ನವದೆಹಲಿ: ದೇಶವನ್ನು ಮುಂದಿನ ಮಾ.31ರ ಒಳಗಾಗಿ ನಕ್ಸಲ್ ಮುಕ್ತವಾಗಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರೆದಿದ್ದು, ಛತ್ತೀಸಗಢ-ತೆಲಂಗಾಣದ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟದ ಸುತ್ತಲಿರುವ ದಟ್ಟಾರಣ್ಯದಲ್ಲಿ 21(ಏ.21ರಿಂದ) ದಿನಗಳ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಈ ಬಗ್ಗೆ ಸಿಆರ್‌ಪಿಎಫ್ ಮತ್ತು ಛತ್ತೀಸಗಢ ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ‘ಇದು ಮಾವೋವಾದಿಗಳ ಅಂತ್ಯದ ಆರಂಭವಾಗಿದೆ. ಈಗಾಗಲೇ 31 ನಕ್ಸಲರ ದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, 28 ಜನರ ಗುರುತು ಪತ್ತೆಯಾಗಿದೆ. ಹತ ನಕ್ಸಲರ ತಲೆಗೆ 1.72 ಕೋಟಿ ರು. ಬಹುಮಾನ ಘೋಷಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ. ಎನ್‌ಕೌಟರ್ ವೇಳೆ ಹಿರಿಯ ನಕ್ಸಲ್ ನಾಯಕರು ಸತ್ತಿರಬಹುದು ಇಲ್ಲವೇ ಗಂಭೀರವಾಗಿ ಗಾಯಗೊಂಡಿರಬಹುದು ಎನ್ನಲಾಗಿದೆ.
ಅಂತೆಯೇ, ಪಡೆಗಳು ಸ್ವಯಂಚಾಲಿತ, ಅರೆಸ್ವಯಂಚಾಲಿತ ಮತ್ತು ದೇಶೀಯ ಶಸ್ತ್ರಾಸ್ತ್ರ, 35 ಆಯುಧ, ಭಾರಿ ಪ್ರಮಾಣದ ಮದ್ದುಗುಂಡು, ಔಷಧಿ, ಎಲೆಕ್ಟ್ರಿಕ್ ಉಪಕರಣ, ನಕ್ಸಲ್ ಸಾಹಿತ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ, ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿದ್ದ 4 ತಾಂತ್ರಿಕ ಘಟಕಗಳನ್ನು ನಾಶಪಡಿಸಲಾಗಿದೆ.
ಸಚಿವ ಶಾ ಮೆಚ್ಚುಗೆ:
ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ‘ಭದ್ರತಾ ಪಡೆಗಳ ಐತಿಹಾಸಿಕ ಸಾಧನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಕ್ಸಲರ ಕೆಂಪು ಬಾವುಟ ಹಾರುತ್ತಿದ್ದ ಬೆಟ್ಟದ ಮೇಲೆ ಇಂದು ತ್ರಿವರ್ಣ ಧ್ವಜ ಹಾರುತ್ತಿದೆ. ಕಾರ್ಯಾಚರಣೆ ವೇಳೆ ನಮ್ಮ ಯಾವ ಸಿಬ್ಬಂದಿಯೂ ಸಾವನ್ನಪ್ಪಿಲ್ಲ. 2026ರ ಮಾ.31ರ ವೇಳೆಗೆ ಭಾರತ ನಕ್ಸಲ್ ಮುಕ್ತವಾಗುವುದು ಖಚಿತ ಎಂದು ನಾನು ಮತ್ತೊಮ್ಮೆ ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ’ ಎಂದಿದ್ದು, ಭದ್ರತಾಪಡೆಗಳ ಕಾರ್ಯವನ್ನು ಪ್ರಶಂಸಿಸಿದ್ದಾರೆ.
ಭದ್ರತಾ ಪಡೆಗಳೆದುರು 2024ರಲ್ಲಿ 928 ಮತ್ತು ಈ ವರ್ಷ 718 ಮಾವೋವಾದಿಗಳು ಶರಣಾಗಿದ್ದಾರೆ.