ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ 7 ವರ್ಷಗಳಿಂದ ಭಾರತದ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕದೇ ತಪ್ಪಿಸಿಕೊಳ್ಳುತ್ತಿದ್ದ ಮೇಹುಲ್ ಚೋಕ್ಸಿ ಕೊನೆಗೂ ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾಗಿದ್ದಾನೆ.
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ 7 ವರ್ಷಗಳಿಂದ ಭಾರತದ ತನಿಖಾ ಸಂಸ್ಥೆಗಳ ಕೈಗೆ ಸಿಕ್ಕದೇ ತಪ್ಪಿಸಿಕೊಳ್ಳುತ್ತಿದ್ದ ಮೇಹುಲ್ ಚೋಕ್ಸಿ ಕೊನೆಗೂ ಬೆಲ್ಜಿಯಂನಲ್ಲಿ ಬಂಧನಕ್ಕೊಳಗಾಗಿದ್ದಾನೆ. ಕಳೆದ 7 ವರ್ಷದಲ್ಲಿ ಈತ ಆಶ್ರಯ ಕೋರಿ ಹಲವು ದೇಶಗಳನ್ನು ಸುತ್ತಾಡಿ ಕೊನೆಗೆ ಎಲ್ಲಿಯೂ ಸರಿಯಾಗಿ ಆಶ್ರಯ ಸಿಗದೇ ಇದೀಗ ಸ್ವಿಜರ್ಲೆಂಡ್‌ಗೆ ಪರಾರಿ ಯತ್ನದ ವೇಳೆ ಸಿಕ್ಕಿಬಿದ್ದಿದ್ದಾನೆ.
ಸಂಚಾರಿ ವಂಚಕ:
ಪಿಎನ್‌ಬಿಗೆ 13000 ಕೋಟಿ ರು. ವಂಚಿಸಿದ್ದ ಚೋಕ್ಸಿ 2018ರಲ್ಲಿ ಭಾರತದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಮುನ್ನವೇ ಅಮೆರಿಕಗೆ ಪರಾರಿಯಾಗಿದ್ದ. ಆ ಬಳಿಕ ಆ್ಯಂಟಿಗುವಾಗೆ ಹೋಗಿ ಅಲ್ಲಿ ಹೂಡಿಕೆ ಕಾರ್ಯಕ್ರಮದ ಪೌರತ್ವ ಪಡೆದಿದ್ದ. ಚೋಕ್ಸಿಯ ಈ ಪೌರತ್ವ ಆತನನ್ನು ಭಾರತಕ್ಕೆ ಕರೆ ತರುವ ಪ್ರಯತ್ನಗಳಿಗೆ ಹಿನ್ನಡೆಯಾಯಿತು.
ಈ ನಡುವೆ ಕ್ಯೂಬಾಗೆ ಪಲಾಯನಕ್ಕೆ ಮುಂದಾಗಿದ್ದಾಗ ಆತನನ್ನು ಡೊಮಿನಿಕ್‌ನಲ್ಲಿ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತ ಹಸ್ತಾಂತರಕ್ಕೆ ವಿನಂತಿಸಿದರೂ ಡೊಮಿನಿಕ್ ನ್ಯಾಯಾಲಯ ಆ್ಯಂಟಿಗುವಾ ವಾಪಸ್ ಕಳುಹಿಸಿತು. ಅಲ್ಲಿಂದ ಚಿಕಿತ್ಸೆಯ ಕಾರಣ ನೀಡಿ ಚೋಕ್ಸಿ ಬೆಲ್ಜಿಯಂಗೆ ಕಾಲ್ಕಿತ್ತಿದ್ದ.
ನಕಲಿ ದಾಖಲೆ ಸೃಷ್ಟಿ:
ಚೋಕ್ಸಿ ಪತ್ನಿ ಬೆಲ್ಜಿಯಂ ಪ್ರಜೆ. ಸಂಬಂಧಿಗಳು ಕೂಡ ಅಲ್ಲಿದ್ದಾರೆ. ಹಾಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಳೆದ ನ.15ರಂದು ಬೆಲ್ಜಿಯಂನಿಂದ ಎಫ್ ರೆಸಿಡೆನ್ಸಿ ಕಾರ್ಡ್ ಪಡೆದಿದ್ದ. ವೈದ್ಯಕೀಯ ಚಿಕಿತ್ಸೆ, ಮಾನವೀಯ ಕಾರಣಗಳನ್ನು ಉಲ್ಲೇಖಿಸಿ ಬೆಲ್ಜಿಯಂ ಸರ್ಕಾರದ ದಾರಿ ತಪ್ಪಿಸಿದ್ದರು. ಹೀಗಿದ್ದರೂ ಚೋಕ್ಸಿ ತಮ್ಮ ಭಾರತ ಮತ್ತು ಆ್ಯಂಟಿಗುವಾದ ಪೌರತ್ವ ತ್ಯಜಿಸಿರಲಿಲ್ಲ. ಈ ನಡುವೆ ರೆಸಿಡೆನ್ಸಿ ಕಾರ್ಡ್ ಅಪ್‌ಗ್ರೇಡ್‌ಗೆ ಮುಂದಾಗಿದ್ದ.
