ಬಾಂಗ್ಲಾದೇಶ ವಿಭಜನೆ : ಮುಹಮ್ಮದ್‌ ಯೂನಸ್‌ಗೆ ಈಶಾನ್ಯ ಭಾರತದ 7 ರಾಜ್ಯಗಳ ನಾಯಕರ ಎಚ್ಚರಿಕೆ!

KannadaprabhaNewsNetwork |  
Published : Apr 02, 2025, 01:00 AM ISTUpdated : Apr 02, 2025, 04:59 AM IST
Muhammad Yunus

ಸಾರಾಂಶ

ಈಶಾನ್ಯ ಭಾರತದ 7 ರಾಜ್ಯಗಳ ಬಳಿ ಇರುವ ಸಮುದ್ರಕ್ಕೆ ಬಾಂಗ್ಲಾ ಏಕೈಕ ಅಧಿಪತಿ. ಈ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಚೀನಾಕ್ಕೆ ಆಹ್ವಾನ ನೀಡಿದ್ದ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಹೇಳಿಕೆಗೆ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನವದೆಹಲಿ: ಈಶಾನ್ಯ ಭಾರತದ 7 ರಾಜ್ಯಗಳ ಬಳಿ ಇರುವ ಸಮುದ್ರಕ್ಕೆ ಬಾಂಗ್ಲಾ ಏಕೈಕ ಅಧಿಪತಿ. ಈ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಚೀನಾಕ್ಕೆ ಆಹ್ವಾನ ನೀಡಿದ್ದ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಹೇಳಿಕೆಗೆ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಂಥ ಹೇಳಿಕೆ ಬಾಂಗ್ಲಾದೇಶ ವಿಭಜನೆಗೆ ನಾಂದಿ ಹಾಡಬಹುದು ಎಂದು ಈಶಾನ್ಯ ರಾಜ್ಯಗಳ ರಾಜಕೀಯ ಪಕ್ಷದ ನಾಯಕರು ಬಾಂಗ್ಲಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತ್ರಿಪುರಾದ ತಿಪ್ರಾ ಮೋಥಾ ಪಕ್ಷದ ಅಧ್ಯಕ್ಷ ಪ್ರದ್ಯೋತ್‌ ದೆಬ್ಬಾ ವರ್ಮಾ, ‘1947ರಲ್ಲಿ ಚಿತ್ತಗಾಂಗ್‌ ಬಂದರನ್ನು ಬಾಂಗ್ಲಾಗೆ ಬಿಟ್ಟುಕೊಟ್ಟದ್ದೇ ಭಾರತದ ದೊಡ್ಡ ತಪ್ಪು. ಹೊಸ ಮಾರ್ಗ ಹುಡುಕಲು ಕೋಟ್ಯಂತರ ರು. ಖರ್ಚು ಮಾಡುವ ಬದಲು, ಬಾಂಗ್ಲಾದೇಶವನ್ನು ವಿಭಜಿಸಬೇಕು’ ಎಂದು ಆಗ್ರಹ ಮಾಡಿದ್ದಾರೆ.

ಇನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಮಾತನಾಡಿ, ‘ಯೂನಸ್‌ ಹೇಳಿಕೆ ಆಕ್ರಮಣಕಾರಿ ಮತ್ತು ಖಂಡನೀಯ. ಇದನ್ನು ಲಘುವಾಗಿ ಪರಿಗಣಿಸಲಾಗದು. ಕಾರಣ, ಇಂಥ ಹೇಳಿಕೆ ವ್ಯೂಹಾತ್ಮಕ ದೃಷ್ಟಿಕೋನ ಮತ್ತು ಸಿದ್ಧಾಂತ ಪ್ರತಿಬಿಂಬಿಸುತ್ತವೆ. ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಸಂಪರ್ಕಿಸುವ ಚಿಕನ್‌ ನೆಕ್‌ ಬದಲು, ಅವುಗಳನ್ನು ಸಂಪರ್ಕಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ರಸ್ತೆ ಹಾಗೂ ರೈಲ್ವೆ ಜಾಲಗಳ ನಿರ್ಮಾಣ ಅಗತ್ಯ’ ಎಂದು ಹೇಳಿದ್ದಾರೆ. ಇನ್ನು ಮಣಿಪುರ ಮಾಜಿ ಸಿಎಂ ಬಿರೇನ್‌ ಸಿಂಗ್‌ ಮಾತನಾಡಿ, ‘ತಮ್ಮ ಕಾರ್ಯಸಾಧನೆಗೆ ಈಶಾನ್ಯ ಪ್ರದೇಶವನ್ನು ವ್ಯೂಹಾತ್ಮಕ ದಾಳವಾಗಿ ಬಳಸಲು ಬಾಂಗ್ಲಾ ಯತ್ನಿಸುತ್ತಿದೆ. ಭಾರತದ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುವುದು ಅವಿವೇಕ. ಇದರ ಪರಿಣಾಮವನ್ನು ಎದುರಿಸಬೇಕಾದೀತು’ ಎಂದು ಯೂನಸ್‌ಗೆ ಎಚ್ಚರಿಸಿದ್ದಾರೆ.

ಮತ್ತೊಂದೆಡೆ, ‘ಭಾರತವನ್ನು ಸುತ್ತುವರೆಯಲು ಬಾಂಗ್ಲಾದೇಶ ಚೀನಾವನ್ನು ಆಹ್ವಾನಿಸುತ್ತಿರುವುದು ಈಶಾನ್ಯ ಪ್ರದೇಶದ ಭದ್ರತೆಗೆ ಅಪಾಯಕಾರಿ’ ಎಂದಿರುವ ಕಾಂಗ್ರೆಸ್‌ನ ವಕ್ತಾರ ಪವನ್‌ ಖೇರಾ, ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ‘ಕೇಂದ್ರ ಸರ್ಕಾರ ಮಣಿಪುರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಈಗಾಗಲೇ ಚೀನಾ ಅರುಣಾಚಲ ಪ್ರದೇಶದ ಬಳಿ ಹಳ್ಳಿಗಳನ್ನು ಸ್ಥಾಪಿಸಿದೆ. ನಮ್ಮ ವಿದೇಶಾಂಗ ನೀತಿ ಎಷ್ಟು ಹದಗೆಟ್ಟಿದೆಯೆಂದರೆ, ಜಾವ ದೇಶದ(ಬಾಂಗ್ಲಾ) ರಚನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತೋ, ಅದೇ ಈಗ ನಮ್ಮ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದೆ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!