ವಾಷಿಂಗ್ಟನ್ : ಭಾರತ ಸೇರಿ ವಿವಿಧ ದೇಶಗಳ ಮೇಲಿನ ತೆರಿಗೆ ಹೇರಿಕೆಯಿಂದ ಸಂಗ್ರಹವಾದ ಆದಾಯದ ಒಂದು ಪಾಲನ್ನು ಲಾಭಾಂಶ (ಡಿವಿಡೆಂಡ್) ದ ರೂಪದಲ್ಲಿ ಜನರಿಗೆ ಹಂಚಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಮೆರಿಕನ್ನರಿಗೆ ಗರಿಷ್ಠ 1.77 ಲಕ್ಷ ರುಪಾಯಿವರೆಗೂ ಹಣ ಹಂಚಿಕೆಯಾಗಲಿದೆ.
ಲಾಭಾಂಶ ವಿತರಣೆ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ ಎಂದು ಸ್ವತಃ ಟ್ರಂಪ್ ಅವರು ‘ಒನ್ ಅಮೆರಿಕ ನ್ಯೂಸ್ ನೆಟ್‌ವರ್ಕ್’ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದೇಶಗಳ ಮೇಲೆ ವಿಧಿಸಲಾಗಿರುವ ತೆರಿಗೆಯಿಂದ ಸಂಗ್ರಹವಾದ ಆದಾಯದಲ್ಲಿ 89 ಸಾವಿರದಿಂದ 1.77ಲಕ್ಷ ರು.ವರೆಗೆ ಲಾಭಾಂಶವಾಗಿ ವಿತರಿಸಲು ಉದ್ದೇಶಿಸಲಾಗಿದೆ. ತೆರಿಗೆ ಮೂಲಕ ಸಂಗ್ರಹಿಸಿದ ಹಣದಲ್ಲಿ ಮೊದಲ ಪಾಲು ಅಮೆರಿಕದ ರಾಷ್ಟ್ರೀಯ ಸಾಲ ಮರುಪಾವತಿಗೆ ಹೋಗಲಿದೆ. ಯಾಕೆಂದರೆ ಅಮೆರಿಕದ ಜನರೇ ಸಾಲ ಈ ಪ್ರಮಾಣ ಹೆಚ್ಚಲು ಅವಕಾಶ ನೀಡಿದ್ದಾರೆ ಎಂದ ಅವರು, ದೇಶವು ಸದ್ಯ ಸುಮಾರು 3200 ಲಕ್ಷ ಕೋಟಿ ರುಪಾಯಿಯಷ್ಟು ರಾಷ್ಟ್ರೀಯ ಸಾಲ ಹೊಂದಿದೆ.
ವಿದೇಶಿ ವಸ್ತುಗಳ ಮೇಲಿನ ತೆರಿಗೆ ಹೇರಿಕೆಯಿಂದ ಸಂಗ್ರಹವಾಗುತ್ತಿರುವ ಆದಾಯಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ. ವಿದೇಶಿ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯಿಂದ ವಾರ್ಷಿಕ 88 ಲಕ್ಷ ಕೋಟಿ ರು. ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಸಾಲ ತೀರಿಸಿದ ಬಳಿಕ ಉಳಿದ ಪಾಲನ್ನು ಸಾರ್ವಜನಿಕರಿಗೆ ಲಾಭಾಂಶದ ರೂಪದಲ್ಲಿ ವಿತರಿಸಲಿದ್ದೇವೆ ಎಂದಿದ್ದಾರೆ ಟ್ರಂಪ್.
ಕಳೆದ ಏಪ್ರಿಲ್ ತಿಂಗಳಿಂದ ಅಮೆರಿಕವು ವಿದೇಶಗಳ ಮೇಲೆ ತೆರಿಗೆ ವಿಧಿಸುತ್ತಿದೆ. ಭಾರತ ಮತ್ತು ಬ್ರೆಜಿಲ್ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ್ದು, ಇದು ಬೇರೆ ದೇಶಗಳಿಗೆ ಹೋಲಿಸಿದರೆ ಅತೀ ಹೆಚ್ಚು ಎಂದು ಅಂದಾಜಿಸಲಾಗಿದೆ.