- ಆದಾಯ ಅಸಮತೋಲನ 27 ವರ್ಷಗಳಲ್ಲೇ ಗರಿಷ್ಠ

- ನಿರುದ್ಯೋಗ ಪ್ರಮಾಣ ಕೂಡ ಶೇ.7.1ರವರೆಗೆ ಏರಿಕೆ

- ಬಡತನದ ಬಿಗಿಮುಷ್ಟಿಯಲ್ಲಿ ನೆರೆ ದೇಶ ಪಾಕಿಸ್ತಾನ

ಕರಾಚಿ: ಸದಾ ಮೂಲಭೂತವಾದವನ್ನೇ ಉಸಿರಾಡುವ, ಭಾರತ ವಿರೋಧವನ್ನೇ ನಿತ್ಯದ ಕಾಯಕ ಮಾಡಿಕೊಂಡು ಬಂದಿರುವ ಪಾಕಿಸ್ತಾನದಲ್ಲೀಗ ಬಡತನದ ತಾಂಡವ ಮಿತಿ ಮೀರಿದೆ. ಪಾಕಿಸ್ತಾನದಲ್ಲೀಗ ಬಡತನ ಪ್ರಮಾಣ 11 ವರ್ಷಗಳ ಗರಿಷ್ಠಕ್ಕೆ ತಲುಪಿದ್ದರೆ, ಆದಾಯ ಅಸಮತೋಲನವು 27 ವರ್ಷಗಳಷ್ಟು ಗರಿಷ್ಠ ಮಟ್ಟ ತಲುಪಿದೆ!

ಈ ವಿಚಾರವನ್ನು ಸ್ವತಃ ಪಾಕಿಸ್ತಾನದ ಯೋಜನಾ ಸಚಿವ ಆಶಾನ್‌ ಇಕ್ಬಾಲ್‌ ಅವರೇ ತಿಳಿಸಿದ್ದಾರೆ.


ಸದ್ಯ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೆರವನ್ನೇ ನೆಚ್ಚಿಕೊಂಡಿರುವ ಪಾಕಿಸ್ತಾನದ ಅರ್ಥವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ನೆರವಿಗಾಗಿ ಮೊರೆ ಇಡುವ ಪರಿಸ್ಥಿತಿ ಬಂದಿದೆ. ದೇಶದಲ್ಲಿ 70 ದಶಲಕ್ಷ ಮಂದಿ ತೀವ್ರ ಬಡತನದಿಂದ ಬಳಲುತ್ತಿದ್ದಾರೆ.

2024-25ನೇ ಹಣಕಾಸು ವರ್ಷದಲ್ಲಿ ದೇಶದ ಬಡತನ ಪ್ರಮಾಣವು ಶೇ.28.9ಕ್ಕೆ ಏರಿಕೆಯಾಗಿದೆ. ಇದು 2019ರಲ್ಲಿ ಶೇ.21.9ರಷ್ಟಿತ್ತು. 2014ರ ಬಳಿಕ ದೇಶದಲ್ಲಿ ಈ ಪ್ರಮಾಣದಲ್ಲಿ ಬಡತನ ಮಟ್ಟ ಏರಿಕೆಯಾಗುತ್ತಿರುವುದು ಇದೇ ಮೊದಲು. ಆಗ ಶೇ.29.5ರಮಟ್ಟಿಗೆ ಏರಿಕೆಯಾಗಿತ್ತು. ಇನ್ನು ಆದಾಯ ಅಸಮಾನತೆ ಕೂಡ ಶೇ.29.5ರಿಂದ ಶೇ.32.7ರ ವರೆಗೆ ಏರಿಕೆ ಕಂಡಿದೆ. 1998ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಆದಾಯ ಸಮತೋಲನ ಏರಿಕೆಯಾಗುತ್ತಿರುವುದು ಇದೇ ಮೊದಲು.

