ದೇಶದ 2ನೇ ಅತ್ಯುನ್ನತ ಹುದ್ದೆ ಉಪರಾಷ್ಟ್ರಪತಿ ಆಯ್ಕೆ ಹೇಗೆ?

Published : Sep 09, 2025, 10:02 AM IST
Vice President Election

ಸಾರಾಂಶ

ಜಗದೀಪ್‌ ಧನಕರ್ ದಿಢೀರ್‌ ರಾಜೀನಾಮೆಯಿಂದ ತೆರವಾದ ದೇಶದ 2ನೇ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ (ವಿಪಿ) ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಲಿದೆ.

ಜಗದೀಪ್‌ ಧನಕರ್ ದಿಢೀರ್‌ ರಾಜೀನಾಮೆಯಿಂದ ತೆರವಾದ ದೇಶದ 2ನೇ ಅತ್ಯುನ್ನತ ಹುದ್ದೆಯಾದ ಉಪರಾಷ್ಟ್ರಪತಿ (ವಿಪಿ) ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಲಿದೆ. ಆ ಸ್ಥಾನಕ್ಕೆ ಸ್ಪರ್ಧಿಸುತ್ತಿರುವವರು ಯಾರು? ಅವರನ್ನಾರಿಸುವ ಅಧಿಕಾರವಿರುವುದು ಯಾರಿಗೆ? ಆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.  

ಮತದಾರರು ಯಾರು? 

ದೇಶದ 2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜನಸಾಮಾನ್ಯರ ನೇರ ಪಾತ್ರವಿರುವುದಿಲ್ಲ. ಬದಲಿಗೆ, ಅವರೇ ಆಯ್ಕೆ ಮಾಡಿದ ಸಂಸದರು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ. ಲೋಕಸಭೆಯ 543 ಸಂಸದರು, ರಾಜ್ಯಸಭೆಯ 245 ಸದಸ್ಯರು ಸೇರಿ ಒಟ್ಟು 788 ಸಂಸದರು ಉಪರಾಷ್ಟ್ರಪತಿಗಳನ್ನು ಚುನಾಯಿಸುತ್ತಾರೆ. ಇವರನ್ನೆಲ್ಲಾ ಎಲೆಕ್ಟೋರಲ್‌ ಕಾಲೇಜ್‌ ಎಂದು ಕರೆಯಲಾಗುತ್ತದೆ. ಆದರೆ ಪ್ರಸ್ತುರ ಲೋಕಸಭೆಯಲ್ಲಿ 1 ಮತ್ತು ರಾಜ್ಯಸಭೆಯಲ್ಲಿ 6 ಸೀಟುಗಳು ಖಾಲಿ ಇರುವ ಕಾರಣ, 781 ಸಂಸದರಷ್ಟೇ ಮತ ಚಲಾಯಿಸಲಿದ್ದಾರೆ.

