ವಿಶ್ವದ ನಂ.1 ಶ್ರೀಮಂತ ಹಾಗೂ ಇತ್ತೀಚೆಗೆ ಅಮೆರಿಕ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಎಲಾನ್ ಮಸ್ಕ್ ಮನಸಿನ ಸ್ಥಿತಿ ಸರಿಯಿಲ್ಲ. ಶೀಘ್ರ ಅವರು ಬುದ್ಧಿಮಾಂದ್ಯ ಆಗುವ ಸಾಧ್ಯತೆ ಇದೆ ಎಂದು ಅವರ ಜೀವನ ಚರಿತ್ರೆ ಬರೆದ ಸೇಥ್ ಅಬ್ರಾಮ್ಸನ್ ಹೇಳಿದ್ದಾರೆ.
ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ ಹಾಗೂ ಇತ್ತೀಚೆಗೆ ಅಮೆರಿಕ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಎಲಾನ್ ಮಸ್ಕ್ ಮನಸಿಕ ಸ್ಥಿತಿ ಸರಿಯಿಲ್ಲ. ಶೀಘ್ರ ಅವರು ಬುದ್ಧಿಮಾಂದ್ಯ ಆಗುವ ಸಾಧ್ಯತೆ ಇದೆ ಎಂದು ಅವರ ಜೀವನ ಚರಿತ್ರೆ ಬರೆದ ಸೇಥ್ ಅಬ್ರಾಮ್ಸನ್ ಹೇಳಿದ್ದಾರೆ.
ಈ ಕುರಿತು ಮಸ್ಕ್ ಒಡೆತನದ ಎಕ್ಸ್‌ನಲ್ಲೇ ಪೋಸ್ಟ್ ಮಾಡಿರುವ ಅವರು, ‘ನಾನು ಕಳೆದ 2 ವರ್ಷಗಳಿಂದ ನಿರಂತರವಾಗಿ ಮಸ್ಕ್‌ರ ಆನ್‌ಲೈನ್ ನಡವಳಿಕೆಯನ್ನು ಗಮನಿಸುತ್ತಿದ್ದೇನೆ. ಅವರು ಅತಿಯಾಗಿ ನಶಾ ಪದಾರ್ಥ ಸೇವಿಸುತ್ತಿದ್ದು, ವಿಪರೀತ ಒತ್ತಡದಲ್ಲಿದ್ದಾರೆ’ ಎಂದಿದ್ದಾರೆ.
ಜತೆಗೆ, ‘ಅಂತರಿಕ್ಷಯಾನ, ವಿದ್ಯುತ್ ವಾಹನ, ಸಾಮಾಜಿಕ ಮಾಧ್ಯಮ, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ನಿರ್ಣಾಯಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಮಸ್ಕ್, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಡಿಒಜಿಇ ಮುಖ್ಯಸ್ಥರಾಗಿದ್ದಾರೆ. ಅವರ ಹುಚ್ಚುತನ ಹಾಗೂ ಹಿಂಸೆಗೆ ಪ್ರಚೋದನೆ ನಮಗೆಲ್ಲ ಅಪಾಯ ಉಂಟುಮಾಡುತ್ತದೆ. ಅಮೆರಿಕವನ್ನು ಮಸ್ಕ್‌ರಿಂದ ರಕ್ಷಿಸಿ’ ಎಂದು ಎಚ್ಚರಿಸಿದ್ದಾರೆ.
ಅಂತೆಯೇ, ಅಧ್ಯಕ್ಷ ಜೋ ಬೈಡೆನ್ ಅಧಿಕಾರಾವಧಿ ಸಂಪನ್ನಗೊಳ್ಳುವ ಮೊದಲೇ ಮಸ್ಕ್‌ರೊಂದಿಗಿನ ಸರ್ಕಾರದ ಎಲ್ಲಾ ಒಪ್ಪಂದಗಳನ್ನು ರದ್ದುಗೊಳಿಸಿ, ಅಸಾಂವಿಧಾನಿಕ ಹುದ್ದೆಯಾದ ಡಿಒಜಿಇ ವಿರುದ್ಧ ಮೊಕದ್ದಮೆ ಸಲ್ಲಿಸಲು ಅಬ್ರಾಮ್ಸನ್ ಸೂಚಿಸಿದ್ದಾರೆ.
ಸ್ಪೇಡೆಕ್ಸ್ ನೌಕೆಗಳ ನಡುವೆ ಕೇವಲ 1.5 ಕಿಮೀ ಅಂತರ
ಬೆಂಗಳೂರು: ಡಾಕಿಂಗ್ ಪ್ರಯೋಗಕ್ಕೆ ಉದ್ದೇಶಿಸಲಾಗಿರುವ ಸ್ಪೇಡೆಕ್ಸ್‌ನ 2 ಬಾಹ್ಯಾಕಾಶ ನೌಕೆಗಳು 1.5 ಕಿ.ಮೀ. ಅಂತರದಲ್ಲಿವೆ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ಶುಕ್ರವಾರ ಮಾಹಿತಿ ನೀಡಿದೆ.ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ ಇಸ್ರೋ, ‘ಸದ್ಯ ಎರಡೂ ನೌಕೆಗಳು ಪರಸ್ಪರ 1.5 ಕಿ.ಮೀ. ದೂರದಲ್ಲಿದ್ದು, ಶನಿವಾರ ಬೆಳಗ್ಗೆ ಅವುಗಳನ್ನು 500 ಮೀ.ಗೆ ಚಲಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ.
ಈ ಮೊದಲು ಡಾಕಿಂಗ್ ಹಾಗೂ ಅನ್‌ಡಾಕಿಂಗ್ ಪ್ರಕ್ರಿಯೆಯನ್ನು ಜ.7 ಹಾಗೂ ಜ.9ರಂದು ನಡೆಸುವುದಾಗಿ ಇಸ್ರೋ ಘೋಷಿಸಿತ್ತಾದರೂ, ನಿರೀಕ್ಷಿತ ವೇಗದಲ್ಲಿ ನೌಕೆಗಳು ಚಲಿಸದ ಕಾರಣ ಅದನ್ನು ಮುಂದೂಡಲಾಗಿತ್ತು. ಸ್ಪಡೆಕ್ಸ್ ನೌಕೆಯನ್ನು 2024ರ ಡಿ.30ರಂದು ಉಡಾವಣೆ ಮಾಡಲಾಗಿತ್ತು.
ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ವಿವಾದಿತ ನಾಯಕ ಬಿಧೂರಿ: ಆತಿಶಿ ‘ಭವಿಷ್ಯ’
ನವದೆಹಲಿ: ದಿಲ್ಲಿಯ ಕಲ್ಕಾಜಿ ಕ್ಷೇತ್ರದ ತಮ್ಮ ವಿರುದ್ಧ ಕಣಕ್ಕಿಳಿದಿರುವ ವಿವಾದಾತ್ಮಕ ಬಿಜೆಪಿ ನಾಯಕ ರಮೇಶ್ ಬಿಧೂರಿಯವರನ್ನು ಬಿಜೆಪಿ ಸಿಎಂ ಅಭ್ಯರ್ಥಿನ್ನಾಗಿ ಘೋಷಿಸಲಿದೆ. ಈ ಬಗ್ಗೆ ನನಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ದೆಹಲಿ ಸಿಎಂ ಆತಿಶಿ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಅತ್ಯಂತ ನಿಂದನೀಯ ವ್ಯಕ್ತಿ ಎನ್ನುವ ಕಾರಣಕ್ಕೆ ಬಿಧೂರಿ ಬಹುಮಾನ ಪಡೆದಿದ್ದಾರೆ. ಗಲಿ ಗಲೌಜ್ ಪಕ್ಷವು ತನ್ನ ಪಕ್ಷದ ಅತ್ಯಂತ ವಾಚಾಳಿ ವ್ಯಕ್ತಿ ಬಿಧೂರಿ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿದೆ ಎಂದು ನನಗೆ ಮೂಲಗಳಿಂದ ತಿಳಿದು ಬಂದಿದೆ’ ಎಂದರು.
