ನವದೆಹಲಿ : ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇತ್ತೀಚೆಗೆ 11 ಮಕ್ಕಳು ಸಾವನ್ನಪ್ಪಿದ ಘಟನೆಗೆ ಕೆಮ್ಮಿನ ಔಷಧ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧದ ಮಾದರಿಯನ್ನು ಪರೀಕ್ಷಿಸಿ ಕ್ಲೀನ್‌ಚಿಟ್ ನೀಡಿದೆ. ಮಕ್ಕಳ ಸಾವಿಗೆ ಔಷಧ ಕಾರಣವಲ್ಲ ಎಂದು ಷ್ಟಪಡಿಸಿದೆ. ಆದರೆ ಮಕ್ಕಳ ಸಾವಿಗೆ ಏನು ಕಾರಣ ಎಂಬ ಅಂಶ ಇನ್ನು ಪತ್ತೆಯಾಗಿಲ್ಲ.
ಮಧ್ಯಪ್ರದೇಶದಲ್ಲಿ 9 ಮಕ್ಕಳು ಸಾವು:
ಕಳೆದ 15 ದಿನದಲ್ಲಿ ಮಧ್ಯ ಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಈ ಮಕ್ಕಳ ಸಾವಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಕೆಮ್ಮಿನ ಔಷಧ ಸೇವನೆಯಿಂದ ಉಂಟಾದ ಕಿಡ್ನಿ ವೈಫಲ್ಯ ಕಾರಣ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಮಧ್ಯಪ್ರದೇಶದ ಆರೋಗ್ಯ ಇಲಾಖೆಯು ಔಷಧದ ಪರೀಕ್ಷೆ ವೇಳೆ ಯಾವುದೇ ವಿಷಪೂರಿತ ಅಂಶ ಪತ್ತೆಯಾಗಿಲ್ಲ. ಔಷಧದ ನಿಷೇಧದ ಪ್ರಶ್ನೆಯೇ ಇಲ್ಲ. ಮಕ್ಕಳ ಸಾವಿಗೆ ಸಮಿತಿ ರಚಿಸಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.
ರಾಜಸ್ಥಾನದಲ್ಲಿ 2 ಮಕ್ಕಳ ಸಾವು:
ರಾಜಸ್ಥಾನದ ಸಿಕಾರ್ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವಾಗಿದ್ದು, ಇಲ್ಲಿಯೂ ಸಹ ಔಷಧವೇ ಕಾರಣ ಎಂಬ ಆರೋಪವಿದೆ. ಆದರೆ ಅಲ್ಲಿನ ಸರ್ಕಾರವು ವೈದ್ಯರಿಗೆ ಕ್ಲೀನ್‌ಚಿಟ್ ನೀಡಿದೆ. ರಾಜಸ್ಥಾನ ಔಷಧ ನಿಯಂತ್ರಣ ಮಂಡಳಿಯು ಔಷಧಗಳ ಪೂರೈಕೆಗೆ ತಾತ್ಕಾಲಿಕ ತಡೆ ನೀಡಿದೆ. ಎರಡೂ ಪ್ರಕರಣಗಳಲ್ಲಿಯೂ ಪೋಷಕರು ವೈದ್ಯರ ಸೂಚನೆಯಿಲ್ಲದೆಯೇ ಔಷಧ ನೀಡಿದ್ದೇ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.
ತಮಿಳ್ನಾಡಿನಲ್ಲಿ ಔಷಧ ಬ್ಯಾನ್
ಮಕ್ಕಳ ಸಾವಿನ ಬೆನ್ನಲ್ಲೇ ತಮಿಳುನಾಡು ಸರ್ಕರ ಕೋಲ್ಡ್ರಿಫ್ ಸಿರಪ್ ಮೇಲೆ ನಿಷೇಧ ಹೇರಿದೆ. ತಮಿಳುನಾಡು ಔಷಧ ನಿಯಂತ್ರಣಾ ಮಂಡಳಿಯು ಈ ಕ್ರಮ ಕೈಗೊಂಡಿದೆ. ಘಟನೆ ಕುರಿತು ತನಿಖೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನೌಷಧ ಬೇಡ: ಕೇಂದ್ರ
ಅತ್ತ ಕೇಂದ್ರ ಸರ್ಕಾರ ಕಾಫ್‌ಸಿರಪ್‌ನಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ಆರೋಪವನ್ನು ತಿರಸ್ಕರಿಸಿದೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಘಟನೆ ಕುರಿತು ತನಿಖೆ ಆರಂಭವಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದರ ಜತೆಗೆ 2 ವರ್ಷದ ಒಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡಬಾರದೆಂದು ಆದೇಶ ಹೊರಡಿಸಿದೆ. ಜೊತೆಗೆ ಕೆಮ್ಮಿನ ಔಷಧದ ಪರಿಣಾಮ ಎಂಬ ಯಾವುದೇ ಪ್ರಕರಣ ಬಂದಲ್ಲಿ ಖಾಸಗಿ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶಿಸಿದೆ.