ಬಾಂಗ್ಲಾದಲ್ಲಿ 5.7 ತೀವ್ರತೆಯ ಭೂಕಂಪ : 7 ಸಾವು

KannadaprabhaNewsNetwork |  
Published : Nov 22, 2025, 02:00 AM ISTUpdated : Nov 22, 2025, 04:51 AM IST
bangladesh earthquake

ಸಾರಾಂಶ

ಬಾಂಗ್ಲಾದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಕಂಪನದಿಂದಾಗಿ 7 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಪ. ಬಂಗಾಳದಲ್ಲೂ ಭೂಕಂಪದ ಅನುಭವವಾಗಿದೆ.

ಢಾಕಾ/ಕೋಲ್ಕತಾ: ಬಾಂಗ್ಲಾದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ಕಂಪನದಿಂದಾಗಿ 7 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಪ. ಬಂಗಾಳದಲ್ಲೂ ಭೂಕಂಪದ ಅನುಭವವಾಗಿದೆ.ಸುಮಾರು 10:38ರ ವೇಳೆಗೆ ಢಾಕಾದ ಈಶಾನ್ಯ ಹೊರವಲಯದ ನರಸಿಂಗ್ಡಿ ಎಂಬಲ್ಲಿ 10 ಕಿ.ಮೀ ಕೆಳಗೆ ಕೇಂದ್ರೀಕೃತವಾಗಿ 5.7 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರಿಂದಾಗಿ ಹಲವು ಕಟ್ಟಡಗಳು ಧರಾಶಾಯಿಯಾವೆ.

ಢಾಕಾದಲ್ಲಿ ಹಳೆಯ 5 ಅಂತಸ್ತಿನ ಕಟ್ಟಡ ಉರುಳಿ ಮೂವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ನಾರಾಯಣಗಂಜ್‌ ಎಂಬಲ್ಲಿ ನಾಲ್ವರು ಬಲಿಯಾಗಿದ್ದಾರೆ. ತಾಯಿಯ ಕೈಯಲ್ಲಿದ್ದ ನವಜಾತಿ ಶಿಶುವಿನ ಮೇಲೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ.

ಈ ಬಗ್ಗೆ ಬಾಂಗ್ಲಾ ಭೂಕಂಪ ತಜ್ಞ ಮೆಹದಿ ಅಹ್ಮದ್‌ ಅವರು ಮಾತನಾಡಿ, ‘ಬಾಂಗ್ಲಾದೇಶವು ಸಕ್ರಿಯ ಭೂಪದರಗಳ ಮೇಲಿರುವುದರಿಂದ ಭಾರಿ ಭೂಕಂಪಗಳು ಮುಂದಿವೆ’ ಎಂದು ಎಚ್ಚರಿಸಿದ್ದಾರೆ.

ಬಂಗಾಳ, ಈಶಾನ್ಯದಲ್ಲೂ ಕಂಪನ:

ಬಾಂಗ್ಲಾ ಕಂಪನದ ತೀವ್ರತೆಯು ಭಾರತದಲ್ಲಿಯೂ ಆಗಿವೆ. ಪಶ್ಚಿಮ ಬಂಗಾಳ, ಈಶಾನ್ಯ ಭಾರತದ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಭಾರಿ ಮಳೆ ಸಾಧ್ಯತೆ

ಭುವನೇಶ್ವರ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಶನಿವಾರ ಕಡಿಮೆ ಒತ್ತಡದ ವಾತಾವರಣ ನಿರ್ಮಾಣವಾಗಲುದ್ದು, ನ.24ಕ್ಕೆ ಅದು ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆಯಿದೆ. ಇದು ಒಡಿಶಾ, ಆಂಧ್ರ, ತಮಿಳುನಾಡು ಕರಾವಳಿಗೆ ಮಳೆ ಸುರಿಸಬಹುದು ಎಂದು ಭಾರತೀಯ ಹವಾಮಾನ ತಿಳಿಸಿದೆ.

ನ.22ರಂದು ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ರೂಪುಗೊಳ್ಳುವ ಕಡಿಮೆ ಒತ್ತಡ ವಾತಾವರಣವು ಕ್ರಮೇಣ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನೆಡೆಗೆ ಸಾಗಲಿದೆ. ನ.24ರಂದು ತೀವ್ರಗೊಳ್ಳುವ ಸಾಧ್ಯತೆಯಿದೆ. ಪರಿಣಾಮ ಒಡಿಶಾ ಸೇರಿದಂತೆ ಪೂರ್ವ ಕರಾವಳಿಯಲ್ಲಿ ಕೊಂಚ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಸೈಕ್ಲೋನ್‌ ರೂಪ ಪಡೆದುಕೊಳ್ಳಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಲಾಖೆಯ ನಿರ್ದೇಶಕಿ ಮನೋರಮಾ ಮೋಹಂತಿ, ‘ಮುಂದೆ ತಿಳಿಸಲಾಗುವುದು’ ಎಂದಿದ್ದಾರೆ.