ಹೇಗಿರುತ್ತದೆ ಮತದಾನ? ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ವಿದ್ಯನ್ಮಾನ ಮತಯಂತ್ರ (ಇವಿಎಂ) ಬಳಕೆಯಾಗುತ್ತಿದ್ದರೂ, ಉಪರಾಷ್ಟ್ರಪತಿ ಚುನಾವಣೆ ಸಾಂಪ್ರದಾಯಿಕ ಮತಪತ್ರದ ಮೂಲಕವೇ ನಡೆಯುತ್ತದೆ. ಇದಕ್ಕೆ ಕಾರಣ, ಏಕಕಾಲದಲ್ಲಿ, ಒಂದೇ ಸ್ಥಳದಲ್ಲಿ ಕಡಿಮೆ ಸಂಖ್ಯೆಯ ಮತದಾರರಿರುವುದು. 1974ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಿಯಮಗಳ 8ನೇ ನಿಯಮದ ಪ್ರಕಾರ, ಅರ್ಹ ಸಂಸದರೆಲ್ಲಾ ಸಂಸತ್ತಿನಲ್ಲಿಯೇ ಗೌಪ್ಯ ಮತದಾನ ಮಾಡುತ್ತಾರೆ. ವಿಪ್ ಜಾರಿಯಾಗಿರದ ಕಾರಣ, ಸಂಸದರು ಯಾವ ಅಭ್ಯರ್ಥಿಗೆ ಬೇಕಾರದೂ ಮತ ನೀಡಬಹುದು. ಸಂಸದರಿಗೆ ಇಬ್ಬರೂ ಅಭ್ಯರ್ಥಿಗಳ ಹೆಸರಿರುವ ಬ್ಯಾಲೆಟ್‌ ಪೇಪರ್‌ ನೀಡಲಾಗುವುದು. ಅವರು ತಮ್ಮಿಷ್ಟದವರ ಹೆಸರಿನ ಎದುರು 1 ಎಂದು ಬರೆಯುವ ಮೂಲಕ ಮತ ಚಲಾಯಿಸುತ್ತಾರೆ.

ಮತ ಎಣಿಕೆ, ಫಲಿತಾಂಶ ಘೋಷಣೆ ಎಲ್ಲಿ, ಹೇಗೆ?: ಆಡಳಿತ ಪಕ್ಷ ಮತ್ತು ವಿಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಸರಳ ಬಹುಮತ ಪಡೆದವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಾರೆ. ಅಂದರೆ, ವಿಜಯಿಯಾಗಲು ಕನಿಷ್ಠ 391 (ಒಟ್ಟು 781 ಮತಗಳ ಅರ್ಧವಾದ 390+1) ಮತಗಳ ಅಗತ್ಯವಿರುತ್ತದೆ. ಚುನಾವಣೆ ದಿನವೇ ಮತಗಳ ಎಣಿಕೆಯೂ ನಡೆಯುತ್ತದೆ. ವಿಜೇತರ ಘೋಷಣೆ ಆಗುತ್ತದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ವ್ಯತ್ಯಾಸ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಪಟ್ಟಕ್ಕೇರುವವರ ಆಯ್ಕೆಗೂ ಎಲೆಕ್ಟೋರಲ್‌ ಕಾಲೇಜ್‌ನಿಂದ ಮತ ಚಲಾವಣೆಯಾಗುತ್ತದೆ. ಇದರಲ್ಲಿ ಎರಡೂ ಸದನಗಳ ಸಂಸದರು ಮತ್ತು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸಕರಿರುತ್ತಾರೆ. ಇವರು ಚಲಾಯಿಸುವ ಮತದ ಮೌಲ್ಯವು ರಾಜ್ಯದ ಜನಸಂಖ್ಯೆಯನ್ನು ಆಧರಿಸಿರುತ್ತದೆ.

ಇತ್ತ ಉಪರಾಷ್ಟ್ರಪತಿಗಳ ಆಯ್ಕೆಗೆ ಮತ ಚಲಾಯಿಸುವ ಹಕ್ಕು ಶಾಸಕರಿಗೆ ಇರುವುದಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸಂಸದರಷ್ಟೇ ಮತದಾನ ಮಾಡುತ್ತಾರೆ. ಇವರೆಲ್ಲರ ಮತಕ್ಕೆ ಒಂದೇ ಮೌಲ್ಯವಿರುತ್ತದೆ.  

