ನವದೆಹಲಿ: 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು, ರಾಜ್ಯದ ಜನರ ಕುಟುಂಬಗಳಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತಂದಿದೆ. ಜೊತೆಗೆ ಇದು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಜನರು ನಿಗಾವಹಿಸಲು ಕಾರಣವಾಗಿದೆ. ಕುಟುಂಬಗಳ ಆರ್ಥಿಕ ಶಕ್ತಿ ಬಲಪಡಿಸಲು ಕಾರಣವಾಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಪೊಲಿಟಿಕಲ್‌ಶಕ್ತಿ ಮತ್ತು ಸಿಟಿಜನ್ಸ್‌ಫಾರ್ ಬೆಂಗಳೂರು ಸಂಸ್ಥೆಗಳ ಸಹ-ಸಂಸ್ಥಾಪಕಿ ತಾರಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ 4 ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಗ್ಯಾರೆಂಟಿಗಳ ಬಗ್ಗೆ ಸಮಗ್ರವಾಗಿ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ.
ಈ ವರದಿ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ಆರೋಗ್ಯವಂತರಾಗಿ, ಕುಟುಂಬ ಮತ್ತು ಸಮಾಜದಲ್ಲಿ ಸಬಲರಾಗಿದ್ದಾರೆ. ಅವರ ಓಡಾಟದ ಪ್ರಮಾಣವೂ ಹೆಚ್ಚಿದೆ. ಕುಟುಂಬಗಳು ಆರೋಗ್ಯ ಮತ್ತು ಶಿಕ್ಷಣದಲ್ಲಿ ದೀರ್ಘಾವಧಿ ಹೂಡಿಕೆಗಳನ್ನು ಮಾಡುತ್ತಿವೆ. ಸ್ಥಳೀಯ ಆರ್ಥಿಕತೆ ಬಲಿಷ್ಠವಾಗಿವೆ, ತಳಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ಹೇಳಿದ್ದೇನು?:
ಶಕ್ತಿಯಿಂದ ಮಹಿಳೆಯರಿಗೆ ಬಲ:
ಸ್ತ್ರೀಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಟ್ಟ ‘ಶಕ್ತಿ’ ಯೋಜನೆಯಿಂದ ಅನೇಕ ಮಹಿಳೆಯರು ಮನೆಯಿಂದ ಹೊರಗೆ ಓಡಾಡಲು ಶುರು ಮಾಡಿದ್ದಾರೆ. ಫಲಾನುಭವಿಗಳಲ್ಲಿ ಶೇ.19ರಷ್ಟು ಮಹಿಳೆಯರು ಹೊರಹೋಗಿ ದುಡಿಯಲು ಶುರು ಮಾಡಿದ್ದಾರೆ ಅಥವಾ ಉತ್ತಮ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರು ಗ್ರಾಮೀಣ ಭಾಗದಲ್ಲಿ ಇದರ ಪ್ರಮಾಣ ಶೇ.34ಕ್ಕೆ ಏರಿಕೆಯಾಗಿದೆ. ಶೇ.80ರಷ್ಟು ಮಹಿಳೆಯರು ಉತ್ತಮ ಆರೋಗ್ಯಸೇವೆ ಪಡೆಯಲು ಅನುಕೂಲವಾಗಿದೆ ಎಂದಿದ್ದಾರೆ. ಶೇ.72ರಷ್ಟು ಮಹಿಳೆಯರು, ಈ ಯೋಜನೆಯಿಂದಾಗಿ ತಮ್ಮ ಆತ್ಮಸ್ಥೈರ್ಯ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ.
ಗೃಹಲಕ್ಷ್ಮಿಯಿಂದ ಸ್ವಾಲಂಬನೆ:
ಈ ಯೋಜನೆಯಡಿ ಪ್ರತಿ ತಿಂಗಳು ಲಭಿಸುತ್ತಿರುವ 2000 ರು.ಅನ್ನು ಮಹಿಳೆಯರು ಸದ್ಬಳಕೆ ಮಾಡುತ್ತಿದ್ದಾರೆ. ಶೇ.94ರಷ್ಟು ಮಂದಿ ಆ ಹಣವನ್ನು ಉತ್ತಮ ಆಹಾರ ಖರೀದಿಗೆ ಬಳಸಿದರೆ, ಶೇ.90ರಷ್ಟು ಜನ ಆರೋಗ್ಯ ವೆಚ್ಚಗಳಿಗೆ ವ್ಯಯಿಸಿದ್ದಾರೆ. ಶೇ.50ರಷ್ಟು ಮಹಿಳೆಯರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅದನ್ನು ಮುಡಿಪಾಗಿಟ್ಟಿದ್ದಾರೆ. ಒಟ್ಟಿನಲ್ಲಿ, ಬಹುತೇಕ ಗೃಹಲಕ್ಷ್ಮಿಯತರು ತಮ್ಮ ಪರಿವಾರದ ಕ್ಷೇಮಕ್ಕಾಗಿ ಆ ಹಣವನ್ನು ಮೀಸಲಿಟ್ಟಿದ್ದಾರೆ ಎಂದು ವರದಿ ಹೇಳಿದೆ.
