ರಾಹುಲ್‌ ಗಾಂಧಿ ಜಾತಿ ಜನಗಣತಿ ಪರ ಮಾಡುತ್ತಿರುವ ವಕಾಲತ್ತು ಇದೀಗ ತೆಲಂಗಾಣದಲ್ಲಿ ಪಕ್ಷಕ್ಕೇ ಮುಳುವಾಗುವ ಲಕ್ಷಣ

KannadaprabhaNewsNetwork |  
Published : Feb 07, 2025, 02:02 AM ISTUpdated : Feb 07, 2025, 05:23 AM IST
Revanth Reddy

ಸಾರಾಂಶ

‘ಜಿತ್ನಿ ಆಬಾದಿ ಉತ್ನಿ ಹಕ್‌ ’ (ಜನಸಂಖ್ಯೆ ಎಷ್ಟಿದೆಯೋ ಅಷ್ಟು ಅಧಿಕಾರ) ಘೋಷಣೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಾತಿ ಜನಗಣತಿ ಪರ ಮಾಡುತ್ತಿರುವ ವಕಾಲತ್ತು ಇದೀಗ ತೆಲಂಗಾಣದಲ್ಲಿ ಪಕ್ಷಕ್ಕೇ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ

 ಹೈದರಾಬಾದ್‌: ‘ಜಿತ್ನಿ ಆಬಾದಿ ಉತ್ನಿ ಹಕ್‌ ’ (ಜನಸಂಖ್ಯೆ ಎಷ್ಟಿದೆಯೋ ಅಷ್ಟು ಅಧಿಕಾರ) ಘೋಷಣೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಾತಿ ಜನಗಣತಿ ಪರ ಮಾಡುತ್ತಿರುವ ವಕಾಲತ್ತು ಇದೀಗ ತೆಲಂಗಾಣದಲ್ಲಿ ಪಕ್ಷಕ್ಕೇ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕರ್ನಾಟಕದ ರೀತಿ ತೆಲಂಗಾಣದ ಕಾಂಗ್ರೆಸ್‌ ಸರ್ಕಾರ ನಡೆಸಿದ ಜಾತಿಗಣತಿ ವರದಿ ಇದೀಗ ಬಹಿರಂಗವಾಗಿದ್ದು, ಒಬಿಸಿ ಸಮುದಾಯದವರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.46ರಷ್ಟಿರುವುದು ಬೆಳಕಿಗೆ ಬಂದಿದೆ. ಇದರಿಂದ ಸದ್ಯದಲ್ಲೇ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಶೇ.42ರಷ್ಟು ಮೀಸಲಾತಿ ನೀಡುವಂತೆ ಒಬಿಸಿ ಮುಖಂಡರು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಒಂದು ವೇಳೆ ಜಾತಿ ಆಧರಿಸಿ ಚುನಾವಣೆಯಲ್ಲಿ ಟಿಕೆಟ್‌ ನೀಡಿದರೆ ಅದು ಪಕ್ಷದ ಇತರೆ ಸಮುದಾಯದಲ್ಲಿ ದೊಡ್ಡಮಟ್ಟಿನ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ಒಬಿಸಿ ನಾಯಕರು ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಮೀಸಲು ಕೇಳಿದ್ದಾರೆ. ಮುಂದೆ ಇದು ವಿಧಾನಸಭೆ ಮತ್ತು ಸಂಸತ್‌ ಚುನಾವಣೆಗೂ ವಿಸ್ತರಣೆಯಾದರೆ ಕಾಂಗ್ರೆಸ್‌ ಪಾಲಿಗೆ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಒಬಿಸಿ ಜೊತೆಗೆ ಎಸ್‌ಸಿ, ಎಸ್ಟಿ ಸಮುದಾಯದಿಂದಲೂ ಇದೇ ರೀತಿಯ ಬೇಡಿಕೆ ಏನಾದರೂ ವ್ಯಕ್ತವಾದರೆ ಅದು ಸಮಸ್ಯೆಯನ್ನು ಉಲ್ಬಣಿಸುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

ಹೀಗಾಗಿ ಒಬಿಸಿ ಮುಖಂಡರ ಈ ಬೇಡಿಕೆ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ನೇತೃತ್ವದ ತೆಲಂಗಾಣ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಂಥ ಬೇಡಿಕೆಗೆ ಪಕ್ಷದೊಳಗಿನ ಮುಖಂಡರಿಂದಲೇ ಬೇಡಿಕೆ ಬಂದಿರುವುದು ಹೊಸ ತಲೆನೋವು ತಂದಿಡುವ ಸಾಧ್ಯತೆ ಇದೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಕೂಡ ಇದೇ ರೀತಿ ಜಾತಿ ಗಣತಿ ಮಾಡಿದ್ದರೂ ಈವರೆಗೆ ಅದು ಬಹಿರಂಗವಾಗಿಲ್ಲ. ಪಕ್ಷದೊಳಗೇ ಜಾತಿಗಣತಿಗೆ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಈ ವರದಿ ಮಂಡಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ.

ಒಬಿಸಿಗಳ ಸಂಖ್ಯೆ ಹೆಚ್ಚು:

ತೆಲಂಗಾಣದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿ ಸರ್ವೆ(ಜಾತಿಗಣತಿ)ಯ ಪ್ರಕಾರ ಮುಸ್ಲಿಂ ಹಿಂದುಳಿದ ವರ್ಗಗಳನ್ನು ಹೊರತುಪಡಿಸಿ ಒಟ್ಟಾರೆ ಒಬಿಸಿ ಸಮುದಾಯದವರ ಪ್ರಮಾಣ ರಾಜ್ಯದ ಜನಸಂಖ್ಯೆಯ ಶೇ.46.25ರಷ್ಟಿದೆ. ಅಂದರೆ ಅತಿದೊಡ್ಡ ಸಮುದಾಯವಾಗಿ ಒಬಿಸಿ ಹೊರಹೊಮ್ಮಿದೆ. ಎಸ್ಸಿ ಶೇ.17.43, ಎಸ್‌ಟಿ ಶೇ.10.45 ಮತ್ತು ಮುಸ್ಲಿಂ ಹಿಂದುಳಿದ ವರ್ಗದವರು ಶೇ.10.08ರಷ್ಟಿದ್ದಾರೆ.

ಸದ್ಯ ತೆಲಂಗಾಣದಲ್ಲಿ ಹಿಂದುಳಿದ ವರ್ಗದವರಿಗೆ ಶೇ.23ರಷ್ಟು ಮೀಸಲಾತಿ ನೀಡಲಾಗುತ್ತಿದೆ.

PREV

Recommended Stories

ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
ಉದಯಗಿರಿ, ಹಿಮಗಿರಿ ಸ್ಟೆಲ್ತ್‌ ನೌಕೆ ನೌಕಾಪಡೆ ಬತ್ತಳಿಕೆಗೆ