ಇನ್ಮುಂದೆ ವೈದ್ಯರು ಆ್ಯಂಟಿಬಯೋಟಿಕ್‌ ಬರೆಯಲು ಕಾರಣ ನೀಡುವುದು ಕಡ್ಡಾಯ!

KannadaprabhaNewsNetwork | Updated : Jan 19 2024, 11:25 AM IST

ಸಾರಾಂಶ

ರೋಗಿಗೆ ಆ್ಯಂಟಿಬಯೋಟಿಕ್‌ ಔಷಧ ಏಕೆ ಅನಿವಾರ್ಯ ಎಂದೂ ವೈದ್ಯರು ಬರೆಯಬೇಕು ಎಂದು ದೇಶದ ಎಲ್ಲಾ ವೈದ್ಯರಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಸುತ್ತೋಲೆ ಹೊರಡಿಸಿದೆ. ಹೆಚ್ಚುತ್ತಿರುವ ಆ್ಯಂಟಿಬಯೋಟಿಕ್ಸ್‌ ಪ್ರತಿರೋಧ ತಡೆಯಲು ಈ ಹೊಸ ನಿಯಮ ರೂಪಿಸಲಾಗಿದೆ.

ನವದೆಹಲಿ: ಇನ್ನುಮುಂದೆ ವೈದ್ಯರು ರೋಗಿಗಳಿಗೆ ಆ್ಯಂಟಿಬಯೋಟಿಕ್‌ ಔಷಧ ಬರೆಯುವಾಗ ಅದಕ್ಕೆ ಕಾರಣವನ್ನೂ ಔಷಧ ಚೀಟಿಯಲ್ಲೇ ಬರೆಯಬೇಕು. 

ರೋಗಿಗೆ ಆ್ಯಂಟಿಬಯೋಟಿಕ್‌ ನೀಡುವುದು ಏಕೆ ಅನಿವಾರ್ಯ ಮತ್ತು ಯಾವ ರೋಗಲಕ್ಷಣವನ್ನು ಶಮನಗೊಳಿಸಲು ಆ್ಯಂಟಿಬಯೋಟಿಕ್‌ ನೀಡಲಾಗುತ್ತಿದೆ ಎಂಬುದನ್ನೂ ನಮೂದಿಸಬೇಕು. ಕೇಂದ್ರ ಆರೋಗ್ಯ ಇಲಾಖೆಯ ಹೊಸ ನಿಯಮದ ಪ್ರಕಾರ ಇದು ಕಡ್ಡಾಯವಾಗಿದೆ.

ದೇಶದಲ್ಲಿ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆಯಿಂದಾಗಿ ಜನರಲ್ಲಿ ಹೆಚ್ಚುತ್ತಿರುವ ‘ಆ್ಯಂಟಿಬಯೋಟಿಕ್‌ ಪ್ರತಿರೋಧ’ (ಆ್ಯಂಟಿಬಯೋಟಿಕ್‌ಗಳು ಕೆಲಸ ಮಾಡದ ಸ್ಥಿತಿ) ತಡೆಯಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ರೋಗಿಗಳಿಗೆ ಆ್ಯಂಟಿಬಯೋಟಿಕ್‌ ಔಷಧಗಳನ್ನು ಬರೆಯುವಾಗ ಅದಕ್ಕೆ ಕಾರಣ ನೀಡುವುದನ್ನು ಕಡ್ಡಾಯಗೊಳಿಸಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆಯ ಅಧೀನದಲ್ಲಿ ಬರುವ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯವು (ಡಿಜಿಎಚ್‌ಎಸ್‌) ದೇಶದ ಎಲ್ಲಾ ವೈದ್ಯರು, ವೈದ್ಯಕೀಯ ಕಾಲೇಜುಗಳ ಉಪನ್ಯಾಸಕರು ಹಾಗೂ ಫಾರ್ಮಸಿಸ್ಟ್‌ಗಳಿಗೆ (ಮೆಡಿಕಲ್‌ ಶಾಪ್‌) ಸುತ್ತೋಲೆ ಕಳುಹಿಸಿದೆ. 

ಅದರಲ್ಲಿ ಆ್ಯಂಟಿಬಯೋಟಿಕ್‌ಗಳ ದುರ್ಬಳಕೆ ಅಥವಾ ಅತಿಯಾದ ಬಳಕೆಯಿಂದಾಗಿ ವರ್ಷದಿಂದ ವರ್ಷಕ್ಕೆ ‘ಆ್ಯಂಟಿಬಯೋಟಿಕ್‌ ಪ್ರತಿರೋಧ’ವನ್ನು ತಡೆಯಲು ಇನ್ನುಮುಂದೆ ಎಲ್ಲಾ ವೈದ್ಯರು ರೋಗಿಗಳಿಗೆ ಔಷಧ ಚೀಟಿ ಬರೆಯುವಾಗ ಆ್ಯಂಟಿಬಯೋಟಿಕ್‌ಗಳನ್ನು ಸೂಚಿಸುತ್ತಿದ್ದರೆ ಅದಕ್ಕೆ ಕಾರಣವನ್ನು ಸ್ಪಷ್ಟವಾಗಿ ಬರೆಯಬೇಕು. 

ರೋಗಿಗೆ ಏಕೆ ಆ್ಯಂಟಿಬಯೋಟಿಕ್‌ ನೀಡುವುದು ಅನಿವಾರ್ಯ ಎಂಬುದನ್ನು ಸೂಚಿಸಬೇಕು. ಹಾಗೆಯೇ ಮೆಡಿಕಲ್‌ ಶಾಪ್‌ಗಳು ವೈದ್ಯರ ಶಿಫಾರಸು ಇಲ್ಲದೆ ಯಾವುದೇ ಕಾರಣಕ್ಕೂ ಆ್ಯಂಟಿಬಯೋಟಿಕ್‌ಗಳನ್ನು ಜನರಿಗೆ ನೀಡಬಾರದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದೆ.

ಆ್ಯಂಟಿಬಯೋಟಿಕ್‌ ಪ್ರತಿರೋಧದಿಂದಾಗಿ 2019ರಲ್ಲಿ ಜಗತ್ತಿನಲ್ಲಿ 27 ಕೋಟಿ ಜನರು ಮೃತಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ತಿಳಿಸಿದ್ದನ್ನು ಆರೋಗ್ಯ ಇಲಾಖೆ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

Share this article