ಭಾರತದಿಂದ ಪಾಕ್‌ ಮುಖವಾಡ ಅನಾವರಣ

KannadaprabhaNewsNetwork |  
Published : Oct 04, 2025, 02:00 AM ISTUpdated : Oct 04, 2025, 03:52 AM IST
ಎಪಿ ಸಿಂಗ್‌ | Kannada Prabha

ಸಾರಾಂಶ

‘ಆಪರೇಷನ್‌ ಸಿಂದೂರದ ವೇಳೆ ತನಗೇನೂ ಹಾನಿ ಆಗಿಲ್ಲ. ಎಲ್ಲ ಹಾನಿಯೂ ಭಾರತಕ್ಕೇ ಆಗಿದೆ. ನಾವೇ ಯುದ್ಧ ಗೆದ್ದಿದ್ದು’ ಎಂದು ಸುಳ್ಳು ಹೇಳುವ ಪಾಕಿಸ್ತಾನದ ನಿಜಚಿತ್ರಣವನ್ನು ಭಾರತ ಮತ್ತೊಮ್ಮೆ ಬಯಲು ಮಾಡಿದೆ.

 ನವದೆಹಲಿ :  ‘ಆಪರೇಷನ್‌ ಸಿಂದೂರದ ವೇಳೆ ತನಗೇನೂ ಹಾನಿ ಆಗಿಲ್ಲ. ಎಲ್ಲ ಹಾನಿಯೂ ಭಾರತಕ್ಕೇ ಆಗಿದೆ. ನಾವೇ ಯುದ್ಧ ಗೆದ್ದಿದ್ದು’ ಎಂದು ಸುಳ್ಳು ಹೇಳುವ ಪಾಕಿಸ್ತಾನದ ನಿಜಚಿತ್ರಣವನ್ನು ಭಾರತ ಮತ್ತೊಮ್ಮೆ ಬಯಲು ಮಾಡಿದೆ. ‘ಕಾರ್ಯಾಚರಣೆ ವೇಳೆ ಅಮೆರಿಕ ನಿರ್ಮಿತ ಅತ್ಯಾಧುನಿಕ ಎಫ್‌16 ಎಸ್‌, ಚೀನಾದ ಜೆ-17ಎಸ್‌ ಸೇರಿ ಪಾಕಿಸ್ತಾನ ವಾಯುಸೇನೆಗೆ ಸೇರಿದ ಒಟ್ಟು 12-13 ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಈ ಮೂಲಕ ಪಾಕಿಸ್ತಾನವನ್ನು ಕೇವಲ ಒಂದೇ ರಾತ್ರಿಯಲ್ಲಿ ಮಂಡಿಯೂರುವಂತೆ ಮಾಡಲಾಯಿತು’ ಎಂದು ಭಾರತದ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಎ.ಪಿ.ಸಿಂಗ್‌ ಅವರು ಹೇಳಿದ್ದಾರೆ.

ಭಾರತದ ಕ್ಷಿಪಣಿಗಳು, ಪಾಕ್‌ ವಿಮಾನಗಳನ್ನು ಹೊಡೆದುರುಳಿಸಿದ್ದ ವಿಷಯ ಹೊಸತಲ್ಲವಾದರೂ, ಸ್ವತಃ ವಾಯುಪಡೆ ಮುಖ್ಯಸ್ಥರೇ ಮೊದಲ ಬಾರಿಗೆ ಭಾರತದ ದಾಳಿಗೆ ಪತನಗೊಂಡ ಪಾಕ್‌ ವಿಮಾನಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಿದ್ದು ಗಮನಾರ್ಹ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಪರೇಷನ್‌ ಸಿಂದೂರ ವೇಳೆ ನಾವು ಪಾಕ್‌ನ ಆಗಸದಲ್ಲಿ ಹಾರುತ್ತಿದ್ದ ವಿಮಾನ ಮತ್ತು ದುರಸ್ತಿಗಾಗಿ ಬಂದಿದ್ದ ಎಫ್‌ 16, ಜೆ 17 ವಿಮಾನಗಳನ್ನು ಹೊಡೆದುರುಳಿಸಿದೆವು. ಇದಲ್ಲದೆ ಪಾಕಿಸ್ತಾನ ರಾಡಾರ್‌ ವ್ಯವಸ್ಥೆ, ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರಗಳು ಹಾಗೂ ರನ್‌ವೇಗಳು, ಹ್ಯಾಂಗರ್‌ಗಳು ಸೇರಿ ಇತರೆ ಸೇನಾ ಮೂಲಸೌಲಭ್ಯಗಳನ್ನೂ ನಾಶಮಾಡಲಾಗಿದೆ’ ಎಂದ ಅವರು, ‘ಇದರ ಜತೆಗೆ ಒಂದು ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯನ್ನು ನಾಶ ಮಾಡಲಾಗಿದೆ’ ಎಂದು ಹೇಳಿದರು.ಇದೇ ವೇಳೆ ಭಾರತದ ರಫೇಲ್‌ ಸೇರಿ ಹಲವು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆ ಕುರಿತು ವ್ಯಂಗ್ಯವಾಡಿದ ಅವರು, ಪಾಕಿಸ್ತಾನವು ತನ್ನದೇ ನಾಗರಿಕರನ್ನು ವಂಚಿಸುವ ಕೆಲಸ ಮಾಡುತ್ತಿದೆ ತಿರುಗೇಟು ನೀಡಿದರು.

