ಹಿಮಾಚಲ ಹೈಡ್ರಾಮಾ: ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಗೆ ‘ಲಾಟ್ರಿ’

KannadaprabhaNewsNetwork | Updated : Feb 28 2024, 08:35 AM IST

ಸಾರಾಂಶ

2022ರ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ 68 ಸ್ಥಾನಗಳ ಪೈಕಿ 40 ಸ್ಥಾನ ಗೆದ್ದು ಬೀಗಿದ್ದ ಮತ್ತು 3 ಪಕ್ಷೇತರರ ಬೆಂಬಲವನ್ನೂ ಸಂಪಾದಿಸಿದ್ದ ಹಿಮಾಚಲಪ್ರದೇಶದ ಕಾಂಗ್ರೆಸ್‌ ಸರ್ಕಾರಕ್ಕೆ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.

ಶಿಮ್ಲಾ: 2022ರ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ 68 ಸ್ಥಾನಗಳ ಪೈಕಿ 40 ಸ್ಥಾನ ಗೆದ್ದು ಬೀಗಿದ್ದ ಮತ್ತು 3 ಪಕ್ಷೇತರರ ಬೆಂಬಲವನ್ನೂ ಸಂಪಾದಿಸಿದ್ದ ಹಿಮಾಚಲಪ್ರದೇಶದ ಕಾಂಗ್ರೆಸ್‌ ಸರ್ಕಾರಕ್ಕೆ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್‌ನ 6 ಮತ್ತು ಮೂವರು ಪಕ್ಷೇತರರು ಅಡ್ಡಮತದಾನ ಮಾಡಿದ್ದಾರೆ.

ಇದರ ಪರಿಣಾಮ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಪಕ್ಷದ ಹಿರಿಯ ನಾಯಕ, ವಕೀಲ ಅಭಿಷೇಕ್‌ ಮನು ಸಿಂಘ್ವಿ ಆಘಾತಕಾರಿ ಸೋಲು ಕಂಡಿದ್ದಾರೆ. ಇದು ಸ್ವತಃ ಕಾಂಗ್ರೆಸ್‌ ಮತ್ತು ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖುಗೆ ಶಾಕ್‌ ನೀಡಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಗೆದ್ದಿದ್ದಾರೆ.

ಚುನಾವಣೆಯಲ್ಲಿ ಉಭಯ ಅಭ್ಯರ್ಥಿಗಳಿಗೆ ತಲಾ 34 ಮತ ಬಂದವು. ಕೊನೆಗೆ ಲಾಟರಿ ಹಾಕಿದಾಗ ಹರ್ಷ ಮಹಾಜನ್‌ ಗೆಲುವು ಸಾಧಿಸಿದ್ದಾರೆ.

ಅಡ್ಡಮತದಾನ: ಕಾಂಗ್ರೆಸ್ ಈ ಬಾರಿ ದಿಲ್ಲಿ ನಾಯಕ ಅಭಿಷೇಕ್‌ ಮನು ಸಿಂಘ್ವಿ ಅವರನ್ನು ಕಣಕ್ಕೆ ಇಳಿಸಿತ್ತು. ವಿಧಾನಸಭೆಯಲ್ಲಿ ತನಗೆ 40 ಸ್ಥಾನ ಮತ್ತು ಮೂವರು ಪಕ್ಷೇತರರ ಬೆಂಬಲ ಇರುವ ಕಾರಣ ಗೆಲುವು ಹತ್ತಿ ಎತ್ತಿದಷ್ಟೇ ಸುಲಭ. 

ಗೆಲ್ಲಲು ಅಗತ್ಯವಾದ 35 ಮತಗಳ ಸುಲಭವಾಗಿ ಬರಲಿದೆ ಎಂದು ಪಕ್ಷ ಅಂದಾಜಿಸಿತ್ತು. ಆದರೆ ಮಂಗಳವಾರದ ಚುನಾವಣೆ ವೇಳೆ ಕಾಂಗ್ರೆಸ್‌ನ 6 ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರು ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಪರ ಮತ ಚಲಾಯಿಸಿ ಅವರನ್ನು ಗೆಲ್ಲಿಸಿದ್ದಾರೆ.

ವಿಶೇಷವೆಂದರೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ, ಮಾಜಿ ಕಾಂಗ್ರೆಸ್‌ ಶಾಸಕ ಹರ್ಷ್‌ಗೆ ಟಿಕೆಟ್‌ ನೀಡಿತ್ತು. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದೆ.

