ನವದೆಹಲಿ: ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತದ ಕ್ರಮ ನಿರೀಕ್ಷೆಯಂತೆಯೇ ನವರಾತ್ರಿ ಖರೀದಿ ಮೇಲೆ ಭಾರೀ ಸಕಾರಾತ್ಮಕ ಪರಿಣಾಮ ಬೀರಿದೆ. ಈ ಬಾರಿಯ ನವರಾತ್ರಿಯಲ್ಲಿ ಗೃಹಬಳಕೆ ವಸ್ತುಗಳು, ನಿತ್ಯೋಪಯೋಗಿ ವಸ್ತುಗಳು, ಕಾರು, ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ನವರಾತ್ರಿ ವೇಳೆ ಇಷ್ಟೊಂದು ಪ್ರಮಾಣದಲ್ಲಿ ಮಾರಾಟ ದಾಖಲಾಗಿರುವುದು ಕಳೆದ 10 ವರ್ಷಗಳಲ್ಲಿ ಇದೇ ಮೊದಲು.
ಜಿಎಸ್‌ಟಿ ಕಡಿತದಿಂದ ಸಂಭ್ರಮಪಟ್ಟಿರುವ ಗ್ರಾಹಕರು ಈ ನವರಾತ್ರಿಯಲ್ಲಿ ಭರ್ಜರಿ ಖರೀದಿಗಿಳಿದಿದ್ದಾರೆ. ಹಲವು ದಿನಗಳಿಂದ ಕೊಂಡುಕೊಳ್ಳಬೇಕೆಂದುಕೊಂಡಿದ್ದ ವಸ್ತುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಖರೀದಿಸಿ ಖುಷಿಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಅಂಕಿ-ಅಂಶ ಸಮೇತ ವಿವರ ನೀಡಿವೆ.ಕಾರು ಬಂಪರ್ ಸೇಲ್:ಈ ನವರಾತ್ರಿಯಲ್ಲಿ ಕಾರುಗಳ ಮಾರಾಟ ಭರ್ಜರಿ ಏರಿಕೆ ಕಂಡಿದೆ. ಈ ಪೈಕಿ ಅತಿ ಹೆಚ್ಚು ಎಂದರೆ, ಮಾರುತಿ ಸುಜುಕಿ ಕಂಪನಿಯ ಕಾರುಗಳು ದುಪ್ಪಟ್ಟು ಬುಕಿಂಗ್ ಆಗಿವೆ. ಕಂಪನಿಯ 1.50 ಲಕ್ಷ ಕಾರುಗಳು ಬುಕಿಂಗ್ ಆಗಿವೆ. ಇದು ಸದ್ಯದಲ್ಲೇ 2 ಲಕ್ಷಕ್ಕೇರುವ ನಿರೀಕ್ಷೆ ಇದೆ.
ಕಳೆದ ನವರಾತ್ರಿಯಲ್ಲಿ 85 ಸಾವಿರ ಕಾರುಗಳಷ್ಟೇ ಬುಕ್ ಆಗಿದ್ದವು. ಅಂದರೆ ಈ ಬಾರಿ ಕಾರುಗಳ ಬುಕಿಂಗ್ ದುಪ್ಪಟ್ಟಾಗಿದೆ. ವಿಶೇಷವೆಂದರೆ ಈ ನವರಾತ್ರಿಯ ಆರಂಭದ ಎಂಟು ದಿನಗಳಲ್ಲೇ 1.65 ಲಕ್ಷ ಕಾರುಗಳ ಡೆಲಿವರಿಯನ್ನು ಕಂಪನಿ ನೀಡಿದೆ. ಮೊದಲ ದಿನವೇ 30 ಸಾವಿರ ಕಾರುಗಳ ಡೆಲಿವರಿ ಕೊಟ್ಟಿದೆ. ಕಳೆದ 35 ವರ್ಷಗಳಲ್ಲಿ ಕಂಪನಿಯು ಇಷ್ಟೊಂದು ಕಾರುಗಳ ಡೆಲಿವರಿ ನೀಡಿರುವುದು ಇದೇ ಮೊದಲು ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಅದೇ ರೀತಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.60ರಷ್ಟು ಬೆಳವಣಿಗೆ ಸಾಧಿಸಿದರೆ, ಕ್ರೆಟಾ ಮತ್ತು ವೆನ್ಯೂ ಕಾರುಗಳ ಮಾರಾಟ ಹೆಚ್ಚಳದಿಂದ ಹುಂಡೈ ಮೋಟಾರ್ ಕಂಪನಿಯ ಮಾರಾಟ ಶೇ.72ರಷ್ಟು ಏರಿಕೆಯಾಗಿದೆ.
