ಡ್ಯಾನ್ಸ್‌ ಪ್ರಾಕ್ಟಿಸ್‌ ವೇಳೆ ಖ್ಯಾತ ನಟ ಹೃತಿಕ್‌ ರೋಷನ್ ಕಾಲಿಗೆ ಗಾಯ : ಊರು ಗೋಲು ಸಹಾಯ

KannadaprabhaNewsNetwork | Updated : Mar 15 2025, 05:18 AM IST

ಸಾರಾಂಶ

ಖ್ಯಾತ ನಟ ಹೃತಿಕ್‌ ರೋಷನ್‌ ‘ವಾರ್‌-2’ ಚಿತ್ರೀಕರಣದ ವೇಳೆ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡು, ಊರುಗೋಲು ಸಹಾಯದಿಂದ ನಡೆದಾಡುತ್ತಿದ್ದಾರೆ. ನಟ, ನಿರ್ದೇಶಕ ದೇಬ್‌ ಮುಖರ್ಜಿ ಅವರ ಅಂತ್ಯಸಂಸ್ಕಾರದಲ್ಲಿ ಹೃತಿಕ್‌ ಊರುಗೋಲು ಸಹಾಯ ಬಳಸಿ ನಡೆಯುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ.

ಮುಂಬೈ: ಖ್ಯಾತ ನಟ ಹೃತಿಕ್‌ ರೋಷನ್‌ ‘ವಾರ್‌-2’ ಚಿತ್ರೀಕರಣದ ವೇಳೆ ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡು, ಊರುಗೋಲು ಸಹಾಯದಿಂದ ನಡೆದಾಡುತ್ತಿದ್ದಾರೆ. ನಟ, ನಿರ್ದೇಶಕ ದೇಬ್‌ ಮುಖರ್ಜಿ ಅವರ ಅಂತ್ಯಸಂಸ್ಕಾರದಲ್ಲಿ ಹೃತಿಕ್‌ ಊರುಗೋಲು ಸಹಾಯ ಬಳಸಿ ನಡೆಯುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ.

ಹೃತಿಕ್‌ ತಮ್ಮ ಮುಂದಿನ ಚಿತ್ರ ‘ವಾರ್‌-2’ ಚಿತ್ರದ ಹಾಡೊಂದರ ಅಭ್ಯಾಸದ ವೇಳೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಚಿತ್ರೀಕರಣದಿಂದ ಕೊಂಚ ಸಮಯ ವಿರಾಮ ತೆಗೆದುಕೊಂಡಿದ್ದಾರೆ ಎಂದು ಅವರ ಪ್ರತಿನಿಧಿ ಹೇಳಿದ್ದಾರೆ.

ಈ ಚಿತ್ರವನ್ನು ದೇಬ್‌ ಮುಖರ್ಜಿ ಅವರ ಪುತ್ರ ಅಯಾನ್ ಮುಖರ್ಜಿ ಅವರು ನಿರ್ದೇಶಿಸುತ್ತಿದ್ದಾರೆ.

ಖ್ಯಾತ ಬಾಲಿವುಡ್‌ ನಟ, ನಿರ್ದೇಶಕ ದೇಬ್ ಮುಖರ್ಜಿ ನಿಧನ

ಮುಂಬೈ: ಹಿರಿಯ ನಟ, ನಿರ್ದೇಶಕ ದೇಬ್ (83) ಮುಖರ್ಜಿ ಶುಕ್ರವಾರ ಬೆಳಿಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಅವರು ನಿರ್ದೇಶಕ ಅಯಾನ್ ಮುಖರ್ಜಿ ಅವರ ತಂದೆ. ಅವರ ಅಂತ್ಯಕ್ರಿಯೆಯನ್ನು ಮುಂಬೈನ ಉಪನಗರದ ಜುಹುವಿನಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ನಡೆಸಲಾಯಿತು. ಕಾಜೋಲ್, ರಾಣಿ ಮುಖರ್ಜಿ, ಜಯಾ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ದೇಬ್ ಮುಖರ್ಜಿ ‘ತು ಹಿ ಮೇರಿ ಜಿಂದಗಿ’, ‘ಅಭಿನೇತ್ರಿ’, ‘ಕಿಂಗ್ ಅಂಕಲ್’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. 1983ರಲ್ಲಿ ಬಿಡುಗಡೆಯಾದ ‘ಕರಾಟೆ’ ಚಿತ್ರದ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು. 

