ತಮಿಳ್ನಾಡು ರಾಜಕೀಯದಲ್ಲಿ ಸೆಕ್ಸ್‌ ಹಗರಣ ಸಂಚಲನ

KannadaprabhaNewsNetwork | Published : May 21, 2025 12:13 AM
ಇಪ್ಪತ್ತು ವರ್ಷದ ಯುವತಿಯೊಬ್ಬಳು ತನ್ನ ಪತಿಯೂ ಆದ ಡಿಎಂಕೆ ಯುವ ಮುಖಂಡ ಸೇವಸೇಯಲ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಇದು ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Follow Us

- ರಾಜಕಾರಣಿಗಳಿಗೆ ಯುವತಿಯರ ‘ಸಪ್ಲೈ’

- ಡಿಎಂಕೆ ಯುವ ನಾಯಕನ ಮೇಲೆ ಪತ್ನಿಯಿಂದಲೇ ಆರೋಪ

- ತ.ನಾಡಲ್ಲಿ ರಾಜಕೀಯ ತಿಕ್ಕಾಟ ಸೃಷ್ಟಿಸಿದ ಕೇಸ್‌

----

ಡಿಎಂಕೆ ನಾಯಕನ ಪತ್ನಿ ಹೇಳಿದ್ದೇನು?

- ನನ್ನ ಗಂಡ ರಾಜಕಾರಣಿಗಳಿಗೆ ಹೆಣ್ಣುಮಕ್ಕಳ ಪೂರೈಸ್ತಾನೆ

- ಇನ್ನೊಬ್ಬರ ಜತೆ ಮಲಗುವಂತೆ ಸೂಚಿಸ್ತಾನೆ

- ಆತನಿಗೆ ಶಿಕ್ಷಣ ಸಚಿವನ ಜತೆಗೆ ಲಿಂಕ್‌ ಇದೆ

- ಡಿಎಂಕೆ ಮುಖಂಡನ ವಿರುದ್ಧ ಪತ್ನಿ ಆರೋಪ

----

ಡಿಎಂಕೆಯಿಂದ ನಾಯಕ ವಜಾ

ಸೆಕ್ಸ್‌ ಹಗರಣ ತಮಿಳ್ನಾಡು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗುತ್ತಿದ್ದಂತೆಯೇ, ಹಗರಣದ ಆರೋಪ ಹೊತ್ತಿದ್ದ ಡಿಎಂಕೆ ಯುವ ವಿಭಾಗದ ಉಪ ಕಾರ್ಯದರ್ಶಿ ದೈವಸೇಯಲ್‌ನನ್ನು ಡಿಸಿಎಂ ಉದಯನಿಧಿ ಸ್ಟಾಲಿನ್‌ ಅವರು ಪಕ್ಷದಿಂದ ವಜಾ ಮಾಡಿದ್ದಾರೆ. ಆಡಳಿತಾರೂಢ ಡಿಎಂಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆಗೆ ಕರೆ ನೀಡುವುದಾಗಿ ಎಐಎಡಿಎಂಕೆ ನಾಯಕರು ಹೇಳಿದ್ದರು. ಇದರ ಬೆನ್ನಲ್ಲೇ ಕ್ರಮ ಜರುಗಿಸಲಾಗಿದೆ.

----ಚೆನ್ನೈ: ಇಪ್ಪತ್ತು ವರ್ಷದ ಯುವತಿಯೊಬ್ಬಳು ತನ್ನ ಪತಿಯೂ ಆದ ಡಿಎಂಕೆ ಯುವ ಮುಖಂಡ ಸೇವಸೇಯಲ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಇದು ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಡಿಎಂಕೆ ಯುವ ಮುಖಂಡನೂ ಆಗಿರುವ ತನ್ನ ಗಂಡ 20 ವರ್ಷದ ಯುವತಿಯರನ್ನು ರಾಜಕಾರಣಿಗಳಿಗೆ ಪೂರೈಸುತ್ತಾನೆ. ಇದಕ್ಕೆ ಸಹಕರಿಸದಿದ್ದರೆ ತನ್ನ ಮೇಲೆ ಮೃಗೀಯ ವರ್ತನೆ ತೋರುತ್ತಾನೆ ಎಂದು ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.

ಆರಕ್ಕೋಣಂ ಜಿಲ್ಲೆಯ ಕಾಲೇಜಿಗೆ ಹೋಗುತ್ತಿರುವ ಈ ಯುವತಿಯ ಆರೋಪ ಇದೀಗ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈಕೆಯ ಆರೋಪ ಮುಂದಿಟ್ಟುಕೊಂಡು ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರತಿಪಕ್ಷ ಎಐಎಂಡಿಎಂಕೆ ತೀವ್ರ ಆಕ್ರೋಶ ಹೊರಹಾಕಿದೆ.