ಭವಿಷ್ಯದ ಯುದ್ಧ ಭಿನ್ನ:

‘ಭವಿಷ್ಯದ ಯುದ್ಧಗಳು ಹಿಂದಿನ ಸಂಘರ್ಷಕ್ಕಿಂತ ಭಿನ್ನವಾಗಿರುತ್ತವೆ. ಅವು ಚುಟುಕು ಹಾಗೂ ಗುರಿ ಕೇಂದ್ರಿತ ಯುದ್ಧಗಳಾಗಿರುತ್ತವೆ. ಹೀಗಾಗಿ ನಾವು ನಮ್ಮ ಯೋಚನೆಯನ್ನು ಬದಲಿಸುತ್ತಾ ಸಾಗಬೇಕಿದೆ. ಇಂದಿನ ಮತ್ತು ಭವಿಷ್ಯದ ಯುದ್ಧಗಳಿಗಾಗಿ ನಾವು ಸರ್ವ ಸನ್ನದ್ಧವಾಗಿರಬೇಕಿರುತ್ತದೆ’ ಎಂದು ಸ್ಪಷ್ಟಪಡಿಸಿದ ಅವರು, ‘ಈ ನಿಟ್ಟಿನಲ್ಲಿ ಆತ್ಮನಿರ್ಭರತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಇದೆ’ ಎಂದು ಒತ್ತಿಹೇಳಿದರು.

ಏ।ಮಾ। ಸಿಂಗ್‌ ಹೇಳಿದ್ದೇನು?

- ಭಾರತದ ರಫೇಲ್‌ ಯುದ್ಧವಿಮಾನ ಹೊಡೆದಿದ್ದೆವು ಎಂದು ಪಾಕಿಸ್ತಾನ ಹೇಳುವುದೆಲ್ಲ ಸುಳ್ಳು

- ಪಾಕಿಸ್ತಾನವು ತನ್ನದೇ ನಾಗರಿಕರನ್ನು ವಂಚಿಸುವ ಕೆಲಸ ಮಾಡುತ್ತಿದೆ ಎಂದು ತಿರುಗೇಟು

- ಪಾಕ್‌ ಆಗಸದಲ್ಲಿ ಹಾರುತ್ತಿದ್ದ, ದುರಸ್ತಿಗಾಗಿ ಬಂದಿದ್ದ ಎಫ್‌ 16, ಜೆ 17 ವಿಮಾನ ಹೊಡೆದೆವು

- ಇದರ ಜತೆಗೆ ಒಂದು ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯನ್ನು ನಾಶ ಮಾಡಿದೆವು

