ಜಾರ್ಖಂಡ್‌ ಸಿಎಂ ಇಂದು ಅರೆಸ್ಟ್‌ ? ಪತ್ನಿ ಹೊಸ ಸಿಎಂ ?

KannadaprabhaNewsNetwork | Updated : Jan 31 2024, 07:41 AM IST

ಸಾರಾಂಶ

ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಮತ್ತು ಬಿಹಾರದಲ್ಲಿ ಮಾಜಿ ಉಪಮುಖ್ಯಮಂತ್ರಿ ತೇಜ್‌ ಪ್ರತಾಪ್‌ ಯಾದವ್‌ ಅವರನ್ನು ಜಾರಿ ನಿರ್ದೇಶನಾಲಯ ತೀವ್ರ ವಿಚಾರಣೆಗೊಳಪಡಿಸಿದ್ದು, ಸದ್ಯದಲ್ಲೇ ಬಂಧಿಸುವ ಸಾಧ್ಯತೆಯಿದೆ.

ನವದೆಹಲಿ/ ರಾಂಚಿ: ಭೂ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌, ಬುಧವಾರ ತಮ್ಮ ನಿವಾಸದಲ್ಲೇ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಂದ ವಿಚಾರಣೆಗೆ ಗುರಿಯಾಗಲಿದ್ದಾರೆ. 

ಪ್ರಕರಣದಲ್ಲಿ ಸೊರೇನ್‌ ವಿರುದ್ಧ ಸಾಕಷ್ಟು ಖಚಿತ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಬುಧವಾರದ ವಿಚಾರಣೆ ಬಳಿಕ ಸೊರೇನ್‌ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಸೊರೇನ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದರೆ, ಅವರ ಪತ್ನಿ ಕಲ್ಪನಾ ಸೊರೇನ್‌ ಅವರು ಬಿಹಾರದಲ್ಲಿ ರಾಬ್ಡಿ ದೇವಿ ರೀತಿ ರಾಜ್ಯದ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. 

ಬಿಹಾರ ಮುಖ್ಯಮಂತ್ರಿ ಆಗಿದ್ದ ಆರ್‌ಜೆಡಿ ನಾಯಕ ಲಾಲು ಯಾದವ್‌ ಜೈಲಿಗೆ ಹೋದಾಗ ಇದೇ ರೀತಿ ಪತ್ನಿ ರಾಬ್ಡಿ ದೇವಿ ಮುಖ್ಯಮಂತ್ರಿ ಆಗಿದ್ದರು.

ಇನ್ನು ಹಾಲಿ ಮುಖ್ಯಮಂತ್ರಿ ಬಂಧನಕ್ಕೂ ಮುನ್ನ ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯ. ಈ ಪ್ರಕ್ರಿಯೆಯನ್ನು ಇ.ಡಿ. ಅಧಿಕಾರಿಗಳು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಬುಧವಾರ ವಿಚಾರಣೆಗೆ ಹಾಜರಾಗುವುದಾಗಿ ಹೇಮಂತ್‌ ತಿಳಿಸಿದ್ದರೂ ಸೋಮವಾರ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸುವ ಅವಶ್ಯಕತೆ ಏನಿತ್ತು ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾದ ನಾಯಕರು ಪ್ರಶ್ನಿಸಿದ್ದಾರೆ.

ನಾಪತ್ತೆ ಆಗಿದ್ದ ಸಿಎಂ ದಿಢೀರ್‌ ಪ್ರತ್ಯಕ್ಷ: ಇ.ಡಿ. ಅಧಿಕಾರಿಗಳು ಸೋಮವಾರ ಹೇಮಂತ್‌ರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. 

ಈ ದಾಳಿ ವೇಳೆ 36 ಲಕ್ಷ ರು. ನಗದು, ಒಂದು ಬಿಎಂಡಬ್ಲ್ಯು ಕಾರು ಮತ್ತು ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 

ಆದಾದ ಬಳಿಕ ಸುಮಾರು 30 ಗಂಟೆ ಕಾಲ ಹೇಮಂತ್‌ ಸುಳಿವೇ ಸಿಕ್ಕಿರಲಿಲ್ಲ. ಹೀಗಾಗಿ ಅವರು ವಿದೇಶಕ್ಕೆ ಪರಾರಿಯಾಗಬಹುದು ಎಂಬ ಕಾರಣಕ್ಕೆ ಇ.ಡಿ. ಅಧಿಕಾರಿಗಳು ವಿಮಾನ ನಿಲ್ದಾಣಗಳಿಗೆ ಅಲರ್ಟ್‌ ನೀಡಿದ್ದರು.

ಏನಿದು ಹಗರಣ?
ಲಾಲು ಪ್ರಸಾದ್‌ ಯಾದವ್‌ ಅವರು 2004-2009ರಲ್ಲಿ ರೈಲ್ವೆ ಸಚಿವರಾಗಿದ್ದ ವೇಳೆ ರೈಲ್ವೆಯಲ್ಲಿ ಉದ್ಯೋಗ ನೀಡಲು ಹಲವರಿಂದ ಲಂಚ ರೂಪದಲ್ಲಿ ಭೂಮಿಯನ್ನು ಪಡೆದಿದ್ದಾರೆ. 

ಈ ಭೂಮಿ ಲಾಲು ಪತ್ನಿ ರಾಬ್ಡಿ, ಪುತ್ರ ತೇಜಸ್ವಿಗೂ ಸಂದಾಯವಾಗಿದೆ ಎಂಬ ಪ್ರಕರಣವನ್ನು ಇ.ಡಿ. ತನಿಖೆ ಮಾಡುತ್ತಿದೆ.ಆದರೆ ಮಂಗಳವಾರ ಮಧ್ಯಾಹ್ನ ದಿಢೀರ್‌ ರಾಂಚಿಯಲ್ಲಿ ಕಾಣಿಸಿಕೊಂಡ ಹೇಮಂತ್‌, ಪಕ್ಷದ ಶಾಸಕರು, ನಾಯಕರ ಜೊತೆ ಸಭೆ ನಡೆಸಿದರು. 