ಮಾ.24, 25ರಂದು ಬ್ಯಾಂಕ್ ಮುಷ್ಕರ

 ಕೋಲ್ಕತಾ: ವಾರಕ್ಕೆ 5 ದಿನ ಕೆಲಸ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.24 ಮತ್ತು 25ರಂದು 2 ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲಾಗುವುದು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ತಿಳಿಸಿದೆ.

ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಬ್ಯಾಂಕ್‌ಗಳ ಸಂಘ(ಐಬಿಎ)ದೊಂದಿಗೆ ನಡೆದ ಮಾತುಕತೆಗಳು ಯಾವುದೇ ಸಕಾರಾತ್ಮಕ ಫಲಿತಾಂಶ ನೀಡದ ಕಾರಣ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಯುಎಫ್‌ಬಿಯು ಹೇಳಿದೆ.‘ಎಲ್ಲಾ ಕೇಡರ್​ಗಳಲ್ಲಿ ನೇಮಕಾತಿ ಮತ್ತು ವಾರಕ್ಕೆ 5 ದಿನಗಳ ಕೆಲಸ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಐಬಿಎ ಜೊತೆಗಿನ ಸಭೆಯಲ್ಲಿ ಯುಎಫ್​ಬಿಯು ಪ್ರಸ್ತಾಪಿಸಿದೆ. ಆದರೆ ಪ್ರಮುಖ ಸಮಸ್ಯೆಗಳು ಬಗೆಹರಿದಿಲ್ಲ’ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್​ಸಿಬಿಇ) ಪ್ರಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್ ಹೇಳಿದ್ದಾರೆ.

ಬೇಡಿಕೆಗಳೇನು?:

ವಾರಕ್ಕೆ 5 ದಿನಗಳ ಕೆಲಸ ಜಾರಿಗೆ ತರಬೇಕು. ಹಣಕಾಸು ಇಲಾಖೆಯ ಶಿಫಾರಸಿನ ಮೇರೆ ಬಡ್ತಿ, ಪ್ರೋತ್ಸಾಹಧನ ನೀಡಿದರೆ ಅದು ಉದ್ಯೋಗಿಗಳ ಕೆಲಸಕ್ಕೆ ತೊಂದರೆಯಾಗುವ ಭೀತಿಯಿದ್ದು, ಆ ನಿಯಮ ಹಿಂಪಡೆಯಬೇಕು. ಗ್ರಾಚ್ಯುಟಿ ಮಿತಿಯನ್ನು 25 ಲಕ್ಷ ರು.ಗೆ ಹೆಚ್ಚಿಸಲು ಗ್ರಾಚ್ಯುಟಿ ಕಾಯ್ದೆಗೆ ತಿದ್ದುಪಡಿ ತರಬೇಕು. ಸರ್ಕಾರಿ ನೌಕರರಿಗೆ ಇರುವಂತೆ ಸೀಲಿಂಗ್ ಲಿಮಿಟ್ ಅನ್ನು 25 ಲಕ್ಷಕ್ಕೆ ಏರಿಸಬೇಕು. ಜೊತೆಗೆ, ಇದಕ್ಕೆ ತೆರಿಗೆ ವಿನಾಯತಿಯನ್ನೂ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ.

ಎನ್‌ಸಿಪಿ ಶರದ್‌ ಪವಾರ್‌ ಬಣದ ಅಧ್ಯಕ್ಷ ಜಯಂತ್‌ ಅಜಿತ್‌ ಬಣಕ್ಕೆ?

ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ (ಶರದ್‌ ಪವಾರ್‌) ಬಣದ ಅಧ್ಯಕ್ಷ ಜಯಂತ್‌ ಯಾದವ್‌ ಅವರು ಪಕ್ಷದಲ್ಲಿ ಅಸಮಧಾನಗೊಂಡಿದ್ದು, ಶೀಘ್ರದಲ್ಲಿ ಅಜಿತ್‌ ಪವಾರ್‌ ಅವರ ಎನ್‌ಸಿಪಿಗೆ ಹೋಗಲಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಶಿವಸೇನೆಯ ಸಚಿವ ಸಂಜಯ್‌ ಶಿರಸಾಟ್‌ ಮಾತನಾಡಿ, ‘ಜಯಂತ್‌ ಯಾದವ್‌ ಅವರು ಶೀಘ್ರದಲ್ಲಿ ಅಜಿತ್‌ ಬಣಕ್ಕೆ ಸೇರಲಿದ್ದಾರೆ. ಅವರು ಶರದ್‌ ಪವಾರ್ ಬಣದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಮಹಾ ಭೂಕಂಪವೊಂದು ಸಂಭವಿಸಲಿದೆ’ ಎಂದು ಹೇಳಿದ್ದಾರೆ.

