ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ವರುಣನ ಅಬ್ಬರದಿಂದಾಗಿ ಸುಮಾರು 200 ವಿಮಾನಗಳ ಸಂಚಾರ ವ್ಯತ್ಯಯವಾಗಿದೆ.
ದೆಹಲಿಯಲ್ಲಿ ರಾತ್ರಿಯಿಡಿ ಗುಡುಗು ಸಹಿತ ಮಳೆಯಾಗಿದೆ. ಕೆಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುಳಿದಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿವೆ. ಇಲ್ಲಿನ ಸಪ್ಧರ್ಜಂಗ್, ಪಾಲಂ, ಪುಸಾ, ಮಯೂರ್ ವಿಹಾರ್, ನರೇಲಾ , ದೆಹಲಿ ವಿವಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.
ಇನ್ನು ವರುಣನ ಅಬ್ಬರ ವಿಮಾನ ಸಂಚಾರ ವ್ಯವಸ್ಥೆ ಮೇಲೆಯೂ ಪರಿಣಾಮ ಬೀರಿದ್ದು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು 49 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ಮತ್ತೊಂದೆಡೆ ಮಳೆ, ಗಾಳಿಯ ಆರ್ಭಟಕ್ಕೆ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದ ಬಿದ್ದಿದೆ.
ಕೇರಳದಲ್ಲಿ ಮುಂಗಾರು ಮಳೆ ಅಬ್ಬರ
ತಿರುವನಂತಪುರಂ: ಶನಿವಾರವಷ್ಟೇ ಕೇರಳವನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು ಭಾನುವಾರ ರಾಜ್ಯಾದ್ಯಂತ ಭಾರೀ ಮಳೆ ಸುರಿಸಿದೆ. ಮಳೆಯ ಆರ್ಭಟಕ್ಕೆ ಹಲವು ನಗರಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಲ್ಲಿಕೋಟೆಯಲ್ಲಿ ತೆಂಗಿನ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತ್ರಿಶೂರ್ ಜಿಲ್ಲೆಯ ಚೆರುತುರುತಿಯ ರೈಲ್ವೆ ಸೇತುವೆ ಬಳಿ ಮರವೊಂದು ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿಬಿದ್ದಿದೆ.
ಲೋಕೋ ಪೈಲಟ್ ರೈಲನ್ನು ತಕ್ಷಣ ನಿಲ್ಲಿಸಿದ್ದರಿಂದ ದುರಂತ ತಪ್ಪಿದೆ.ವಯನಾಡಿನ ಚೂರಲ್ಮಲಾ-ಮುಂಡಕ್ಕೈ ಪ್ರದೇಶದ ಮೂಲಕ ಹರಿಯುವ ಪುನ್ನಪುಳ ಮತ್ತು ಕೋಝಿಕೋಡ್‌ನ ಕೊರಪುಳ ನದಿಗಳ ನೀರಿನ ಮಟ್ಟ ವಿಪರೀತ ಏರುತ್ತಿದೆ. ಇಡುಕ್ಕಿ ಜಿಲ್ಲೆಯ ಮಲಂಕರ ಅಣೆಕಟ್ಟಿನ 5 ಗೇಟ್‌ಗಳನ್ನು ತೆರೆದು ಭಾನುವಾರ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ. ತೋಡುಪುಳ ಮತ್ತು ಮೂವಾಟ್ಟುಪುಳ ನದಿ ದಡದ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.
5 ಜಿಲ್ಲೆಗಳಿಗೆ ರೆಡ್ ಅಲರ್ಟ್: ಭಾರೀ ಮಳೆ ಕಾರಣ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರದ 5 ಜಿಲ್ಲೆಗಳಾದ ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮಹಾರಾಷ್ಟ್ರಕ್ಕೆ ಮುಂಗಾರು : 35 ವರ್ಷಗಳ ದಾಖಲೆ
ಮುಂಬೈ: ಮಹಾರಾಷ್ಟ್ರಕ್ಕೆ ಭಾನುವಾರ ಮುಂಗಾರು ಕಾಲಿಟ್ಟಿದೆ. ಇಷ್ಟು ಬೇಗ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು 35 ವರ್ಷಗಳಲ್ಲಿಯೇ ಇದೇ ಮೊದಲು. 1990ರಲ್ಲಿ ಮೇ 20 ರಂದು ರಾಜ್ಯಕ್ಕೆ ಮಾನ್ಸೂನ್ ಪ್ರವೇಶಿಸಿತ್ತು. ಮುಂದಿನ ಮೂರು ದಿನಗಳಲ್ಲಿ ಮುಂಗಾರು ಮುಂಬೈ ಮತ್ತು ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.