ಮುಂದಿನ ಬಾರಿ ನಕ್ಷೆಯಿಂದ್ಲೇ ಪಾಕ್‌ ಅಳಿಸುತ್ತೇವೆ: ದ್ವಿವೇದಿ

- ಆಪರೇಷನ್‌ ಸಿಂದೂರ ವೇಳೆ ತಾಳ್ಮೆ ಪ್ರದರ್ಶನ- ಇನ್ಮುಂದೆ ತಾಳ್ಮೆ ಪ್ರದರ್ಶಿಸಲ್ಲ: ಸೇನಾ ಮುಖ್ಯಸ್ಥ--ಸೇನಾ ಮುಖ್ಯಸ್ಥರ ಕಟುನುಡಿ- ಸಿಂದೂರದ ವೇಳೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲಷ್ಟೇ ನಾವು ದಾಳಿ ಮಾಡಿದೆವು- ಆ ದೇಶ ಉಗ್ರವಾದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಯಾವುದೇ ಸಮಸ್ಯೆ ಇಲ್ಲ- ನಿಲ್ಲಿಸದೇ ಹೋದರೆ ಪಾಕಿಸ್ತಾನ ಈ ಭೂಪಟದಲ್ಲೇ ಇರಲ್ಲ, ಆ ರೀತಿ ದಾಳಿ ಮಾಡ್ತೇವೆ- ಯೋಧರು ಸದಾಸನ್ನದ್ಧರಾಗಿರಬೇಕು. 

ದೇವರು ಬಯಸಿದರೆ ಶೀಘ್ರ ಮತ್ತೆ ಅವಕಾಶ- ಈ ಬಾರಿ ನಾವು ಆಪರೇಷನ್‌ ಸಿಂದೂರ ವೇಳೆ ತೋರಿಸಿದ ಸಂಯಮ ಪ್ರದರ್ಶಿಸಲ್ಲ----ಪಿಟಿಐ ಅನುಪಗಢ/ಜೈಪುರ‘ವಿಶ್ವಭೂಪಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದ್ದರೆ ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇತ್ತೀಚಿನ ಆಪರೇಷನ್‌ ಸಿಂದೂರದ ವೇಳೆ ಭಾರತವು ಸಂಯಮ ಕಾಯ್ದುಕೊಂಡಿತು. ಆದರೆ, ಮುಂದಿನ ಬಾರಿ ಭಾರತವು ಅಂಥ ಯಾವುದೇ ಸಂಯಮ ಕಾಯ್ದುಕೊಳ್ಳುವುದಿಲ್ಲ’ ಎಂದು ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಪಾಕ್‌ಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. 

ಶುಕ್ರವಾರ ಮಾತನಾಡಿದ ಅವರು, ‘ಯೋಧರು ಸದಾಸನ್ನದ್ಧರಾಗಿರಬೇಕು. ದೇವರು ಬಯಸಿದರೆ ಸದ್ಯದಲ್ಲೇ ಮತ್ತೆ ಅವಕಾಶ ಬರಲಿದೆ. ಈ ಬಾರಿ ನಾವು ಆಪರೇಷನ್‌ ಸಿಂದೂರದ ವೇಳೆ ತೋರಿಸಿದ ಸಂಯಮ ಪ್ರದರ್ಶಿಸುವುದಿಲ್ಲ. ವಿಶ್ವಭೂಪಟದಲ್ಲಿ ಪಾಕಿಸ್ತಾನ ಇರಬೇಕೋ, ಬೇಡವೋ ಎಂದು ಯೋಚಿಸುವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಕಟು ಎಚ್ಚರಿಕೆ ರವಾನಿಸಿದರು.

ಆಪರೇಷನ್‌ ಸಿಂದೂರದ ವೇಳೆ ಇಡೀ ವಿಶ್ವ ಭಾರತದ ಜತೆ ನಿಂತಿತ್ತು. ಭಾರತವು ಪಾಕಿಸ್ತಾನದ 9 ಕಡೆ ದಾಳಿ ನಡೆಸಿತು. ನಮ್ಮ ಗುರಿ ಭಯೋತ್ಪಾದಕರಷ್ಟೇ ಆಗಿದ್ದರು ಎಂದ ಅವರು, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ನಮಗೆ ಆ ದೇಶದ ಜನಸಾಮಾನ್ಯರೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಇದೇ ವೇಳೆ ದ್ವಿವೇದಿ ಸ್ಪಷ್ಟಪಡಿಸಿದರು.

PREV
Read more Articles on

Recommended Stories

ಗ್ಯಾರಂಟಿಗಳಿಂದ ಜೀವನ ಭಾರಿ ಸುಧಾರಣೆ ! ಅಧ್ಯಯನ ವರದಿ
ಕೆಮ್ಮಿನ ಸಿರಪ್‌ ಸೇವಿಸಿ 11 ಮಕ್ಕಳ ಸಾವು ?