ಅಭ್ಯರ್ಥಿಗಳ ಪರಿಚಯ: ಸಿ.ಪಿ. ರಾಧಾಕೃಷ್ಣನ್‌, ಎನ್‌ಡಿಎ

ಈ ಬಾರಿ ಉಪರಾಷ್ಟ್ರಪತಿ ಅಭ್ಯರ್ಥಿಗಳಾಗಿ ಮುಖಾಮುಖಿಯಾಗಿರುವ ಇಬ್ಬರೂ ದಕ್ಷಿಣ ಭಾರತದವರು ಎಂಬುದು ವಿಶೇಷ. ಎನ್‌ಡಿಎ ಕೂಟದಿಂದ ತಮಿಳುನಾಡಿನವರಾದ ಸಿ.ಪಿ. ರಾಧಾಕೃಷ್ಣನ್‌ (67) ಅವರು ಕಣದಲ್ಲಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಇವರು, ಅಟಲ್‌ ಬಿಹಾರಿ ವಾಜಪೇಯಿ ಅವರ ಅಧಿಕಾರದಲ್ಲಿ ಕೊಯಮತ್ತೂರು ಕ್ಷೇತ್ರದಿಂದ 2 ಬಾರಿ ಲೋಕಸಭಾ ಸಂಸದರಾಗಿದ್ದರು. ಬಳಿಕ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿದ್ದರು.

 ನ್ಯಾ। ಸುದರ್ಶನ ರೆಡ್ಡಿ, ಇಂಡಿಯಾ ಕೂಟ

ಇಂಡಿಯಾ ಕೂಟದ ಜಂಟಿ ಅಭ್ಯರ್ಥಿಯಾಗಿರುವ ತೆಲಂಗಾಣದವರಾದ ನ್ಯಾ। ಸುದರ್ಶನ್‌ ರೆಡ್ಡಿ (79) ಅವರಿಗೆ ರಾಜಕೀಯ ಹಿನ್ನೆಲೆಯೇ ಇಲ್ಲ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಇವರು, 2011ರ ಜುಲೈನಲ್ಲಿ ನಿವೃತ್ತರಾಗಿದ್ದರು. ಕಾಂಗ್ರೆಸ್‌ನಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಕೂಟದಲ್ಲಿ ಭಿನ್ನಮತ ಮೂಡುವ ಸಾಧ್ಯತೆ ಇದ್ದುದರಿಂದ ಯಾವುದೇ ಪಕ್ಷಕ್ಕೆ ಸೇರದ ರೆಡ್ಡಿ ಅವರನ್ನು ಜಂಟಿಯಾಗಿ ಕಣಕ್ಕಿಳಿಸಲಾಗಿದೆ. --

ಗೆಲ್ಲುವ ಕುದುರೆ ಯಾರು?

ಬೆರೆಲ್ಲಾ ಚುನಾವಣೆಗಳಂತೆ, ಉಪರಾಷ್ಟ್ರಪತಿ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ತೀವ್ರ ಹಣಾಹಣಿ, ಅನಿರೀಕ್ಷಿತ ಆಯ್ಕೆ, ಗೆಲುವುಗಳೆಲ್ಲಾ ನೋಡಸಿಗುವುದಿಲ್ಲ. ಕಾರಣ, ಉಭಯ ಸದನಗಳಲ್ಲಿ ಅಧಿಕಾರದಲ್ಲಿರುವ ಮೈತ್ರಿಕೂಟದ ಸಂಸದರ ಪ್ರಾಬಲ್ಯವಿದ್ದು, ಅವರ ಅಭ್ಯರ್ಥಿಯ ಗೆಲುವೇ ಖಚಿತವೆಂಬ ವಾತಾವರಣ ಇರುತ್ತದೆ. ಈ ಬಾರಿಯೂ ಎನ್‌ಡಿಎ ಕೂಟಕ್ಕೆ ಸ್ಪಷ್ಟ ಬಹುಮತವಿದೆ. ಜತೆಗೆ, ವೈಎಸ್‌ಆರ್‌ ಕಾಂಗ್ರೆಸ್‌ನಂತಹ ಸ್ಥಳೀಯ ಪಕ್ಷಗಳಿಂದಲೂ ಬೆಂಬಲವಿದೆ. ಎನ್‌ಡಿಎ ಕೂಟದಿಂದ ಒಟ್ಟು 425 ಸಂಸದರಿದ್ದು, ಸ್ವಾಭಾವಿಕವಾಗಿ ಅವರೆಲ್ಲಾ ಸಿ.ಪಿ. ರಾಧಾಕೃಷ್ಣನ್‌ ಅವರ ಪರವಾಗಿಯೇ ಮತ ಚಲಾಯಿಸುತ್ತಾರೆ.

ಆದರೆ ಇಂಡಿಯಾ ಕೂಟದ ಅಭ್ಯರ್ಥಿ ನ್ಯಾ। ಸುದರ್ಶನ ರೆಡ್ಡಿಗೆ ಬಹುಮತ ಕನಸಾಗಿಯೇ ಉಳಿಯಲಿದೆ ಎನ್ನಲಾಗಿದೆ. ವಿಪಕ್ಷದ ಎಲ್ಲಾ 324 ಮತ ನ್ಯಾ। ರೆಡ್ಡಿ ಅವರ ಪರ ಬಿದ್ದರೂ, ಅತಿಹೆಚ್ಚು ಮತ ಪಡೆದು ಸೋಲುವ ಅಭ್ಯರ್ಥಿ ಎನಿಸಿಕೊಳ್ಳಲಿದ್ದಾರೆ. ಕಳೆದ ಬಾರಿ 2022ರಲ್ಲಿ ಸುಶೀಲ್‌ ಕುಮಾರ್‌ ಶಿಂದೆ ಅವರು 305 ಮತ ಪಡೆದು ಪರಾಜಿತರಾಗಿದ್ದರು. 

ಈ ಹುದ್ದೆಗೇರಿದರೆ ಸಂಬಳವಿಲ್ಲ!:

ದೇಶದ 2ನೇ ಅತ್ಯುನ್ನತ ವ್ಯಕ್ತಿಯಾದ ಉಪರಾಷ್ಟ್ರಪತಿಯಾದವರಿಗೆ ಯಾವುದೇ ಸಂಬಳ ಇರುವುದಿಲ್ಲ. ಭತ್ಯೆ ಮಾತ್ರ ಇರುತ್ತವೆ ಎಂಬುದು ಕೇಳಲು ವಿಚಿತ್ರವೆನಿಸಿದರೂ ನಿಜ. ಉಪರಾಷ್ಟ್ರಪತಿಯಾಗಿರುವವರು ರಾಜ್ಯಸಭೆಯ ಸಭಾಪತಿ ಕೂಡ ಆಗಿದ್ದು, ಸಭಾಪತಿ ಹುದ್ದೆಗೆ ಮಾಸಿಕ 4 ಲಕ್ಷ ರು. ವೇತನ ಪಡೆಯುತ್ತಾರೆ. ಇವರ ಅವಧಿ ಅಧಿಕಾರಕ್ಕೆ ಬಂದಾಗಿನಿಂದ 5 ವರ್ಷ. ನಿವೃತ್ತರಾದ ಬಳಿಕ ಮಾಸಿಕ 2 ಲಕ್ಷ ರು. ಪಿಂಚಣಿ ಸೇರಿದಂತೆ ಕೆಲ ಸೌಲಭ್ಯಗಳು ಸಿಗುತ್ತವೆ. 

14ರಲ್ಲಿ 4 ಮಂದಿ ದಕ್ಷಿಣ ಭಾರತದವರು:

