ಉಚಿತ ಗ್ಯಾರಂಟಿ ಯೋಜನೆ - ಹಿಮಾಚಲದಲ್ಲಿ ಸರ್ಕಾರಿ ನೌಕರರ ವೇತನ ವಿಳಂಬ : ಭಾರೀ ಆರ್ಥಿಕ ಸಂಕಷ್ಟದ ಬಿಸಿ

KannadaprabhaNewsNetwork |  
Published : Sep 04, 2024, 01:52 AM ISTUpdated : Sep 04, 2024, 05:53 AM IST
ಸುಖ್ವಿಂದರ್‌ ಸಿಂಗ್‌ ಸುಖು | Kannada Prabha

ಸಾರಾಂಶ

ಹಿಮಾಚಲ ಪ್ರದೇಶ ಸರ್ಕಾರವು ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರಿ ನೌಕರರಿಗೆ ವೇತನ ಪಾವತಿ ವಿಳಂಬವಾಗಿದೆ. ಉಚಿತ ಯೋಜನೆಗಳು ಮತ್ತು ಹಳೆಯ ಪಿಂಚಣಿ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದೆ.

ಶಿಮ್ಲಾ: ಅನೇಕ ಉಚಿತ ಗ್ಯಾರಂಟಿ ಯೋಜನೆ ಘೋಷಣೆ, ಹಳೆ ಪಿಂಚಣಿ ಯೋಜನೆ ಜಾರಿ ಬಳಿಕ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿರುವ ಹಿಮಾಚಲಪ್ರದೇಶದಲ್ಲಿ ಇದೀಗ ಸರ್ಕಾರಿ ನೌಕರರ ವೇತನ ಪಾವತಿಯಲ್ಲೂ ವಿಳಂಬ ಕಂಡುಬಂದಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನವೇ ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗುತ್ತಿತ್ತು. ಆದರೆ ಆಗಸ್ಟ್‌ ತಿಂಗಳ ವೇತನ ಇನ್ನೂ ಅಧಿಕಾರಿಗಳ ಕೈ ಸೇರಿಲ್ಲ.

ಇಂಥ ಬೆಳವಣಿಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡುಬಂದಿದ್ದು, ಈ ಬೆಳವಣಿಗೆ ಕುರಿತು ರಾಜ್ಯದ ಸರ್ಕಾರಿ ನೌಕರರು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿಯ ಸಂಕಷ್ಟ ಬಿಚ್ಚಿಟ್ಟಿದ್ದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು, ತಾವೂ, ತಮ್ಮ ಸಚಿವ ಸಂಪುಟದ ಸದಸ್ಯರು, ನಿಗಮ ಮಂಡಳಿ ಸದಸ್ಯರು ತಮ್ಮ ವೇತನವನ್ನು 2 ತಿಂಗಳು ಪಡೆಯುವುದಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಆರ್ಥಿಕ ಸಂಕಷ್ಟದ ಬಿಸಿ 2.15 ಲಕ್ಷ ಅಧಿಕಾರಿಗಳು ಮತ್ತು 90000 ನಿವೃತ್ತ ಸಿಬ್ಬಂದಿಗಳಿಗೆ ತಟ್ಟಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ 520 ಕೋಟಿ ರು.ನಷ್ಟು ಆದಾಯ ಕೊರತೆ ಅನುದಾನ ನೀಡಬೇಕಿದೆ. ಅದು ಸೆ.6ರ ವೇಳೆಗೆ ರಾಜ್ಯದ ಖಜಾನೆ ಸೇರುವ ಸಾಧ್ಯತೆ ಇದೆ. ಆ ಹಣವನ್ನು ನೌಕರರ ವೇತನ ಪಾವತಿಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ರಾಜ್ಯದ ದಯನೀಯ ಆರ್ಥಿಕ ಪರಿಸ್ಥಿತಿಯನ್ನು ಅನಾವರಣ ಮಾಡಿದೆ.

ಈಗಾಗಲೇ 86589 ಕೋಟಿ ರು. ಸಾಲದ ಹೊರೆ ಎದುರಿಸುತ್ತಿರುವ ಹಿಮಾಚಲ ಪ್ರದೇಶಕ್ಕೆ ಹಳೆಯ ಪಿಂಚಣಿ ಯೋಜನೆ ಜಾರಿ ಬಳಿಕ ನೀಡಬೇಕಾಗಿರುವ 10000 ಕೋಟಿ ರು. ಹಿಂಬಾಕಿ ಹೊರೆಯೂ ಅಪ್ಪಳಿಸಿದೆ. ಇದು ಸೀಮಿತ ಸಂಪನ್ಮೂಲ ಹೊಂದಿರುವ ಮತ್ತು ಪದೇ ಪದೇ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವ ರಾಜ್ಯದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ 3 ವರ್ಷಗಳಲ್ಲೇ ರಾಜ್ಯ ಸರ್ಕಾರ 21366 ಕೋಟಿ ರು. ಸಾಲ ಮಾಡಿದೆ. ಸಾಲ ಮತ್ತು ಬಡ್ಡಿ ಮರುಪಾವತಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗಿರುವ ಕಾರಣ ಹೊಸ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹೊಂದಿಸಲು ಪರದಾಡುತ್ತಿದೆ.

- 86 ಸಾವಿರ ಕೋಟಿ ರು. ಸಾಲದ ಭಾರ ಹೊತ್ತಿರುವ ಹಿಮಾಚಲ ಸರ್ಕಾರ

- ಹಳೆಯ ಪಿಂಚಣಿ, ಉಚಿತ ಗ್ಯಾರಂಟಿಗಳ ಜಾರಿಯಿಂದ ಸರ್ಕಾರಕ್ಕೆ ಸಂಕಷ್ಟ

- ಪದೇ ಪದೇ ಎದುರಾಗುವ ಪ್ರಾಕೃತಿಕ ವಿಕೋಪದಿಂದಲೂ ಭಾರಿ ಹೊರೆ

- ಕಳೆದ 3 ವರ್ಷಗಳಲ್ಲೇ 21366 ಕೋಟಿ ರು. ಸಾಲ ಮಾಡಿರುವ ಸರ್ಕಾರ

- ಸಾಲ, ಬಡ್ಡಿ ಮರು ಪಾವತಿಗೇ ಹೆಚ್ಚು ಹಣ ಪಾವತಿಸುತ್ತಿರುವ ಸರ್ಕಾರ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿಂದೂರದ ವೇಳೆ ಅಡಗಲು ಸೂಚನೆ ಇತ್ತು: ಜರ್ದಾರಿ
2025 ಸಾರ್ಥಕ ವರ್ಷ: ಮನ್‌ ಕಿ ಬಾತ್‌ನಲ್ಲಿ ಮೋದಿ