ಜೊಹಾನ್ಸ್‌ಬರ್ಗ್: ಮೊದಲ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನ.23ರವರೆಗೆ ನಡೆಯಲಿರುವ ಜಿ-20 ನಾಯಕರ ಶೃಂಗದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಯುತ್ತಿರುವ ಜೋಹಾನ್ಸ್‌ಬರ್ಗ್ ನಗರಕ್ಕೆ ಶುಕ್ರವಾರ ಆಗಮಿಸಿದರು. ಅವರು ವಾಟರ್‌ಲೋಫ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಾಂಸ್ಕೃತಿಕವಾಗಿ ಸ್ವಾಗತ ಕೋರಲಾಯಿತು. ‘ಶೃಂಗದಲ್ಲಿ, ನಮ್ಮ ವಸುದೈವ ಕುಟುಂಬಕಂ ಧ್ಯೇಯದಡಿ ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತೇನೆ’ ಎಂದು ಮೋದಿ ಹೇಳಿದರು. ಶೃಂಗದಲ್ಲಿ ಪ್ರಧಾನಿ ಎಲ್ಲಾ 3 ಅಧಿವೇಶನಗಳಲ್ಲಿ ಮಾತನಾಡಲಿದ್ದಾರೆ.
ಇನ್ನು ಅನ್ಯ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ಆರಂಭಿಸಿದ್ದಾರೆ. ಮೊದಲ ದಿನ ಅವರು ಆಸೀಸ್ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಜತೆ ಮಾತುಕತೆ ನಡೆಸಿದರು. ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸುತ್ತಿಲ್ಲ.
- ಜಿ20 ಉತ್ತರಾಧಿಕಾರತ್ವಕ್ಕೆ ಟ್ರಂಪ್ ಬದಲು ಕಿರಿ ಅಧಿಕಾರಿ ರವಾನೆ- ಕಿರಿಯ ಅಧಿಕಾರಿಗೆ ಬೇಟನ್ ನೀಡಲ್ಲ: ದ.ಆಫ್ರಿಕಾ ತಿರುಗೇಟುಜೋಹಾನ್ಸ್‌ಬರ್ಗ್: ‘ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ’ ಎಂದು ದೂಷಿಸಿ, ಅಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯನ್ನು ಬಹಿಷ್ಕರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಮುಂದಿನ ವರ್ಷ ಸಭೆ ನಮ್ಮಲ್ಲಿ ನಡೆಯುವುದರಿಂದ, ಅದರ ಬೇಟನ್ (ಉತ್ತರಾಧಿಕಾರತ್ವ) ಪಡೆಯಲು ನಮ್ಮ ಕಿರಿಯ ಅಧಿಕಾರಿಯನ್ನು ಕಳಿಸುತ್ತೇವೆ’ ಎಂದಿದ್ದಾರೆ. ಈ ಪ್ರಸ್ತಾವನೆಯನ್ನು ಆಫ್ರಿಕಾ ತಿರಸ್ಕರಿಸಿದೆ.
ಜಿ-20ಯ ಅಧಿಕಾರ ಹಸ್ತಾಂತರದ ಸಂಕೇತವಾಗಿ ಬೇಟನ್ ಪಡೆಯಲು, ಕೀನ್ಯಾದಲ್ಲಿರುವ ಅಮೆರಿಕ ದೂತಾವಾಸದ ಹಂಗಾಮಿ ರಾಯಭಾರಿಯಾಗಿರುವ ಮಾರ್ಕ್ ಡಿಲ್ಲಾರ್ಡ್ ಅವರ ನೇತೃತ್ವದಲ್ಲಿ 8 ಜನರ ತಂಡವನ್ನು ಆಫ್ರಿಕಾಗೆ ಕಳಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಸಿರಿಲ್ ರಾಂಫೋಸಾ ಅವರ ವಕ್ತಾರ, ‘ಹಾಗೆ ಮಾಡಿದರೆ ನಿಯಮದ ಉಲ್ಲಂಘನೆಯಾಗುತ್ತದೆ. ಕಿರಿಯ ಅಧಿಕಾರಿಗಳಿಗೆ ನಾವು ಉತ್ತರಾಧಿಕಾರತ್ವ ನೀಡಲ್ಲ’ ಎಂದಿದ್ದಾರೆ.
ಈ ಮೂಲಕ, ಟ್ರಂಪ್ ಅಥವಾ ಸರ್ಕಾರದ ಉನ್ನತ ಅಧಿಕಾರಿಗಳೇ ಬಂದು ಅದನ್ನು ಸ್ವೀಕರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.