ಅಹಮದಾಬಾದ್: ಅತ್ಯಂತ ಅಪಾಯಕಾರಿ ‘ರೈಸಿನ್’ ಪುಡಿಯಿಂದ ದೇಶಾದ್ಯಂತ ರಾಸಾಯನಿಕ ದಾಳಿ ನಡೆಸುವ ಸಂಚು ರೂಪಿಸಿ ಇಲ್ಲಿ ಬಂಧಿತನಾಗಿರುವ ಓರ್ವ ಶಂಕಿತ ಉಗ್ರ, ದಕ್ಷಿಣ ಭಾರತವನ್ನು ಉತ್ತರದಿಂದ ಪ್ರತ್ಯೇಕಿಸುವ ಯೋಜನೆ ರೂಪಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ವೈದ್ಯನಾಗಿದ್ದ ಹೈದರಾಬಾದ್ ಮೂಲದ ಡಾ। ಅಹ್ಮದ್ ಮೊಹಿಯುದ್ದೀನ್ ಸಯ್ಯದ್ (35) ಇಂತಹ ದುಷ್ಕೃತ್ಯಕ್ಕೆ ಅಣಿಯಾಗಿದ್ದ ಎಂದು ಗುಜರಾತ್ ಉಗ್ರನಿಗ್ರಹ (ಎಟಿಎಸ್) ದಳದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.
‘ಮುಸ್ಲಿಮರ ಮೇಲೆ ಭಾರತದಲ್ಲಿ ಭಾರೀ ದೌರ್ಜನ್ಯವಾಗುತ್ತಿದೆ’ ಎಂದು ಬಿಂಬಿಸುವ ವಿಡಿಯೋ ನೋಡಿದ್ದ ಸಯ್ಯದ್, ‘ಕಾಫಿರರು ಇದರ ವಿರುದ್ಧ ಒಗ್ಗೂಡಬೇಕು’ ಎಂದು ಟೆಲಿಗ್ರಾಂನಲ್ಲಿ ಕರೆ ನೀಡಿದ್ದ. ಇದೇ ವೇಳೆ ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಸಂಘಟನೆಯ ಅಬು ಖದೀಜಾ ಎಂಬಾತನ ಸಂಪರ್ಕಕ್ಕೆ ಬಂದಿದ್ದ ಎಂದು ಎಫ್‌ಐಆರ್‌ನಲ್ಲಿದೆ’ ಎಂದು ಎಟಿಎಸ್ ಮೂಲಗಳು ಹೇಳಿವೆ.
‘ಬಳಿಕ ಖದೀಜಾ ಜತೆ ಮಾತನಾಡಿದ್ದ ಆತ ‘ದಕ್ಷಿಣ ಭಾರತದ ನಿವಾಸಿಯಾಗಿರುವ ನನಗೆ, ಈ ಭಾಗವನ್ನು ದೇಶದಿಂದ ಪ್ರತ್ಯೇಕಿಸುವ ಉದ್ದೇಶವಿದೆ. ಇದಕ್ಕಾಗಿ ಹಣ ಮತ್ತು ಶಸ್ತ್ರಾಸ್ತ್ರಗಳು ಬೇಕು’ ಎಂದು ಕೇಳಿದ್ದ. ಇದಕ್ಕೊಪ್ಪಿದ ಖದೀಜಾ, ಸಯ್ಯದ್‌ನನ್ನು ದಕ್ಷಿಣ ಭಾರತದ ಕಮಾಂಡರ್ ಆಗಿ ನೇಮಿಸಿದ್ದಲ್ಲದೆ, ಭಾರತ ಸರ್ಕಾರದ ವಿರುದ್ಧ ಹೋರಾಡಲು 2 ಕೋಟಿ ರು. ಒದಗಿಸುವ ಭರವಸೆ ನೀಡಿದ್ದ. ಇದರ ಭಾಗವಾಗಿ ಖದೀಜಾ ಸೂಚನೆಯಂತೆ ಅಹಮದಾಬಾದ್‌ಗೆ ಹೋಗಿದ್ದ ಡಾ। ಸಯ್ಯದ್, 1 ಲಕ್ಷ ರು. ಪಡೆದುಕೊಂಡೂ ಬಂದಿದ್ದ’ ಎಂದು ತಿಳಿದುಬಂದಿದೆ.
‘ಉತ್ತರ ಭಾರತದಲ್ಲಿ ಮುಸಲ್ಮಾನರ ವಿರುದ್ಧ ದೌರ್ಜನ್ಯವಾಗುತ್ತಿದೆ. ಇತ್ತ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ. ಆದ್ದರಿಂದ ಎರಡೂ ಕಡೆ ಸಮಸ್ಯೆಗಳಿಎ ಈ ಸಮಸ್ಯೆಗಳಿಗೆ ಪರಿಹಾರವಾಗಿ ದೇಶ ಇಬ್ಭಾಗ ಮಾಡಬೇಕು ಎಂದು ಮೊಹಿಯುದ್ದೀನ್ ಬಯಸಿದ್ದ. ಈ ಮೂಲಕ ಭಾರತದಲ್ಲಿ ಅಸ್ಥಿರತೆ ಸೃಷ್ಟಿಗೆ ಸಂಚು ರೂಪಿಸಿದ್ದ’ ಎಂದು ಮಾಧ್ಯಮ ವರದಿಯೊಂದು ಹೇಳಿದೆ.