ಈ ಸಭೆಯಲ್ಲಿ ಹೇಮಂತ್‌ರ ಪತ್ನಿ ಕೂಡಾ ಭಾಗಿಯಾಗಿದ್ದರು. ಈ ಸಭೆಯಲ್ಲಿನ ರಾಜ್ಯದ ಪ್ರಸಕ್ತ ರಾಜಕೀಯ ಸನ್ನಿವೇಶ, ಮುಂದೆ ಎದುರಾಗಬಹುದಾದ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಪತ್ನಿಗೆ ಸಿಎಂ ಪಟ್ಟ?
ಒಂದು ವೇಳೆ ಹೇಮಂತ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದರೆ, ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಹೇಮಂತ್‌ರ ಪತ್ನಿ ಕಲ್ಪನಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಇಂದು ವಿಚಾರಣೆ: ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ 9 ಸಮನ್ಸ್‌ ಅನ್ನು ಕಡೆಗಣಿಸಿದ್ದ ಸಿಎಂ ಹೇಮಂತ್‌ ಮನೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಕೆಲ ಕಾಲ ವಿಚಾರಣೆ ನಡೆಸಿ ತೆರಳಿದ್ದರು. 

ಬಾಕಿ ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಲುವಾಗಿ ನೀಡಿದ್ದ ನೋಟಿಸ್‌ಗೆ ಜ.31ರಂದು ಮಧ್ಯಾಹ್ನ 1 ಗಂಟೆಯ ಬಳಿಕ ತಾವು ವಿಚಾರಣೆಗೆ ಒಳಪಡಿಸಲು ಸಿದ್ಧರಿರುವುದಾಗಿ ಹೇಮಂತ್‌ ತಿಳಿಸಿದ್ದಾರೆ.

ಹೀಗಾಗಿ ಇ.ಡಿ. ಅಧಿಕಾರಿಗಳ ತಂಡ ಬುಧವಾರ ಮಧ್ಯಾಹ್ನ 1 ಗಂಟೆಗೆ ಹೇಮಂತ್‌ ಅವರ ಮನೆಗೆ ತೆರಳಿ ವಿಚಾರಣೆ ನಡೆಸಲಿದೆ. ಬಳಿಕ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನಿಷೇಧಾಜ್ಞೆ: ಜ.31ರಂದು ಹೇಮಂತ್‌ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಧಾನಿ ರಾಂಚಿಯ ಆಯಕಟ್ಟಿನ ಸ್ಥಳಗಳು, ಸಿಎಂ ಮನೆಯ ಸುತ್ತಮತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

ಏನಿದು ಪ್ರಕರಣ?
ರಾಜಧಾನಿ ರಾಂಚಿಯಲ್ಲಿ ಸೇನೆಗೆ ಸೇರಿದ ನೂರಾರು ಕೋಟಿ ರು. ಬೆಲೆ ಬಾಳುವ ಸುಮಾರು 7 ಎಕರೆ ಭೂಮಿಯನ್ನು ಅಕ್ರಮ ದಾಖಲೆ ಸೃಷ್ಟಿಸುವ ಮೂಲಕ ಕಬಳಿಸಿದ ಆರೋಪ ಮುಖ್ಯಮಂತ್ರಿ ಸೊರೇನ್‌ ಮೇಲಿದೆ. 

ಈ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿಗಳು ಸೇರಿದಂತೆ 14 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ನಡೆದ ಅಕ್ರಮ ಹಣದ ವಹಿವಾಟು ತನಿಖೆಯನ್ನು ಇ.ಡಿ. ನಡೆಸುತ್ತಿದೆ.

ಡಿಸಿಎಂ ಪಟ್ಟ ಹೋದ ಬೆನ್ನಲ್ಲೇ ತೇಜಸ್ವಿ 8 ತಾಸು ಇ.ಡಿ. ವಿಚಾರಣೆ: ಉದ್ಯೋಗಕ್ಕಾಗಿ ಭೂಮಿ ಲಂಚ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಹಾಗೂ ಆರ್‌ಜೆಡಿ ನೇತಾರ ಲಾಲು ಪ್ರಸಾದ್‌ ಯಾದವ್‌ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರನ್ನು ಜಾರಿ ನಿರ್ದೇಶನಾಲಯ 8 ತಾಸು ತೀವ್ರ ವಿಚಾರಣೆಗೊಳಪಡಿಸಿದೆ.

ತೇಜಸ್ವಿ ಅವರ ಡಿಸಿಎಂ ಪಟ್ಟ ಹೋದ 2 ದಿನದಲ್ಲೇ ಇ.ಡಿ. ವಿಚಾರಣೆ ನಡೆಸಿರುವುದು ಗಮನಾರ್ಹ.ವಿಚಾರಣೆಗೆ ಹಾಜರಾಗುವಂತೆ ಜ.19ರಂದು ಸಮನ್ಸ್‌ ನೀಡಲಾಗಿದ್ದ ಹಿನ್ನೆಲೆಯಲ್ಲಿ ತೇಜಸ್ವಿ ಮಂಗಳವಾರ ಬೆಳಗ್ಗೆ 11:35ರ ಸುಮಾರಿಗೆ ಇ.ಡಿ. ಕಚೇರಿಗೆ ಹಾಜರಾದರು. 

ರಾತ್ರಿ 8.30ರವರೆಗೆ ವಿಚಾರಣೆ ನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರನ್ನು ಇ.ಡಿ. ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

Share this article