ನಮ್ಮ ಶಾಸಕರು ಕಿಡ್ನಾಪ್‌: ಸುಖು
ಅಡ್ಡಮತ ಹಾಕಿದ ನಮ್ಮ 6 ಹಾಗೂ 9 ಶಾಸಕರನ್ನು ಸಿಆರ್‌ಪಿಎಫ್‌ ಹಾಗೂ ಹರ್ಯಾಣ ಪೊಲೀಸರನ್ನು ಬಳಸಿ ಹರ್ಯಾಣಕ್ಕೆ ಕಿಡ್ನಾಪ್‌ ಮಾಡಿ ಕರೆದೊಯ್ಯಲಾಗಿದೆ ಎಂದು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್ ಸುಖು ಆರೋಪಿಸಿದ್ದಾರೆ. ಪರಾಜಿತ ಅಭ್ಯರ್ಥಿ ಅಭಿಷೇಕ್‌ ಸಿಂಘ್ವಿ ಕೂಡ ಬಿಜೆಪಿ ಕುದುರರೆ ವ್ಯಾಪಾರ ನಡೆಸಿದೆ ಎಂದು ಕಿಡಿಕಾರಿದ್ದಾರೆ.

ಹಿಮಾಚಲ ಕಾಂಗ್ರೆಸ್‌ ಸರ್ಕಾರಕ್ಕೆ ಕುತ್ತು?
ಶಿಮ್ಲಾ: 40 ಕಾಂಗ್ರೆಸ್‌ ಶಾಸಕರು ಹಾಗೂ 3 ಪಕ್ಷೇತರರ ಬಲ ಹೊಂದಿದ್ದ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರ್ಕಾರಕ್ಕೆ 9 ಶಾಸಕರ ಅಡ್ಡ ಮತದಾನ (6 ಕಾಂಗ್ರೆಸ್‌ ಹಾಗೂ 3 ಪಕ್ಷೇತರ) ಸಂಚಕಾರ ತಂದೊಡ್ಡುವ ಸಾಧ್ಯತೆ ಇದೆ. 

ಏಕೆಂದರೆ 68 ಸದಸ್ಯಬಲದ ವಿಧಾನಸಭೆಯಲ್ಲಿ ಈ 9 ಶಾಸಕರು ಕಾಂಗ್ರೆಸ್‌ಗೆ ಕೈಕೊಟ್ಟ ಕಾರಣ ಕಾಂಗ್ರೆಸ್‌ ಬಲ 34ಕ್ಕೆ ಕುಸಿಯಲಿದೆ. ಬಹುಮತಕ್ಕೆ 35 ಸದಸ್ಯರ ಬೆಂಬಲ ಬೇಕು. ಹೀಗಾಗಿ ಸರ್ಕಾರಕ್ಕೆ ಪತನ ಭೀತಿ ಸೃಷ್ಟಿಯಾಗಿದೆ.

ಖರ್ಗೆ ಕಿಡಿ: ಚುನಾಯಿತ ಸರ್ಕಾರಗಳನ್ನು ಬೀಳಿಸುವುದು ಬಿಜೆಪಿ ಖಯಾಲಿ. ಹೀಗೇ ಮುಂದುವರಿದರೆ ಪ್ರಜಾಸತ್ತೆ ನಾಶವಾಗಲಿದೆ ಎಂದು ಹಿಮಾಚಲ ವಿದ್ಯಮಾನದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರಿಸಿದ್ದಾರೆ.

ಟಾಪ್‌ 3 ಶ್ರೀಮಂತರ ಪೈಕಿ ಇಬ್ಬರಿಗೆ ಸೋಲು
ನವದೆಹಲಿ: ರಾಜ್ಯಸಭೆಗೆ ಸ್ಪರ್ಧಿಸಿದ್ದ ಟಾಪ್‌ 3 ಶ್ರೀಮಂತರ ಪೈಕಿ ಇಬ್ಬರಿಗೆ ಸೋಲಾಗಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಭಿಷೇಕ್‌ ಮನು ಸಿಂಘ್ವಿ 1,872 ಕೋಟಿ ರು., ಸಮಾಜವಾದಿ ಪಕ್ಷದ ಜಯಾ ಅಮಿತಾಭ್‌ ಬಚ್ಚನ್‌ 1,578 ಕೋಟಿ ರು., ಜೆಡಿಎಸ್‌ ಮತ್ತು ಬಿಜೆಪಿಯ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ 871 ಕೋಟಿ ರು. ಆಸ್ತಿ ಘೋಷಿಸಿದ್ದರು. 

ಈ ಪೈಕಿ ಅಭಿಷೇಕ್‌ ಮನು ಸಿಂಘ್ವಿ ಮತ್ತು ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ. ಜಯಾ ಅಮಿತಾಭ್‌ ಬಚ್ಚನ್‌ ಮಾತ್ರ ಜಯ ಸಾಧಿಸಿದ್ದಾರೆ.

Share this article