ಟಾಟಾ ಮೋಟಾರ್ಸ್ ಕಂಪನಿಯು ಆಲ್ಟ್ರೋಜ್, ಪಂಚ್, ನೆಕ್ಸಾನ್ ಮತ್ತು ಟಿಯಾಗೋ ಮಾಡಲ್‌ನ 50 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.ಇನ್ನು ದ್ವಿಚಕ್ರ ವಾಹನ ಕಂಪನಿಗಳಲ್ಲಿ ಹೀರೋ ಮೋಟೋ ಕಾರ್ಪ್‌ನ ಮಾರಾಟ ದುಪ್ಪಟ್ಟಾಗಿದೆ. ಬಜಾಟ್ ಮೋಟಾರ್ಸ್ ಕಂಪನಿ ಕೂಡ ದುಪ್ಪಟ್ಟು ವಾಹನಗಳ ಸೇಲ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಎಲೆಕ್ಟ್ರಾನಿಕ್ ಗೂಡ್ಸ್:ಈ ಬಾರಿ ಮೊಬೈಲ್, ಟೀವಿ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳು ಭಾರೀ ಮಾರಾಟ ಕಂಡಿವೆ.
ಈ ವಸ್ತುಗಳ ಮಾರಾಟದಲ್ಲಿ ದುಪ್ಪಟ್ಟು ಬೆಳವಣಿಗೆ ದಾಖಲಾಗಿದೆ. ಹೈಯರ್ ಕಂಪನಿಯ 85 ಮತ್ತು 100 ಇಂಚಿನ ಟೀವಿಗಳ (2.5 ಲಕ್ಷ ರು.ಗಿಂತ ಹೆಚ್ಚಿನ ಬೆಲೆ) ಮಾರಾಟ ಶೇ.85ರಷ್ಟು ಏರಿಕೆಯಾಗಿದೆ. ಕಂಪನಿಯು ನಿತ್ಯ 300ರಿಂದ 350ರಷ್ಟು 65 ಇಂಚಿನ ಟೀವಿಗಳನ್ನು ಮಾರಾಟ ಮಾಡಿದೆ.
ಎಲ್‌ಜಿ ಎಲೆಕ್ಟ್ರಾನಿಕ್ಸ್ ಕಂಪನಿಯ ಮಾರಾಟವೂ ಏರಿಕೆ ಕಂಡಿದೆ. ದೇಶದ ಅತಿದೊಡ್ಡ ರಿಟೇಲ್ ಕಂಪನಿಯಾದ ರಿಲಯನ್ಸ್ ರಿಟೇಲ್‌ನ ಮಾರಾಟ ವರ್ಷದಿಂದ ವರ್ಷಕ್ಕೆ ಶೇ.20ರಿಂದ ಶೇ.25ರಷ್ಟು ಏರಿಕೆಯಾಗಿದೆ. ದೊಡ್ಡ ಸ್ಕ್ರೀನ್‌ನ ಟೀವಿಗಳು, ಸ್ಮಾರ್ಟ್‌ಫೋನ್, ಫ್ಯಾಷನ್ ವಿಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಾರಾಟ ದಾಖಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.ಗೋದ್ರೆಜ್ ಅಪ್ಲೈಯನ್ಸಸ್ ಕೂಡ ಎರಡಂಕಿಯ ಬೆಳವಣಿಗೆಯನ್ನು ಈ ನವರಾತ್ರಿಯಲ್ಲಿ ದಾಖಲಿಸಿದೆ. ವಿಜಯ್ ಸೇಲ್ಸ್ ಕಂಪನಿ ಕೂಡ ಶೇ.20ರಷ್ಟು ಬೆಳವಣಿಗೆ ದಾಖಲಿಸಿದೆ.
: ನವರಾತ್ರಿ ವೇಳೆ ಬುಕ್ ಆಗಿರುವ ಮಾರುತಿ ಕಾರು1.65 ಲಕ್ಷ ಡೆಲಿವರಿ
: ಹಬ್ಬದ ವೇಳೆ ಮಾರುತಿ ಕಾರುಗಳ ಹಸ್ತಾಂತರ 30000 ಕಾರು
: ಒಂದೇ ದಿನ ಡೆಲಿವರಿ. ಮಾರುತಿ 35 ವರ್ಷದ ದಾಖಲೆ50000 ಕಾರು
: ಟಾಟಾ ಕಂಪನಿ ನವರಾತ್ರಿ ವೇಳೆ ಮಾರಿದ ಕಾರುಗಳು60% ಹೆಚ್ಚಳ
: ಮಹೀಂದ್ರಾ ಕಂಪನಿಯ ಕಾರುಗಳ ಮಾರಾಟದಲ್ಲಿ ಭಾರಿ ಏರಿಕೆ72% ಏರಿಕೆ
: ಹ್ಯುಂಡೈ ಕಂಪನಿಯ ಕಾರುಗಳಿಗೂ ವಿಪರೀತ ಬೇಡಿಕೆ 85% ಹೆಚ್ಚಳ
: 2.5 ಲಕ್ಷ ರು.ಗಿಂತ ಅಧಿಕ ಬೆಲೆಯ ಹೈಯರ್ ಟೀವಿ ಮಾರಾಟ ಭಾರಿ ಜಿಗಿತ