ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈ ವರ್ಷದ ಕೊನೆಯ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ್ದು, 2025ನೇ ವರ್ಷವು ಆಪರೇಷನ್‌ ಸಿಂದೂರ, ಏಷ್ಯಾಕಪ್‌, ವಿಶ್ವಕಪ್‌ ಜಯ, ಬಾಹ್ಯಾಕಾಶ ವಿಕ್ರಮ ಸೇರಿದಂತೆ ಹಲವು ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು ಎಂದು ಬಣ್ಣಿಸಿದ್ದಾರೆ.

- ಆಪರೇಷನ್‌ ಸಿಂದೂರ, ಕ್ರೀಡಾ ಕ್ಷೇತ್ರದಲ್ಲಿ ಸಕ್ಸಸ್‌

- ಭದ್ರತೆಯಲ್ಲಿ ರಾಜಿಯಿಲ್ಲ ಎಂದು ವಿಶ್ವಕ್ಕೆ ಸಾಬೀತು

- ಭಾರತದ ಯುವ ಶಕ್ತಿ ಜಗತ್ತಿಗೆ ಭರವಸೆ: ಪ್ರಧಾನಿ

ಪಿಟಿಐ ನವದೆಹಲಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈ ವರ್ಷದ ಕೊನೆಯ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ್ದು, 2025ನೇ ವರ್ಷವು ಆಪರೇಷನ್‌ ಸಿಂದೂರ, ಏಷ್ಯಾಕಪ್‌, ವಿಶ್ವಕಪ್‌ ಜಯ, ಬಾಹ್ಯಾಕಾಶ ವಿಕ್ರಮ ಸೇರಿದಂತೆ ಹಲವು ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು ಎಂದು ಬಣ್ಣಿಸಿದ್ದಾರೆ.

ಸುದೀರ್ಘ ಭಾಷಣ ಮಾಡಿದ ಮೋದಿ, ‘2025 ಭಾರತಕ್ಕೆ ಸಾರ್ಥಕ ವರ್ಷವಾಗಿತ್ತು, ಭದ್ರತೆ, ಕ್ರೀಡೆ ಸೇರಿದಂತೆ ಜಗತ್ತಿನಲ್ಲಿ ಭಾರತದ ಪ್ರಭಾವ ಗೋಚರಿಸಿತ್ತು. ಆಪರೇಷನ್‌ ಸಿಂದೂರ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತ. ದೇಶದ ಭದ್ರತೆ ವಿಚಾರದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಜಗತ್ತಿಗೆ ತೋರಿಸಿತು’ಎಂದು ಹೇಳಿದರು.

ಕ್ರೀಡಾ ಸಾಧನೆಗೆ ಮೆಚ್ಚುಗೆ:

ಕ್ರೀಡಾಪಟುಗಳ ಸಾಧನೆ ಕೊಂಡಾಡಿದ ಪ್ರಧಾನಿ, ‘ ಕ್ರೀಡೆಯಲ್ಲಿ ನಿಜಕ್ಕೂ ಅವಿಸ್ಮರಣೀಯ ವರ್ಷ. ಪುರುಷರು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದರು, ವನಿತೆಯರು ಚೊಚ್ಚಲ ಏಕದಿನ ವಿಶ್ವಕಪ್‌, ಅಂಧ ವನಿತೆಯರು ಟಿ20 ವಿಶ್ವಕಪ್‌ ಜಯಿಸಿದರು. ಏಷ್ಯಾಕಪ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ಯಾರಾ ಅಥ್ಲೀಟ್‌ಗಳು ಗೆಲುವು ಪಡೆದರು’ ಎಂದರು.

ಜತೆಗೆ ‘ಭಾರತ ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ದೈತ್ಯ ಸಾಧನೆ ಮಾಡಿದೆ. ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ಎನಿಸಿಕೊಂಡರು. ಯುವ ಶಕ್ತಿಯಿಂದಾಗಿ ಜಗತ್ತು ಭಾರತವನ್ನು ಭರವಸೆಯಿಂದ ನೋಡುತ್ತಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಧನೆಯಿಂದಾಗಿ ವಿದೇಶಗಳು ನಮ್ಮಿಂದ ಪ್ರಭಾವಿತವಾಗು ತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಯಾಗ್‌ ರಾಜ್‌ ಕುಂಭಮೇಳ, ಅಯೋಧ್ಯೆಯ ರಾಮಮಂದಿರದಲ್ಲಿ ದ್ವಜಾರೋಹಣ, ವಂದೇ ಮಾತರಂಗೆ 150 ವರ್ಷ ಸೇರಿ ಹಲವು ವಿಚಾರ ಪ್ರಸ್ತಾಪಿಸಿದರು.

==

ವೈದ್ಯರ ಸಂಪರ್ಕಿಸದೆ ಆ್ಯಂಟಿ ಬಯೋಟಿಕ್‌ ಸೇವಿಸಬೇಡಿ: ಮೋದಿ ಸಲಹೆ

ನವದೆಹಲಿ: ‘ವೈದ್ಯರನ್ನು ಸಂಪರ್ಕಿಸದೆ ಆ್ಯಂಟಿ ಬಯೋಟಿಕ್‌ ಸೇರಿದಂತೆ ಇನ್ನಿತರ ಯಾವುದೇ ಔಷಧಿಗಳನ್ನು ಸೇವಿಸಬೇಡಿ’ ಎಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.ಮನ್‌ ಕೀ ಬಾತ್‌ನಲ್ಲಿ ಈ ಬಗ್ಗೆ ಮಾತನಾಡಿದ ಅವರು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐಸಿಎಂಆರ್‌) ಇತ್ತೀಚಿನ ವರದಿ ಪ್ರಕಾರ ನ್ಯೂಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳಂತಹ ಸಮಸ್ಯೆಗಳಲ್ಲಿ ಆ್ಯಂಟಿ ಬಯೋಟಿಕ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಇದು ಕಳವಳಕಾರಿ ವಿಷಯ. ಜನರು ಅನಿಯಂತ್ರಿತವಾಗಿ ಬಳಸುತ್ತಿರುವುದೇ ಮೂಲ ಕಾರಣ. ಇಂದು ಜನರು ಕೇವಲ ಮಾತ್ರೆ ಸೇವಿಸಿದರೆ ಗುಣಮುಖವಾಗುತ್ತೇವೆ ಎಂದು ಭಾವಿಸಿದ್ದಾರೆ. ಆ ರೀತಿ ಮಾಡಬೇಡಿ. ವೈದ್ಯರ ಅನುಮತಿಯಿಲ್ಲದೆ ನಿಮ್ಮದೇ ನಿರ್ಧಾರದಿಂದ ಆ್ಯಂಟಿ ಬಯೋಟಿಕ್‌ ಸೇರಿದಂತೆ ಯಾವುದೇ ಮಾತ್ರೆ ಸೇವಿಸಬೇಡಿ’ ಎಂದರು.