ರಮೇಶ್ ಬಿಧೂರಿ ಇತ್ತೀಚೆಗೆ ಆತಿಶಿ ಉಪನಾಮ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಕೆನ್ನೆ ಕುರಿತಾದ ಕೀಳು ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದರು.
ಮುಂದಿನ 3-5 ವರ್ಷ ಬ್ಯಾಂಕಿಂಗ್ ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗ ಕಡಿತ
ವಾಷಿಂಗ್ಟನ್: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಪರಿಣಾಮ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ವಿಶ್ವಾದ್ಯಂತ ಬ್ಯಾಂಕುಗಳು 2 ಲಕ್ಷ ಉದ್ಯೋಗ ಕಡಿತ ಮಾಡಬಹುದು ಎಂದು ಬ್ಲೂಂಬರ್ಗ್ ವರದಿ ಹೇಳಿದೆ.ಕೋವಿಡ್ ನಂತರ ಬ್ಯಾಂಕಿಂಗ್ ಕ್ಷೇತ್ರ ಪರಿವರ್ತನೆಯ ಹೊಸ್ತಿಲಲ್ಲಿದೆ. ಮುಂದಿನ ದಿನಗಳಲ್ಲಿ ಕೃತಕಬುದ್ಧಿಮತ್ತೆ(ಎಐ) ಬಳಕೆ ಹೆಚ್ಚಳದಿಂದಾಗಿ ಬ್ಯಾಂಕುಗಳು ತಮ್ಮ ಸುಮಾರು ಶೇ.3ರಷ್ಟು ಉದ್ಯೋಗಿಗಳನ್ನು ಕಡಿತ ಮಾಡಬಹುದು. ಎಐ ಬಳಕೆಯಿಂದ ಬ್ಯಾಂಕುಗಳ ಆದಾಯವೂ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬ್ಲೂಂಬರ್ಗ್ ಇಂಟೆಲಿಜೆನ್ಸ್‌ನ ಮುಖ್ಯ ಮಾಹಿತಿ ಮತ್ತು ತಂತ್ರಜ್ಞಾನ ಅಧಿಕಾರಿಗಳ ಸರ್ವೆ ಅಭಿಪ್ರಾಯಪಟ್ಟಿದೆ.
ಬ್ಯಾಕ್ ಆಫೀಸ್, ಮಿಡ್ಲ್ ಆಫೀಸ್ ಮತ್ತು ಆಪರೇಷನ್ಸ್ ವಿಭಾಗದಲ್ಲಿ ಹೆಚ್ಚಿನ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ. ಬಾಟ್‌ಗಳ ಬಳಕೆಯಿಂದಾಗಿ ಗ್ರಾಹಕರ ಸೇವೆ ವಿಭಾಗದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಒಂದೇ ರೀತಿಯ, ಪದೇ ಪದೆ ಮಾಡಬೇಕಾದ ಕೆಲಸಗಳಿಗೆ ಎಐಗಳನ್ನು ಬಳಸುವ ಸಾಧ್ಯತೆ ಇದೆ. ಎಐಗಳು ಸಂಪೂರ್ಣವಾಗಿ ಉದ್ಯೋಗ ಕಡಿತ ಮಾಡುವುದಿಲ್ಲವಾದರೂ ಕೆಲಸದ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಸರ್ವೆ ಹೇಳಿದೆ.
ಎಐನಿಂದ ಉತ್ಪಾದಕತೆ ಹೆಚ್ಚಾಗುವುದರಿಂದ ಬ್ಯಾಂಕುಗಳ ಆದಾಯವೂ 2027ರ ವರೆಗೆ ಹೆಚ್ಚಾಗಲಿದೆ ಎಂದು ಸರ್ವೆ ಅಭಿಪ್ರಾಯಪಟ್ಟಿದೆ. ತೆರಿಗೆ ಪೂರ್ವ ಲಾಭವು ಶೇ.12ರಿಂದ 17ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಈ ವರ್ಷ ದೇಶದ ಜಿಡಿಪಿ ಶೇ.6.6ರಷ್ಟು ಪ್ರಗತಿ: ವಿಶ್ವಸಂಸ್ಥೆ
ವಿಶ್ವಸಂಸ್ಥೆ: ಹೆಚ್ಚುತ್ತಿರುವ ವೈಯಕ್ತಿಕ ಖರೀದಿ ಹಾಗೂ ಹೂಡಿಕೆ ಪ್ರಮಾಣದಲ್ಲಿನ ಏರಿಕೆಯಿಂದಾಗಿ 2025ರಲ್ಲಿ ಭಾರತದ ಆರ್ಥಿಕತೆ ಶೇ.6.6ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.ಭಾರತದ ಆರ್ಥಿಕತೆಯು 2024ರಲ್ಲಿ ಶೇ.6.8ರಷ್ಟು ಬೆಳವಣಿಗೆ ಸಾಧಿಸಿತ್ತು. ಆದರೆ ಈ ಸಲ ಇದು ಶೇ.6.6ಕ್ಕೆ ಕುಸಿಯುವ ನಿರೀಕ್ಷೆ ಇದ್ದು, 2026ರಲ್ಲಿ ಮತ್ತೆ ಆರ್ಥಿಕತೆಯು ಶೇ.6.8ರ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಭಾರತದ ಆರ್ಥಿಕತೆಯ ಬೆಳವಣಿಗೆಯಿಂದಾಗಿ ದಕ್ಷಿಣ ಏಷ್ಯಾದ ಆರ್ಥಿಕ ಬೆಳವಣಿಗೆಯೂ ಉತ್ತಮವಾಗಿರಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.ದಕ್ಷಿಣ ಏಷ್ಯಾದ ಸದ್ಯೋಭವಿಷ್ಯದ ಆರ್ಥಿಕ ಮುನ್ನೋಟವು 2025ರಲ್ಲಿ ಶೇ.5.7 ಮತ್ತು 2026ರಲ್ಲಿ ಶೇ.6.0 ಆರ್ಥಿಕ ಬೆಳವಣಿಗೆಯೊಂದಿಗೆ ಉತ್ತಮವಾಗಿರುವ ನಿರೀಕ್ಷೆ ಇದೆ. ಭಾರತದ ಆರ್ಥಿಕತೆ ಬಲಿಷ್ಠವಾಗುತ್ತಿರುವುದು ಮತ್ತು ಭೂತಾನ್, ಶ್ರೀಲಂಕಾ, ನೇಪಾಳದಂಥ ಕೆಲ ದೇಶಗಳಲ್ಲಿ ಆರ್ಥಿಕ ಚೇತರಿಕೆ ಕಂಡು ಬರುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ನಿರೀಕ್ಷೆಗಳು-2025 ವರದಿಯಲ್ಲಿ ಹೇಳಲಾಗಿದೆ.
ಬೃಹತ್ ಗಾತ್ರದ ಮೂಲಸೌಲಭ್ಯ ಯೋಜನೆಗಳ ಹೂಡಿಕೆ, ಭೌತಿಕ ಮತ್ತು ಡಿಜಿಟಲ್ ಸಂಪರ್ಕ ಮತ್ತು ಸಾಮಾಜಿಕ ಮೂಲಸೌಲಭ್ಯಗಳ ಹೂಡಿಕೆಯಲ್ಲಿ ಭಾರತದಲ್ಲಿ ಸರ್ಕಾರಿ ಕ್ಷೇತ್ರವು ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ವಿಶ್ವದಲ್ಲಿ ದಾಖಲೆಯ ಉಷ್ಣಾಂಶ
ವಾಷಿಂಗ್ಟನ್: ಕಳೆದ ವರ್ಷ ದಾಖಲೆಯ ಭೂತಾಪಮಾನ ದಾಖಲಾಗಿದೆ. ವಿಶ್ವದ ದೀರ್ಘಾವಧಿಯ ಗರಿಷ್ಠ ತಾಪಮಾನ ಏರಿಕೆಯ ಮಿತಿಯಾದ 1.5 ಡಿಗ್ರಿ ಸೆಲ್ಸಿಯಸ್ ಅನ್ನು 2024ನೇ ವರ್ಷ ಮುರಿದಿದೆ.1800ರ ಬಳಿಕ ಅಂದರೆ ಕೈಗಾರಿಕಾ ಕ್ರಾಂತಿ ಬಳಿಕ ಇದೇ ಮೊದಲ ಬಾರಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚಿನ ಸರಾಸರಿ ಉಷ್ಣಾಂಶ ದಾಖಲಾಗಿದೆ ಎಂದು ವಿಶ್ವದ ಅನೇಕ ಹವಾಮಾನ ಮುನ್ಸೂಚನಾ ಸಂಸ್ಥೆಗಳು ಘೋಷಣೆ ಮಾಡಿವೆ.