ಪಕ್ಷದ ನಾಯಕತ್ವದ ಕುರಿತು ಜಯಂತ್‌ ಹೇಳಿಕೆ ಬೆನ್ನಲ್ಲೇ ಶಿರಸಾಟ್‌ ಈ ಹೇಳಿಕೆ ನೀಡಿದ್ದು, ಆದರೆ ಎನ್‌ಸಿಪಿ (ಶರದ್‌)ನ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಳೆ ಮಾತ್ರ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಹನಿಟ್ರಾಪ್‌ಗೆ ಒಳಗಾಗಿ ಸೇನಾ ಮಾಹಿತಿ ಲೀಕ್‌, ಒಬ್ಬನ ಸೆರೆ

ಲಖನೌ: ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಸೂಕ್ಷ್ಮ ಸೇನಾ ಮಾಹಿತಿಗಳನ್ನು ಕೊಡುತ್ತಿದ್ದ ನೌಕರನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ. ಜೊತೆಗೆ ಈತನ ಸಹಚರನನ್ನು ವಶಕ್ಕೆ ತೆಗೆದುಕೊಂಡಿದೆ.

ಬಂಧಿತ ರವೀಂದ್ರ ಕುಮಾರ್‌, ಕಾರ್ಖಾನೆಯಲ್ಲಿ ಸೂಕ್ಷ್ಮ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ನೇಹಾ ಶರ್ಮಾ ಹಜೆಸರಿನ ಎಂಬ ಫೇಸ್‌ಬುಕ್‌ ಖಾತೆಯ ಮೋಹಕ್ಕೆ ಒಳಗಾಗಿ ಆಕೆಯ ವಾಟ್ಸಾಪ್‌ ಸಂಖ್ಯೆ ಸಹ ಪಡೆದು ಹನಿಟ್ರಾಪ್‍ಗೆ ಬಿದ್ದಿದ್ದ. ತನ್ನ ಸಂಭಾಷಣೆ ಹೊರಗೆ ತಿಳಿಯಬಾರದು ಎಂಬ ಕಾರಣಕ್ಕೆ ಸಂಖ್ಯೆಯನ್ನು ‘ಚಂದನ್‌ ಸ್ಟೋರ್‌ ಕೀಪರ್‌ 2’ ಎಂದು ಸೇವ್‌ ಮಾಡಿದ್ದ. 

ಮಹಿಳೆ ತಾನು ಐಎಸ್‌ಐಗೆ ಕೆಲಸ ಮಾಡುತ್ತಿರುವುದಾಗಿ ಹೇಳಿದರೂ, ಹಣಕ್ಕಾಗಿ ಸೂಕ್ಷ್ಮ ದಾಖಲೆಗಳನ್ನು ಹಂಚಿಕೊಳ್ಳುತ್ತಿದ್ದ.ತನಿಖೆ ವೇಳೆ ರವೀಂದ್ರ ಫೋನ್‌ನಿಂದ ‘ಗೂರ್ಖಾ ರೈಫಲ್ಸ್‌, ಆಯುಧಗಳ ಉತ್ಪಾದನೆ, ಡ್ರೋನ್‌ಗಳ ಸ್ಥಿತಿಗತಿ, ಗಗನಯಾನ ಯೋಜನೆ’ ಸೇರಿ ಸೂಕ್ಷ್ಮ ವಿಷಯಗಳನ್ನು ನೇಹಾ ಜೊತೆಗೆ ಹಂಚಿಕೊಂಡಿರುವುದು ತಿಳಿದುಬಂದಿದೆ. ಇದೇ ವೇಳೆ ಆಗ್ರಾದಲ್ಲಿ ರವೀಂದ್ರನ ಆಪ್ತನನ್ನು ಎಟಿಎಸ್‌ ಬಂಧಿಸಿದೆ.

Share this article