ಠಾಕ್ರೆ ಆಕ್ರೋಶಕ್ಕೆ ಮಣಿದ ಮಹಾ ಸರ್ಕಾರ : ತ್ರಿಭಾಷಾ ಸೂತ್ರ ರದ್ದು

KannadaprabhaNewsNetwork | Updated : Jun 30 2025, 05:52 AM IST

ಮಹಾರಾಷ್ಟ್ರದ ಶಾಲೆಗಳಲ್ಲಿ 1-5ನೇ ತರಗತಿಗೆ ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿ ಕಲಿಸುವ ಬಿಜೆಪಿ ಸರ್ಕಾರದ ನಿರ್ಣಯಕ್ಕೆರಾಜ್ಯಾದ್ಯಂತ ವಿರೋಧ ಭುಗಿಲೆದ್ದ ಬೆನ್ನಲ್ಲೆ, ಸರ್ಕಾರ ತನ್ನ ನಿರ್ಣಯವನ್ನು ಹಿಂಪಡೆದುಕೊಂಡಿದೆ.

 ಮುಂಬೈ :  ಮಹಾರಾಷ್ಟ್ರದ ಶಾಲೆಗಳಲ್ಲಿ 1-5ನೇ ತರಗತಿಗೆ ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿ ಕಲಿಸುವ ಬಿಜೆಪಿ ಸರ್ಕಾರದ ನಿರ್ಣಯಕ್ಕೆರಾಜ್ಯಾದ್ಯಂತ ವಿರೋಧ ಭುಗಿಲೆದ್ದ ಬೆನ್ನಲ್ಲೆ, ಸರ್ಕಾರ ತನ್ನ ನಿರ್ಣಯವನ್ನು ಹಿಂಪಡೆದುಕೊಂಡಿದೆ.

ಇದರ ಬೆನ್ನಲ್ಲೇ ಶಿವಸೇನೆ (ಯುಬಿಟಿ) ನಾಯಕ ಉದ್ಧವ ಠಾಕ್ರೆ ಹಾಗೂ ಎಂಎನ್‌ಎಸ್‌ ನಾಯಕ ರಾಜ್‌ ಠಾಕ್ರೆ ಹರ್ಷಿಸಿದ್ದು, ‘ಇದು ಮಹಾರಾಷ್ಟ್ರದ ಜನತೆಯ ಹೋರಾಟಕ್ಕೆ ಸಂದ ಜಯ. ಈ ಮುಂಚಿನ ಜು.5ರ ಪ್ರತಿಭಟನೆ ಬದಲು ವಿಜಯೋತ್ಸವ ಆಚರಿಸಲಾಗುವುದು’ ಎಂದಿದ್ದಾರೆ.

ಹಿಂದಿ ‘ಹೇರಿಕೆ’ ರದ್ದು:

ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ತ್ರಿಭಾಷಾ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಮತ್ತು ಜೂನ್‌ನಲ್ಲಿ ಹೊರಡಿಸಲಾದ ಸರ್ಕಾರಿ ನಿರ್ಣಯವನ್ನು ಹಿಂತೆಗೆದುಕೊಳ್ಳಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ತ್ರಿಭಾಷಾ ಸೂತ್ರದ ಅನುಷ್ಠಾನದ ಕುರಿತು ಶಿಫಾರಸು ಮಾಡಲು ಡಾ. ನರೇಂದ್ರ ಜಾಧವ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು’ ಎಂದು ತಿಳಿಸಿದರು.

‘ಮರಾಠಿ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸಲಾಗುವುದು. ಆದರೆ ಇದು ಕಡ್ಡಾಯವಲ್ಲ. ಶಾಲೆಯ ಪ್ರತಿ ತರಗತಿಯ ಕನಿಷ್ಠ 20 ವಿದ್ಯಾರ್ಥಿಗಳು ಹಿಂದಿ ಬದಲು ಬೇರೆ ಭಾಷೆ ಕಲಿಯುವ ಇಚ್ಛೆ ವ್ಯಕ್ತಪಡಿಸಿದರೆ, ಅದಕ್ಕೂ ವ್ಯವಸ್ಥೆ ಮಾಡಲಾಗುವುದು’ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಆದರೆ ಹಿಂದಿ ಕಲಿಕೆಗೆ ವಿರೋಧ ಪಕ್ಷಗಳಾದ ಎನ್‌ಸಿಪಿ (ಎಸ್‌ಪಿ), ಶಿವಸೇನಾ (ಯುಬಿಟಿ) ಹಾಗೂ ಎಂಎನ್‌ಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಹಾಗೂ ಎಂಎನ್‌ಎಸ್‌ ಮುಖ್ಯಸ್ಥ ರಾಜ್ ಠಾಕ್ರೆ, ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಜು.5ರಂದು ಜಂಟಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಈ ಬೆಳವಣಿಗೆ ನಡುವೆಯೇ, ಪ್ರತಿಪಕ್ಷಗಳ ಆಕ್ರೋಶಕ್ಕೆ ಮಣಿದ ಸರ್ಕಾರ ತನ್ನ ನಿರ್ಣಯದಿಂದ ಹಿಂದೆ ಸರಿದಿದೆ.

Read more Articles on