ಕಳೆದ ವರ್ಷ ಹತ್ತು ಲಕ್ಷ ಜಿಲೇಬಿ ತಯಾರು ಮಾಡಿದ್ದ ಸಿಂಧನೂರು ವಿಜಯಕುಮಾರ ಅವರ ಗೆಳೆಯರ ಬಳಗ ಈ ಬಾರಿ ಮೈಸೂರು ಪಾಕ್ ಮಾಡಲು ಮುಂದಾಗಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಇಲ್ಲಿನ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹದಲ್ಲಿ ಪ್ರಸಕ್ತ ವರ್ಷ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಸಿದ್ಧಗೊಳ್ಳುತ್ತಿದ್ದು, ಲಕ್ಷ ಲಕ್ಷ ಭಕ್ತರಿಗೆ ಪ್ರಸಾದಕ್ಕೆ ಮೈಸೂರ ಪಾಕ್ ಬಡಿಸಲಾಗುತ್ತಿದೆ.

ಹೌದು, 25 ಲಕ್ಷ ರೊಟ್ಟಿ ಸಂಗ್ರಹ, 25 ಟನ್ ಮಾದಲಿ, 5 ಲಕ್ಷ ಮಿರ್ಚಿ ಭಜ್ಜಿ, ಹೀಗೆ ಗವಿಸಿದ್ಧೇಶ್ವರ ಮಹಾದಾಸೋಹದಲ್ಲಿ ಖಾದ್ಯಗಳ ಪ್ರಮಾಣ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದ್ದು, ಈ ವರ್ಷ ಮತ್ತೊಂದು ಸೇರ್ಪಡೆಯಾಗಿದ್ದು, ಅದುವೇ 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತಿದೆ. ಶನಿವಾರವೇ ಮೈಸೂರು ಪಾಕ್ ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ.

ಯಾರಿಂದ ಈ ಸೇವೆ: ಕಳೆದ ವರ್ಷ ಹತ್ತು ಲಕ್ಷ ಜಿಲೇಬಿ ತಯಾರು ಮಾಡಿದ್ದ ಸಿಂಧನೂರು ವಿಜಯಕುಮಾರ ಅವರ ಗೆಳೆಯರ ಬಳಗ ಈ ಬಾರಿ ಮೈಸೂರು ಪಾಕ್ ಮಾಡಲು ಮುಂದಾಗಿದೆ.

60 ಕ್ವಿಂಟಲ್ ಸಕ್ಕರೆ, 30 ಕ್ವಿಂಟಲ್ ಕಡಲೆ ಹಿಟ್ಟು, 30 ಬ್ಯಾರಲ್ ಒಳ್ಳೆಣ್ಣೆ, 5 ಕ್ವಿಂಟಲ್ ಮೈದಾ, 1 ಕ್ವಿಂಟಲ್ ಯಾಲಕ್ಕಿ, 3 ಕ್ವಿಂಟಲ್ ತುಪ್ಪ ಸೇರಿದಂತೆ ಬರೋಬ್ಬರಿ 150 ಕ್ವಿಂಟಲ್ ಗೂ ಅಧಿಕ ಸಾಮಗ್ರಿ ಬಳಸಲಾಗುತ್ತದೆ. ಸುಮಾರು 100 ಕ್ವಿಂಟಲ್ ಮೈಸೂರು ಪಾಕ್ ಸಿದ್ಧವಾಗುತ್ತದೆ.

ಪ್ರತಿ ಕ್ವಿಂಟಲ್ ಗೆ 10-12 ಸಾವಿರ ಮೈಸೂರು ಪಾಕ್ ಸಿದ್ಧವಾಗುತ್ತವೆ. ಅಂದರೆ ಬರೋಬ್ಬರಿ 10 ರಿಂದ 12 ಲಕ್ಷ ಮೈಸೂರು ಪಾಕ್ ಸಿದ್ಧ ಮಾಡಲಾಗುತ್ತದೆ.