ಕಳೆದ ವರ್ಷ 16.00 ಸೆಲ್ಸಿಯಸ್‌ನಷ್ಟು ಸರಾಸರಿ ಉಷ್ಣಾಂಶ ದಾಖಲಾಗಿದ್ದು, 2023ಕ್ಕೆ ಹೋಲಿಸಿದರೆ ಇದು 0.12 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕವಾಗಿದೆ.ಯುರೋಪಿಯನ್ ತಂಡದ ಪ್ರಕಾರ 2024ರಲ್ಲಿ ವಿಶ್ವದ ತಾಪಮಾನ 1.6 ಡಿಗ್ರಿ ಸೆಲ್ಸಿಯಸ್, ಜಪಾನ್‌ನ ಸಂಸ್ಥೆಗಳು 1.57 ಡಿಗ್ರಿ ಸೆಲ್ಸಿಯಸ್ ಮತ್ತು ಬ್ರಿಟನ್‌ನ ಏಜೆನ್ಸಿಗಳು 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ ಎಂದು ಹೇಳಿಕೊಂಡಿವೆ.
ಏನು ಕಾರಣ?: ಕಲ್ಲಿದ್ದಲು, ತೈಲ ಮತ್ತು ಗ್ಯಾಸ್‌ನಂಥ ಇಂಧನಗಳ ಸುಡುವಿಕೆಯಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲದ ಶೇಖರಣೆ ಹೆಚ್ಚಾಗುತ್ತಿರುವುದೇ ಇಷ್ಟೊಂದು ಉಷ್ಣಾಂಶ ದಾಖಲಾಗಲು ಪ್ರಾಥಮಿಕ ಕಾರಣ ಎಂದು ಕೋಪರ್ನಿಕಸ್‌ನ ಹವಾಮಾನ ಮುನ್ಸೂಚನಾ ಸಂಸ್ಥೆಯ ತಜ್ಞೆ ಸಮಂತಾ ಬರ್ಗೀಸ್ ತಿಳಿಸಿದ್ದಾರೆ.ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಶೇಖರಣೆ ಹೆಚ್ಚಾಗುತ್ತಿದ್ದಂತೆ ಉಷ್ಣಾಂಶವೂ ಹೆಚ್ಚಾಗುತ್ತದೆ. ಇದರಿಂದ ಸಮುದ್ರಮಟ್ಟ ಏರುವುದಲ್ಲದೆ, ನೀರ್ಗಲ್ಲುಗಳ ಕರಗುವಿಕೆಯೂ ಹೆಚ್ಚಾಗುತ್ತದೆ. 2024ರಲ್ಲಿ ಭೂತಾಪಮಾನ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಅಸಮಾನ್ಯ ಜಿಗಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಲ್ಲಿದ್ದಲು, ತೈಲ ಮತ್ತು ಗ್ಯಾಸ್‌ನ ಸುಡುವಿಕೆಯಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲದ ಶೇಖರಣೆ ಹೆಚ್ಚಾಗುತ್ತಿರುವುದೇ ಇಷ್ಟೊಂದು ಉಷ್ಣಾಂಶ ದಾಖಲಾಗಲು ಪ್ರಾಥಮಿಕ ಕಾರಣವಾಗಿದೆ ಎಂದು ಕೋಪರ್ನಿಕಸ್‌ನ ಹವಾಮಾನ ಮುನ್ಸೂಚನಾ ಸಂಸ್ಥೆಯ ತಜ್ಞೆ ಸಮಂತಾ ಬರ್ಗೀಸ್ ತಿಳಿಸಿದ್ದಾರೆ.