ಇದರ ಜತೆಗೆ ನಿರುದ್ಯೋಗ ಪ್ರಮಾಣ ಕೂಡ 21 ವರ್ಷಗಳಲ್ಲೇ ಗರಿಷ್ಠಮಟ್ಟ ಅಂದರೆ ಶೇ.7.1ರಷ್ಟು ಪ್ರಮಾಣಕ್ಕೇರಿದೆ. ಇನ್ನು ಗ್ರಾಮೀಣ ಬಡತನ ಕೂಡ ಶೇ.28.2ರಿಂದ ಶೇ.36.2ಕ್ಕೆ ಏರಿಕೆಯಾಗಿದ್ದರೆ, ನಗರ ಬಡತನ ಶೇ.11ರಿಂದ ಶೇ.17.4ಕ್ಕೆ ಹೆಚ್ಚಳವಾಗಿದೆ. ಹಿಂಸಾಪೀಡಿತ ಬಲೂಚಿಸ್ತಾನದಲ್ಲಿ ಬಡತನ ಪ್ರಮಾಣ ಶೇ.42ರಿಂದ ಶೇ.47ರ ವರೆಗಿದೆ.

ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಬ್ಸಿಡಿಯನ್ನು ವಾಪಸ್‌ ಪಡೆಯುವಂಥ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ದೇಶ ತಳ್ಳಲ್ಪಟ್ಟಿದೆ. ನೈಸರ್ಗಿಕ ದುರಂತಗಳು ಹಾಗೂ ದುರ್ಬಲ ಆರ್ಥಿಕ ಬೆಳವಣಿಗೆಗಳೂ ದೇಶದಲ್ಲಿ ಉದ್ಯೋಗ, ಬಡತನ, ಅಸಮಾನತೆ ಹೆಚ್ಚಳಕ್ಕೆ ಕಾರಣ‍ವಾಗುತ್ತಿವೆ.

==

ನವಾಜ್‌ ಪುತ್ರಿ ₹380 ಕೋಟಿಯ ವಿಮಾನ ಖರೀದಿ: ವಿವಾದ

ಲಾಹೋರ್‌: ಪಾಕಿಸ್ತಾನವು 11 ವರ್ಷಗಳಲ್ಲೇ ಅತ್ಯಂತ ಭೀಕರ ಬಡತನಕ್ಕೆ ಸಾಕ್ಷಿಯಾಗಿರುವ ನಡುವೆ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಪುತ್ರಿ, ಪಾಕಿಸ್ತಾನ ಪಂಜಾಬ್‌ ಮುಖ್ಯಮಂತ್ರಿ ಮರ್ಯಂ ನವಾಜ್‌ 380 ಕೋಟಿ ರು.ಗೆ ಐಷಾರಾಮಿ ವಿಮಾನ ಖರೀದಿಸಿದ್ದಾರೆ. ಇದು ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ.

ಪಂಜಾಬ್‌ ಸರ್ಕಾರವು 2019ರಲ್ಲಿ ಸಿದ್ಧವಾದ ಹೊಸ ಗಲ್ಫ್‌ಸ್ಟ್ರೀಮ್‌ ಜಿVII ಜಿ500 ವಿಮಾನವನ್ನು ಖರೀದಿಸಿದೆ. ಇದು 19 ಆಸನಗಳನ್ನು ಹೊಂದಿದೆ. ಇದರ ಅಂದಾಜು ಪಾಕಿಸ್ತಾನ ಮೌಲ್ಯದಲ್ಲಿ 1,170 ಕೋಟಿ ಪಾಕಿಸ್ತಾನಿ ರು. (ಭಾರತದಲ್ಲಿ 380 ಕೋಟಿ ರು.) ಎಂದು ಅಂದಾಜಿಸಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿರುವ ನಡುವೆಯೂ ನವಾಜ್‌ ಷರೀಫ್‌ ಪುತ್ರಿ ಈ ಐಷಾರಾಮಿ ವಿಮಾನ ಖರೀದಿಯನ್ನು ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಟೀಕಿಸಿದ್ದು, ‘ಸಾರ್ವಜನಿಕರ ಹಣ ಬಳಸಿಕೊಂಡಿದ್ದಾರೆ’ ಎಂದು ಆರೋಪಿಸಿದೆ.