ಯುವತಿ ಆರೋಪ ಏನು?:

ತನ್ನ ಪತಿ ದೈವಸೆಯಾಳ್‌ ಡಿಎಂಕೆ ಯುವಘಟಕದ ಉಪ ಕಾರ್ಯದರ್ಶಿಯಾಗಿದ್ದು, ಆತನಿಗೆ 20 ವರ್ಷದ ಯುವತಿಯರನ್ನು ರಾಜಕಾರಣಿಗಳಿಗೆ ಪೂರೈಸುವುದೇ ಕೆಲಸ. ಈವರೆಗೆ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ನಾನು ದೂರು ನೀಡಲು ಮುಂದಾದಾಗ ಹತ್ಯೆ ಬೆದರಿಕೆ ಹಾಕಿದ್ದಾನೆ. ಕಾರಿನಲ್ಲೇ ಹಲ್ಲೆ ನಡೆಸಿದ್ದಾನೆ, ತಾನು ಸೂಚಿಸಿದ ವ್ಯಕ್ತಿಯೊಂದಿಗೆ ಮಲಗುವಂತೆ ಕಿರುಕುಳ ಕೊಡುತ್ತಾನೆ, ನಾನು ಮನೆಬಿಟ್ಟು ಹೊರಬಾರಲಾಗದ, ಪರೀಕ್ಷೆಯನ್ನೂ ಬರೆಯಲಾಗದ ಸ್ಥಿತಿ ಇದೆ. ಒಂದು ವೇಳೆ ಈ ಕುರಿತು ಹೊರಗೆ ಬಾಯ್ಬಿಟ್ಟರೆ ತನ್ನ ಕುಟುಂಬವನ್ನು ಸುಟ್ಟುಹಾಕುವುದಾಗಿಯೂ ಬೆದರಿಕೆ ಹಾಕಿದ್ದಾನೆ. ನನ್ನ ಫೋನ್‌ ಅನ್ನೂ ಒಡೆದು ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಒಂದು ವೇಳೆ ನೀನು ದೂರುಕೊಟ್ಟರೂ ಏನೂ ಆಗುವುದಿಲ್ಲ. ಪೊಲೀಸರು ನನಗೇ ಬೆಂಬಲ ನೀಡಲಿದ್ದಾರೆ ಎಂದು ಹೇಳುತ್ತಾನೆ. ಆತನಿಗೆ ಶಿಕ್ಷಣ ಸಚಿವ ಅನ್ಬಿಲ್‌ ಮಹೇಶ್‌ ಪೊಯ್ಯಾಮೊಝಿ ಜತೆ ಲಿಂಕ್ ಇದೆ ಎಂದೂ ಆರೋಪಿಸಿದ್ದಾಳೆ.

ಈತನ ವಿರುದ್ಧ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ತಿಳಿಸಿದ್ದಾಳೆ.

+++++

ಎಐಎಡಿಎಂಕೆ ತೀವ್ರ ಆಕ್ರೋಶ:

ಈ ಆರೋಪ ಮುಂದಿಟ್ಟುಕೊಂಡು ಪ್ರತಿಪಕ್ಷ ಎಐಎಡಿಎಂಕೆ ಪಕ್ಷವು ಸ್ಟಾಲಿನ್‌ ಸರ್ಕಾರ ವಿರುದ್ಧ ತೀವ್ರ ಕಿಡಿಕಾರಿದೆ. ‘ಪೊಲೀಸರು ಆರಂಭದಲ್ಲಿ ಆರೋಪಿ ರಕ್ಷಣೆಗೆ ಪೊಲೀಸರು ನಿಂತಿದ್ದರು. ಹಿಂದೆ ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಪೊಲ್ಲಾಚಿ ಸೆಕ್ಸ್‌ ಹಗರಣ ಕುರಿತು ಡಿಎಂಕೆ ನಾಯಕರು ಆಗಾಗ ಪ್ರಸ್ತಾಪಿಸುತ್ತಾರೆ. ಆಗ ನಾನು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದೆ. ಆದರೆ ಸ್ಟಾಲಿನ್‌ ಮಾತ್ರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಎಐಎಡಿಎಂಕೆ ಮುಖಂಡ ಪಳನಿಸ್ವಾಮಿ ಕಿಡಿಕಾರಿದ್ದಾರೆ.

ಈ ನಡುವೆ ಡಿಎಂಕೆ ಮಾತ್ರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಿದ್ದಾರೆ ಎಂದು ತಿಳಿಸಿದೆ.