- ಹಿಂದಿ ದಿವಸದಂದೇ ಭಾಷಾ ಸಾಮರಸ್ಯ ಕರೆ
ಗಾಂಧಿನಗರ: ‘ಹಿಂದಿ ಮತ್ತು ಇತರೆ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷ ಇಲ್ಲ. ಪ್ರತಿಯೊಬ್ಬರು ತಮ್ಮ ಮಾತೃಭಾಷೆ ಉಳಿಸಿ ಬೆಳೆಸಿ ಬಳಸುವ ಮೂಲಕ ಅದನ್ನು ಜೀವಂತವಾಗಿಡಬೇಕು’ ಎಂದು ಕೇಂದ್ರ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ದಕ್ಷಿಣದ ಹಲವು ರಾಜ್ಯಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿರುವ ಹೊತ್ತಿನಲ್ಲೇ ಅಮಿತ್ ಶಾ, ಇಂಥದ್ದೊಂದು ಭಾಷಾ ಸಾಮರಸ್ಯದ ಮಾತುಗಳನ್ನಾಡಿದ್ದಾರೆ.
5ನೇ ಅಖಿಲ ಭಾರತೀಯ ರಾಜ್‌ಭಾಷಾ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದ ಅಮಿತ್ ಶಾ, ‘ಭಾರತೀಯರು ತಮ್ಮ ಭಾಷೆ ಉಳಿಸಿಕೊಳ್ಳಬೇಕು. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳ ಜತೆಗೆ ಮಾತೃಭಾಷೆಯಲ್ಲೇ ಮಾತನಾಡಬೇಕು’ ಎಂದು ಕರೆ ನೀಡಿದರು.ಇದೇ ವೇಳೆ, ‘ಶ್ರೀಕೃಷ್ಣದೇವರಾಯರು ಉತ್ತರ ಮತ್ತು ದಕ್ಷಿಣ ಎರಡೂ ಕಡೆ ಜನಪ್ರಿಯರಾಗಿದ್ದರು. ಸಂತ ಕಬೀರರ ದೋಹಾಗಳು ಕನ್ನಡ, ತಮಿಳು, ಮಲಯಾಳಂಗಳಂತಹ ದಕ್ಷಿಣದ ಭಾಷೆಗಳಿಗೂ ಅನುವಾದವಾಗಿವೆ’ ಎಂದ ಅವರು, ಭಾಷೆಗಳಿಗೆ ಗಡಿಯಿಲ್ಲ ಎಂಬ ಸಂದೇಶ ನೀಡಿದರು.
ಜೊತೆಗೆ, ‘ಹಿಂದಿ ಮತ್ತು ಅನ್ಯ ಭಾರತೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷ ಇಲ್ಲ. ದಯಾನಂದ ಸರಸ್ವತಿ, ಮಹಾತ್ಮಾಗಾಂಧಿ, ಕೆ.ಎಂ.ಮುನ್ಷಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಇತರ ವಿದ್ಯಾವಂತರು ಆ ಕಾಲದಲ್ಲೇ ಹಿಂದಿಯನ್ನು ಒಪ್ಪಿಕೊಂಡು ಪ್ರೋತ್ಸಾಹ ನೀಡಿದರು’ ಎಂದೂ ನೆನಪಿಸಿಕೊಂಡರು.ಪೊಲೀಸ್ ಭಾಷೆಯೂ ಆಗಲಿ:
‘ಹಿಂದಿ ಕೇವಲ ಸಂಭಾಷಣೆಗಷ್ಟೇ ಸೀಮಿತವಾಗಬಾರದು. ಬದಲಿಗೆ ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ, ಪೊಲೀಸರ ಭಾಷೆಯೂ ಆಗಬೇಕು’ ಎಂದೂ ಶಾ ಕರೆಯಿತ್ತರು.‘ಗುಜರಾತ್‌ನಲ್ಲಿ ಗುಜರಾತಿ ಮತ್ತು ಹಿಂದಿ ಜತೆಯಾಗಿ ಅಸ್ತಿತ್ವ ಉಳಿಸಿಕೊಂಡಿರುವುದು ಎರಡೂ ಭಾಷೆಗಳೂ ಜತೆಯಾಗಿ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಅತ್ಯದ್ಭುತ ಉದಾಹರಣೆ. ಹಿಂದಿಯು ಆಡಳಿತ ಭಾಷೆಯಷ್ಟೇ ಆಗಬಾರದು. ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ, ಪೊಲೀಸ್ ಭಾಷೆಯೂ ಆಗಬೇಕು. ಆಗ ಸಾರ್ವಜನಿಕರ ಜತೆಗೆ ಸಂಪರ್ಕ ಸುಲಭವಾಗುತ್ತದೆ. ಸಂಸ್ಕೃತವು ನಮಗೆ ಜ್ಞಾನದ ಗಂಗೆಯನ್ನೇ ನೀಡಿದ್ದರೆ, ಹಿಂದಿಯು ಈ ಜ್ಞಾನವನ್ನು ಮನೆಗೆ ಹರಿಸಿತು. ಸ್ಥಳೀಯ ಭಾಷೆಗಳು ಜ್ಞಾನವನ್ನು ಪ್ರತಿ ವ್ಯಕ್ತಿಗೂ ತಲುಪಿಸಿದವು’ ಎಂದು ಹೇಳಿದರು.
‘ಮಕ್ಕಳ ಭವಿಷ್ಯಕ್ಕೆ ಪೋಷಕರು ಅವರ ಜತೆಗೆ ಮಾತೃಭಾಷೆಯಲ್ಲೇ ಮಾತನಾಡುವುದು ಉತ್ತಮ. ಮನೋವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಕೂಡ ಮಕ್ಕಳು ತಮ್ಮ ಮಾತೃಭಾಷೆಯಲ್ಲೇ ಯೋಚನೆ ಮಾಡುತ್ತಾರೆ ಎಂದಿದ್ದಾರೆ. ನೀವು ಬೇರೆ ಭಾಷೆಯನ್ನು ಅವರ ಮೇಲೆ ಹೇರಲು ಮುಂದಾದಾಗ ಮಕ್ಕಳ ಶೇ.25ರಿಂದ ಶೇ.30ರಷ್ಟು ಸಾಮರ್ಥ್ಯವು ಅದನ್ನು ಭಾಷಾಂತರ ಮಾಡುವುದಕ್ಕೇ ವಿನಿಯೋಗವಾಗುತ್ತದೆ’ ಎಂದು ಶಾ ಹೇಳಿದರು.