ಅನ್ನಭಾಗ್ಯದಿಂದ ಆರೋಗ್ಯ:
ಕೇಂದ್ರದ 5 ಕೆ.ಜಿ. ಅಕ್ಕಿ ಜತೆ ರಾಜ್ಯ ಸರ್ಕಾರ ನೀಡುತ್ತಿರುವ 5 ಕೆ.ಜಿ. ಅಕ್ಕಿಯನ್ನು ಸ್ವೀಕರಿಸುತ್ತಿರುವುದಾಗಿ ಶೇ.94ರಷ್ಟು ಪರಿವಾರಗಳು ಹೇಳಿವೆ. ಈ ಯೋಜನೆಯಿಂದ ಅಕ್ಕಿ ಪೂರೈಕೆಯಾಗುತ್ತಿರುವುದರಿಂದ, ಶೇ.91ರಷ್ಟು ಕುಟುಂಬಗಳು ತರಕಾರಿ, ಹಾಲು ಇತ್ಯಾದಿಗಳ ಖರೀದಿಯನ್ನು ಹೆಚ್ಚಿಸಿರುವುದಾಗಿ ಹೇಳಿಕೊಂಡಿವೆ.
ಗೃಹಜ್ಯೋತಿಯಿಂದ ಬೆಳಕು:
ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಯಿಂದ ತಮ್ಮ ಮನೆಗಳಲ್ಲಿ ವಿದ್ಯುತ್ ಬಳಕೆ ಹೆಚ್ಚಿರುವುದಾಗಿ ಶೇ.72ರಷ್ಟು ಮಹಿಳೆಯರು ಹೇಳಿದ್ದಾರೆ. ಶೇ.43ರಷ್ಟು ಜನ, ನಿತ್ಯಕೆಲಸಗಳನ್ನು ಸುಲಭವಾಗಿಸುವ ಮತ್ತು ಶ್ರಮ ತಗ್ಗಿಸುವ ಎಲೆಕ್ಟ್ರಿಕ್ ಉಪಕರಣಗಳನ್ನು ಖರೀದಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಯುವನಿಧಿಯಿಂದ ಕೌಶಲ್ಯ ವೃದ್ಧಿ:
ಶಿಕ್ಷಣ ಮುಗಿಸಿದರೂ ಉದ್ಯೋಗ ಸಿಗದ ಯುವಕರಿಗೆ ಪ್ರತಿ ತಿಂಗಳು ಹಣ ನೀಡುವ ಈ ಯೋಜನೆಯ ಶೇ.42ರಷ್ಟು ಫಲಾನುಭವಿಗಳು ಆ ಮೊತ್ತವನ್ನು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಡಿಪ್ಲೊಮಾ ಮುಗಿಸಿದವರಿಗೆ 1500 ರು. ಮತ್ತು ಪದವೀಧರರಿಗೆ 3000 ರು. ನೀಡಲಾಗುತ್ತಿದೆ.
ಅಧ್ಯಯನದಲ್ಲೇನಿದೆ?
- ಶಕ್ತಿ: ಉಚಿತ ಬಸ್ ಯಾನದಿಂದ ಶೇ.19ರಷ್ಟು ಮಹಿಳೆಯರು ಮನೆಯಿಂದ ಹೊರಹೋಗಿ ಕೆಲಸ ಮಾಡಲು ಆರಂಭ
- ಗೃಹಲಕ್ಷ್ಮಿ: 2000 ರು. ಮಾಸಾಶನ ಬಳಸಿ ಶೇ.94 ಮಹಿಳೆಯರಿಂದ ಉತ್ತಮ ಆಹಾರ ಖರೀದಿ, ವಿದ್ಯಾಭ್ಯಾಸ
- ಅನ್ನಭಾಗ್ಯ: ಶೇ.94 ಕುಟುಂಬಗಳಿಂದ ಉಚಿತ 5 ಕೇಜಿ ಅಕ್ಕಿ ಸದ್ಬಳಕೆ. ಇದಕ್ಕೆ ಪೂರಕವಾಗಿ ಇತರ ಉತ್ಪನ್ನ ಖರೀದಿ
- ಗೃಹಜ್ಯೋತಿ: 200 ಯೂನಿಟ್ ಫ್ರೀ ವಿದ್ಯುತ್ ಪರಿಣಾಮ. ಶೇ.43 ಸ್ತ್ರೀಯರಿಂದ ಶ್ರಮ ತಗ್ಗಿಸುವ ಎಲೆಕ್ಟ್ರಿಕ್ ಉತ್ಪನ್ನ ಖರೀದಿ- ಯುವನಿಧಿ: ಶೇ.42ರಷ್ಟು ನಿರುದ್ಯೋಗಿಗಳಿಂದ 1500 ರು. ಹಾಗೂ 3000 ರು. ಯುವನಿಧಿ ಹಣದಿಂದ ಕೌಶಲ್ಯಾಭಿವೃದ್ಧಿ