೆಲ ಕಾಲ ಇಂಟರ್ನೆಟ್‌ ಸೇವೆಯಲ್ಲಿ ಅಡಚಣೆ ಅನುಭವಿಸಿದರು. ಇದು ಕಳೆದೊಂದು ತಿಂಗಳಲ್ಲಿ ನಡೆದ 2ನೇ ಘಟನೆ.ಕ್ಲೌಡ್‌ಫ್ಲೇರ್‌ ಸರ್ವರ್‌ ಸಮಸ್ಯೆಯಿಂದ ಕ್ಯಾನ್ವಾ, ಡೌನ್‌ಡೆಕ್ಟರ್‌ನಂತಹ ಆ್ಯಪ್‌ಗಳಲ್ಲಿ ಬಳಕೆದಾರರು ಲಾಗಿನ್‌ ಸಮಸ್ಯೆ ಎದುರಿಸಿದರು. ಭಾರತದ ಹಲವು ಸುದ್ದಿ ಸಂಸ್ಥೆಗಳ ವೆಬ್‌ಸೈಟ್‌ಗಳು ಸೇರಿದಂತೆ ಬೇರೆ ಬೇರೆ ಜಾಲತಾಣಗಳಲ್ಲಿಯೂ ಇಂಟರ್ನೆಟ್‌ ಬಳಕೆಯಲ್ಲಿ ಅಡಚಣೆ ಉಂಟಾಯಿತು ಈ ಬಗ್ಗೆ ಕ್ಲೌಡ್‌ಫ್ಲೇರ್‌ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಈ ಸಮಸ್ಯೆಯಿಂದ ಅಸಮಾಧಾನಗೊಂಡ ಬಳಕೆದಾರರು ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನವೆಂಬರ್‌ನಲ್ಲಿಯೂ ಕ್ಲೌಡ್‌ಫ್ಲೇರ್‌ನಲ್ಲಿ ಇಂತಹದ್ದೇ ಸಮಸ್ಯೆ ಕಾಣಿಸಿಕೊಂಡು ಎಕ್ಸ್‌, ಚಾಟ್‌ಜಿಪಿಟಿ, ಕ್ಯಾನ್ವಾ ಸೇರಿದಂತೆ ಹಲವು ಆ್ಯಪ್‌ಗಳು ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು: ಸುಪ್ರೀಂ
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