ಸ್ವತಂತ್ರ ಭಾರತವು ಈವರೆಗೆ 14 ಉಪರಾಷ್ಟ್ರಪತಿಗಳನ್ನು ಕಂಡಿದ್ದು, ಅದರಲ್ಲಿ 4 ಮಂದಿ ದಕ್ಷಿಣ ಭಾರತದವರು ಇದ್ದರು. ದೇಶದ ಮೊದಲ ಉಪರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮಿಳುನಾಡಿನವರಾಗಿದ್ದರು. ಕರ್ನಾಟಕದವರಾದ ಬಿ.ಡಿ. ಜತ್ತಿ ರಾಷ್ಟ್ರಪತಿಯಾದವರಲ್ಲಿ 5ನೆಯವರು. 7ನೇ ವಿ.ಪಿ. ಆಗಿದ್ದ ಆರ್‌. ವೆಂಕಟರಾಮನ್‌ ತಮಿಳುನಾಡಿನವರಾದರೆ, 13ನೆಯವರಾದ ವೆಂಕಯ್ಯ ನಾಯ್ಡು ಅವರು ಆಂಧ್ರಪ್ರದೇಶದವರಾಗಿದ್ದಾರೆ. ಕರ್ನಾಟಕದಿಂದ ಏಕೈಕ ಉಪರಾಷ್ಟ್ರಪತಿ ಜತ್ತಿ!

ಈವರೆಗೆ ಕರ್ನಾಟಕದಿಂದ ಉಪರಾಷ್ಟ್ರಪತಿ ಹುದ್ದೆಗೆ ಏರಿದವರಲ್ಲಿ ಬಿ.ಡಿ. ಜತ್ತಿ ಅವರು ಮಾತ್ರವೇ ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ. ಅಂದಿನ ಬಾಂಬೆ ಪ್ರಾಂತ್ಯದಲ್ಲಿದ್ದ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ 1912ರ ಸೆ,10ರಂದು ಬಸಪ್ಪ ದಾನಪ್ಪ ಜತ್ತಿಯವರ ಜನನವಾಯಿತು. ವೃತ್ತಿಯಲ್ಲಿ ವಕೀಲರಾಗಿದ್ದ ಇವರು ಕಾಂಗ್ರೆಸ್‌ ನಾಯಕರಾಗಿದ್ದು, 1956–1958 ಮತ್ತು 1962–1966 ಅವಧಿಯಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಳಿಕ ಹಲವು ರಾಜ್ಯಗಳ ರಾಜ್ಯಪಾಲರಾಗಿದ್ದರು. ನಂತರ 1974ರ ಆ.31ರಿಂದ 1979ರ ಆ.30ರವರೆಗೆ ಉಪರಾಷ್ಟ್ರಪತಿಗಳಾಗಿದ್ದರು. 1977ರಲ್ಲಿ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ನಿಧನರಾಗಿದ್ದರಿಂದ ಹಂಗಾಮಿ ರಾಷ್ಟ್ರಪತಿಯಾಗಿಯೂ ಜತ್ತಿ ಕಾರ್ಯ ನಿರ್ವಹಿಸಿದ್ದರು. -=-=

ನಂಬರ್‌ಗೇಮ್‌

ಒಟ್ಟು ಮತದಾರರು: 782 ಸಂಸದರು (ಲೋಕಸಭೆಯ 543, ರಾಜ್ಯಸಭೆಯ 233 ಚುನಾಯಿತ ಮತ್ತು 12 ನಾಮನಿರ್ದೇಶಿತ)

ಗೆಲ್ಲಲು ಬೇಕಾದ ಮತಗಳು: 392 ಎನ್‌ಡಿಎ ಮೈತ್ರಿಕೂಟದ ಮತಗಳ ಸಂಖ್ಯೆ: 423

ಇಂಡಿಯಾ ಕೂಟದ ನಿರೀಕ್ಷಿತ ಮತಗಳು: 324

PREV
Read more Articles on

Recommended Stories

ಟ್ರಂಪ್‌ಗೆ ಹೆದರಿ ಜಿಎಸ್ಟಿ ಸುಧಾರಣೆ ಮಾಡಿಲ್ಲ : ಸಚಿವೆ ನಿರ್ಮಲಾ
ಕಾಶ್ಮೀರದ ಉಗ್ರರಿಗೆ ಹಣ: ರಾಜ್ಯದಲ್ಲಿ ಎನ್‌ಐಎ ಬೇಟೆ