ಇದಕ್ಕಾಗಿ ಆದೋನಿ, ಮಸ್ಕಿ, ತಾವರಗೇರಾ ಹಾಗೂ ಗಬ್ಬೂರು ಗ್ರಾಮಗಳ 70 ನುರಿತ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಸಹಾಯಕ್ಕಾಗಿ ಬರೋಬ್ಬರಿ 100 ಜನರು ಸೇವೆ ಮಾಡುತ್ತಿದ್ದಾರೆ.

ಪ್ರತಿ ದಿನ ಬರೋಬ್ಬರಿ ಐದು ಲಕ್ಷದಂತೆ ಎರಡು ದಿನಗಳ ಕಾಲ 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಸಿದ್ಧ ಮಾಡಲಾಗುತ್ತದೆ.

ದಾಖಲೆ: ಈ ಹಿಂದೆ ಐದು ಕ್ವಿಂಟಲ್, ಹತ್ತು ಕ್ವಿಂಟಲ್ ಮೈಸೂರ ಪಾಕ್ ಮಾಡಿ ಕೊಡುತ್ತಿದ್ದರು. ಇದೇ ಮೊದಲ ಬಾರಿಗೆ 150 ಕ್ವಿಂಟಲ್ ಗೂ ಅಧಿಕ ಪದಾರ್ಥ ಬಳಕೆ ಮಾಡಿ, 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಮಾಡುತ್ತಿರುವುದು ಹೊಸ ದಾಖಲೆಯಾಗಿದೆ.

ಕೊಪ್ಪಳದ ಗೆಳೆಯರ ಬಳಗ ಸೇರಿಕೊಂಡು ಪ್ರತಿ ವರ್ಷವೂ ಐದು ಲಕ್ಷ ಮಿರ್ಚಿ ಭಜ್ಜಿ ಮಾಡುತ್ತಾರೆ. ಈ ವರ್ಷವೂ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜ. 5ರಂದು ರಾತ್ರಿಯಿಂದ ಮಿರ್ಚಿ ಭಜ್ಜಿ ಮಾಡಲಾಗುತ್ತದೆ. ಜ.6 ರಂದು ಬರುವ ಲಕ್ಷ ಲಕ್ಷ ಭಕ್ತರಿಗೆ ಮಿರ್ಚಿ ಭಜ್ಜಿ ಬಡಿಸಲಾಗುತ್ತದೆ.

ಕಳೆದ ಅನೇಕ ವರ್ಷಗಳಿಂದ ಸೇವೆ ಮಾಡುತ್ತಿದ್ದು, ಪ್ರತಿ ವರ್ಷವೂ ಒಂದಿಲ್ಲೊದು ವಿನೂತನ ಖಾದ್ಯ ಮಾಡುವ ಸಂಪ್ರದಾಯ ಹಾಕಿಕೊಂಡಿದ್ದೇವೆ. ಸ್ನೇಹಿತರು, ಸಿಂಧನೂರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇದಕ್ಕೆ ಕೈಜೋಡಿಸುತ್ತಾರೆ. ಈ ವರ್ಷ 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಮಾಡಲಾಗುತ್ತದೆ ಎಂದು ವಿಜಯಕುಮಾರ ಗುಡಿಯಾಳ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಿರ್ಚಿ ಭಜ್ಜಿ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುಮಾರು 5 ಲಕ್ಷಕ್ಕೂ ಅಧಿಕ ಮಿರ್ಚಿ ಭಜ್ಜಿ ಮಾಡುವುದಕ್ಕೆ ಎಲ್ಲ ರೀತಿಯ ತಯಾರಿಯಾಗಿದೆ ಎಂದು ಮಿರ್ಚಿ ಭಜ್ಜಿ ಬಳಗದ ಮಂಜುನಾಥ ಅಂಗಡಿ ತಿಳಿಸಿದ್ದಾರೆ.