ಕೇವಲ ಎಫ್ ರೆಸಿಡೆನ್ಸಿ ಕಾರ್ಡ್ ಪಡೆದಿದ್ದರೆ ಆತನ ಹಸ್ತಾಂತರ ಪ್ರಕ್ರಿಯೆ ಸುಲಭ. ಎಫ್+ ಪಡೆದರೆ ಅದು ಕಷ್ಟ. ಹೀಗಾಗಿ ಚೋಕ್ಸಿ ಪತ್ತೆಗೆ ಪಟ್ಟು ಬಿಡದೇ ಪ್ರಯತ್ನಿಸಿದ್ದ ಭಾರತ ಚೋಕ್ಸಿಯ ವಂಚನೆ ಬಗ್ಗೆ ಬೆಲ್ಜಿಯಂ ಸರ್ಕಾರದ ಬಳಿ ವಿವರ ಸಮೇತ ಹಂಚಿಕೊಂಡು ಆ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು
ಈ ನಡುವೆಯೇ ಚೋಕ್ಸಿ ಬೆಲ್ಜಿಯಂನಿಂದ ಪರಾರಿಯಾಗಲೂ ಪ್ಲ್ಯಾನ್ ರೂಪಿಸಿದ್ದನು. ಸ್ವಿಜರ್ಲೆಂಡ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಅರ್ಜಿ ಸಲ್ಲಿಸಿ ಅಲ್ಲಿ ಬಹುತೇಕ ಪ್ರವೇಶ ಪಡೆದಿದ್ದ. ಈ ನಡುವೆ ರಹಸ್ಯ ಕಾರ್ಯಾಚರಣೆ ಮೂಲಕ ಈ ವಿಚಾರದ ಮಾಹಿತಿ ಪಡೆದಿದ್ದ ಸಿಬಿಐ ಮತ್ತು ಇ.ಡಿ ಅಧಿಕಾರಿಗಳು ಈ ವಿಚಾರವನ್ನು ಬೆಲ್ಜಿಯಂ ಸರ್ಕಾರಕ್ಕೆ ಮುಟ್ಟಿಸಿದ್ದರು. ಇನ್ನೇನೂ ಚೋಕ್ಸಿ ಸ್ವಿಜರ್ಲೆಂಡ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆ ಮೇರೆಗೆ ಬೆಲ್ಜಿಯಂ ಅಧಿಕಾರಿಗಳು ಬ್ಯಾಂಕ್ ವಂಚಕನನ್ನು ಬಂಧಿಸಿದ್ದಾರೆ.
ಪಿಎನ್‌ಬಿ ಹಗರಣದ ಮಾಸ್ಟರ್‌ಮೈಂಡ್ ನೀರವ್ ಮೋದಿಗೂ ಗಡೀಪಾರು ಭೀತಿ?
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ ನಡೆದ ಬಹುಕೋಟಿ ಹಗರಣದ ಆರೋಪಿ ಮೆಹುಲ್ ಚೌಕ್ಸಿ ಬೆಲ್ಜಿಯಂನಲ್ಲಿ ಬಂಧಿಸಲ್ಪಡುತ್ತಿದ್ದಂತೆ, ಈ ಹಗರಣದ ಮಾಸ್ಟರ್‌ಮೈಂಡ್ ನೀರವ್ ಮೋದಿ ಕುರಿತು ಎಲ್ಲರ ಗಮನ ತಿರುಗಿದೆ.ನೀರವ್ ಮೋದಿ ಪ್ರಸ್ತುತ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಜೈಲಿನಲ್ಲಿದ್ದಾನೆ.
ಭಾರತದ ಗಡೀಪಾರು ಮನವಿಯ ಮೇರೆಗೆ ಅವರನ್ನು 2019ರ ಮಾ.19ರಂದು ಬಂಧಿಸಲಾಗಿತ್ತು ಹಾಗೂ ಅಂದು ಗೃಹ ಕಾರ್ಯದರ್ಶಿಯಾಗಿದ್ದ ಪ್ರೀತಿ ಪಟೇಲ್ ಅವರು 2021ರ ಏಪ್ರಿಲ್‌ನಲ್ಲಿ ನೀರವ್ ಗಡೀಪಾರು ಮಾಡುವಂತೆ ಆದೇಶಿಸಿದ್ದರು. ಆದರೆ ಭಾರತಕ್ಕೆ ತಮ್ಮ ಹಸ್ತಾಂತರವನ್ನು ಪದೇಪದೇ ಪ್ರಶ್ನಿಸುತ್ತ ನೀರವ್ ಕಾನೂನು ಹೋರಾಟವನ್ನು ನಡೆಸುತ್ತಿದ್ದಾರೆ. ಈ ಕುರಿತ ಹಲವು ಮೇಲ್ಮನವಿ ತಿರಸ್ಕೃತವಾಗಿದ್ದು, ನೀಮೋ ಕೂಡಾ ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿದ್ದಾನೆ.