ಮೆಕ್ಸಿಕೋದ ಫಾತಿಮಾ ಬಾಷ್‌ಗೆ ಭುವನ ಸುಂದರಿ ಕಿರೀಟ

ಬ್ಯಾಂಕಾಕ್‌: 2025ನೇ ಸಾಲಿನ ಭುವನ ಸುಂದರಿ (ಮಿಸ್‌ ಯೂನಿವರ್ಸ್‌) ಕಿರೀಟವನ್ನು ಮೆಕ್ಸಿಕೋದ 25 ವರ್ಷದ ಫಾತಿಮಾ ಬಾಷ್ ಫೆರ್ನಾಂಡಿಸ್ ಮುಡಿಗೇರಿಸಿಕೊಂಡಿದ್ದಾರೆ.

ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದ ಭುವನ ಸುಂದರಿ ಸ್ಪರ್ಧೆಯ 74ನೇ ಆವೃತ್ತಿಯಲ್ಲಿ ಅವರು ಈ ಪ್ರಶಸ್ತಿ ಗೆದ್ದರು.

ಭಾರತ ಮೂಲದ ಥಾಯ್ಲೆಂಡ್‌ ಪ್ರಜೆ ಪ್ರವೀಣರ್‌ ಸಿಂಗ್‌ (29) ರನ್ನರ್‌ ಅಪ್‌ ಆಗಿ ಹಾಗೂ ವೆನೆಜುವೆಲಾದ ಸ್ಟೆಫನಿ ಆಡ್ರಿಯಾನಾ ಅಬಾಸಾಲಿ ನಾಸರ್ 3ನೇ ಸ್ಥಾನದಲ್ಲಿ ಹೊರಹೊಮ್ಮಿದರು. ಭಾರತದ ಮಣಿಕಾ ವಿಶ್ವಕರ್ಮ ಟಾಪ್ 30ರಲ್ಲಿ ಸ್ಥಾನ ಪಡೆದು ಟಾಪ್ 12ರ ಬಳಿಕ ಸ್ಪರ್ಧೆಯಿಂದ ನಿರ್ಗಮಿಸಿದರು. ಕೊನೆಯ ಸುತ್ತಿನಲ್ಲಿ 12 ಸ್ಪರ್ಧಿಗಳಿದ್ದರು.

2 ದಶಕದಲ್ಲೇ ಮೊದಲ ಸಲ ಗೃಹ ಸಚಿವ ಹುದ್ದೆ ತ್ಯಜಿಸಿದ ನಿತೀಶ್

 ಪಟನಾ: ಗುರುವಾರ ಬಿಹಾರ ನೂತನ ಸಂಪುಟದ ಖಾತೆಗಳ ಹಂಚಿಕೆ ಆಗಿದ್ದು ಬಿಜೆಪಿ ಮುಖಂಡ ಹಾಗೂ ಡಿಸಿಎಂ ಸಾಮ್ರಾಟ್‌ ಚೌಧರಿ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಗಿದೆ. ಈ ಮೂಲಕ, 2 ದಶಕಗಳ ಬಳಿಕಮೊದಲ ಬಾರಿ ನಿತೀಶ್‌ ಕುಮಾರ್‌ ಗೃಹ ಸಚಿವಗಿರಿ ಬಿಟ್ಟುಕೊಟ್ಟಂತಾಗಿದೆ.2005ರಲ್ಲಿ ಮೊದಲ ಬಾರಿ ಸಿಎಂ ಆದಾಗ ಗೃಹ ಸಚಿವರಾದ ನಿತೀಶ್‌, 2014ರ ಮೇ ವರೆಗೆ ಆ ಹುದ್ದೆಯಲ್ಲಿದ್ದರು. ಬಳಿಕ 2015ರ ಫೆಬ್ರವರಿಯಿಂದ 2025ರ ನವೆಂಬರ್‌ ವರೆಗೆ ಆ ಸಚಿವಾಲಯವನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಈಗ ಅದನ್ನು, ಮಿತ್ರಪಕ್ಷ ಬಿಜೆಪಿಯ ನಾಯಕ ಚೌಧರಿ ಅವರಿಗೆ ನೀಡಿದ್ದಾರೆ.

ಇನ್ನೊಬ್ಬ ಡಿಸಿಎಂ ವಿಜಯ್‌ ಸಿನ್ಹಾಗೆ ಭೂ ಮತ್ತು ಕಂದಾಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಸಂಸ್ಕೃತ ಮೃತಭಾಷೆ: ಉದಯನಿಧಿ ವಿವಾದ 

ಚೆನ್ನೈ: ಸನಾತನ ಧರ್ಮ ಹಾಗೂ ಹಿಂದೂವಿರೋಧಿ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಾಗುವ ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಈ ಬಾರಿ ‘ಸಂಸ್ಕೃತ ಒಂದು ಮೃತಭಾಷೆ’ ಎನ್ನುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ.ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ತಮಿಳು ಭಾಷೆಯ ಅಭಿವೃದ್ಧಿಗೆ ಕೇವಲ 150 ಕೋಟಿ ರು. ಬಿಡುಗಡೆ ಮಾಡಿದೆ. ಆದರೆ ಮೃತಭಾಷೆಯಾದ ಸಂಸ್ಕೃತಕ್ಕೆ 2,400 ಕೋಟಿ ರು. ಕೊಟ್ಟಿದೆ’ ಎಂದು ಟೀಕಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ಆಕ್ರೋಶ:

ಉದಯನಿಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ತಮಿಳಿಸಾಯಿ ಸೌಂದರರಾಜನ್‌, ‘ಯಾವುದೇ ಭಾಷೆಯನ್ನು ಮೃತಭಾಷೆ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ಸಂಸ್ಕೃತವನ್ನು ಇಂದಿಗೂ ದೇಶಾದ್ಯಂತ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಬಳಸುತ್ತಾರೆ. ತಮಿಳು ಭಾಷೆಯಲ್ಲೂ ಸಂಸ್ಕೃತದ ಪ್ರಭಾವವಿದೆ. ನಾಯಕರು ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಮಾತಾಡುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು’ ಎಂದಿದ್ದಾರೆ.

ಈ ಹಿಂದೆ ಸನಾತನ ಧರ್ಮವನ್ನು ಢೆಂಗಿ, ಮಲೇರಿಯಾಕ್ಕೆ ಹೋಲಿಸಿದ್ದ ಉದಯನಿಧಿ, ಅದರ ನಿರ್ಮೂಲನೆಗೆ ಕರೆ ನೀಡಿ ವಿವಾದ ಸೃಷ್ಟಿಸಿದ್ದರು.

ಭಾರತ ಯುದ್ಧ ಮಾಡಲ್ಲ ಎಂಬ ಟ್ರಂಪ್ ಹೇಳಿಕೆ ನಂಬ್ತೇವೆ: ಪಾಕ್‌

ಇಸ್ಲಾಮಾಬಾದ್: ‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದಿಲ್ಲ ಎಂದು ನನಗೆ ಭಾರತ ಭರವಸೆ ನೀಡಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ನಂಬುವುದಾಗಿ ಪಾಕಿಸ್ತಾನ ಶುಕ್ರವಾರ ಹೇಳಿದೆ.

‘ನಾವು ಅಮೆರಿಕ ಅಧ್ಯಕ್ಷರ ಮಾತುಗಳನ್ನು ನಂಬಲರ್ಹವಾಗಿ ಸ್ವೀಕರಿಸುತ್ತೇವೆ’ ಎಂದು ವಿದೇಶಾಂಗ ಕಚೇರಿಯ ವಕ್ತಾರ ತಹೀರ್ ಅಂದ್ರಾಬಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.‘ನಾವು ಯುದ್ಧಕ್ಕೆ ಹೋಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ತಮಗೆ ಕರೆ ಮಾಡಿ ಹೇಳಿದ್ದರು ಎಂದು ಟ್ರಂಪ್ ಬುಧವಾರ ಹೇಳಿಕೊಂಡಿದ್ದರು.

ರುಪಾಯಿ ಮೌಲ್ಯ ₹89ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠ 

ಮುಂಬೈ: ಅಮೆರಿಕದ ಡಾಲರ್‌ ಎದುರು ರುಪಾಯಿ ಭಾರಿ ಕುಸಿತವಾಗಿದ್ದು, ಒಂದೇ ದಿನ 93 ಪೈಸೆ ಕುಸಿದು 89.61ಕ್ಕೆ ತಲುಪಿದೆ.ಜಾಗತಿಕ ಐಟಿ ಷೇರುಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗಿದ್ದರಿಂದ ಮತ್ತು ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ ಭಾರತೀಯ ರುಪಾಯಿ ತೀವ್ರ ಕುಸಿತ ಸಂಭವಿಸಿದೆ.

ವಹಿವಾಟು ಆರಂಭವಾದಾಗ ಅಮೆರಿಕದ ಡಾಲರ್‌ ಎದುರು 88.67ರಲ್ಲಿದ್ದ ರುಪಾಯಿಯು ದಿನದ ಮಧ್ಯದಲ್ಲಿ ಸಾರ್ವಕಾಲಿಕ ಕನಿಷ್ಠವಾದ 89.65ಕ್ಕೆ ತಲುಪಿತು. ಬಳಿಕ ಕೊಂಚ ಚೇತರಿಕೆ ಕಂಡು 89.61ಕ್ಕೆ ತಲುಪಿತು. ಒಟ್ಟಾರೆ 93 ಪೈಸೆ ಕುಸಿಯಿತು. ಈ ಮೊದಲು ಜು.30ರಂದು ಒಂದೇ ದಿನ 89 ಪೈಸೆ ಕುಸಿದಿತ್ತು.ಸೆನ್ಸೆಕ್ಸ್‌ 400 ಅಂಕ ಕುಸಿತ:

ಇದೇ ವೇಳೆ ಸೆನ್ಸೆಕ್ಸ್‌ 400.76 ಅಂಕ ಇಳಿದು 85,231.92ಕ್ಕೆ ಕುಸಿದರೆ, ನಿಫ್ಟಿ 124 ಅಂಕ ಇಳಿದು 26,068.15ಕ್ಕೆ ಪತನವಾಯಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು